ಬೋಟ್ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ

 ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕುಸಿದ ಜೆಟ್ಟಿ ಸ್ಲ್ಯಾಬ್ ದುರಸ್ತಿಯಾಗುವವರೆಗೆ ದೋಣಿ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ ಕಲ್ಪಿಸುವ ಹಾಗೂ ಸ್ಲ್ಯಾಬ್ ಕುಸಿತ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆ ಹಾಗೂ ಜನಸಂಚಾರ ನಿರ್ಬಂಧಿಸುವ ಬಗ್ಗೆ ಮೀನುಗಾರ ಸಂಘಟನೆ ಪ್ರಮುಖರ ಸಭೆಯಲ್ಲಿ ಚರ್ಚಿಸಲಾಗಿದೆ. ಮೀನುಗಾರಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ (ಪ್ರಭಾರ) ಕೆ.ಗಣೇಶ ಹೇಳಿದರು.

ಗಂಗೊಳ್ಳಿ ಮೀನುಗಾರಿಕಾ ಇಲಾಖೆ ಕಚೇರಿಯಲ್ಲಿ ಶನಿವಾರ ಮೀನುಗಾರ ಸಂಘಟನೆ ಪ್ರಮುಖರ ಸಭೆ ಬಳಿಕ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಮೀನುಗಾರಿಕಾ ಬಂದರಿನ 2ನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಸರ್ಕಾರ 1.98 ಕೋಟಿ ರೂ. ಮಂಜೂರು ಮಾಡಿದೆ. ಕುಸಿದು ಬಿದ್ದಿರುವ ಸ್ಲ್ಯಾಬ್ ದುರಸ್ತಿ ಜತೆಗೆ ಅದಕ್ಕೆ ತಾಗಿಕೊಂಡಿರುವ ಸ್ಲ್ಯಾಬ್‌ಗಳನ್ನೂ ದುರಸ್ತಿ ಮಾಡಬೇಕಿರುವುದರಿಂದ ಈ ಅನುದಾನ ಸಾಲದು. ಹೆಚ್ಚಿನ ಅನುದಾನಕ್ಕಾಗಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕೋಸ್ಟಲ್ ಇಂಜಿನಿಯರಿಂಗ್ ಫಾರ್ ಫಿಶರೀಸ್ ಸಂಸ್ಥೆ ನೀಡಿದ ವರದಿಯನ್ವಯ 8.7 ಕೋಟಿ ರೂ. ವೆಚ್ಚದ ಹೊಸ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ಬಳಿಕ ಜೆಟ್ಟಿ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದರು.

ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉದಯಕುಮಾರ್ ಶೆಟ್ಟಿ, ಬಂದರು ಇಲಾಖೆ ಇಂಜಿನಿಯರ್ ವಿಜಯ ಶೆಟ್ಟಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ, ಮೀನುಗಾರಿಕಾ ಇಲಾಖೆಯ ಗೋಪಾಲಕೃಷ್ಣ, ಮೀನುಗಾರ ಸಂಘಟನೆ ಪ್ರಮುಖರಾದ ಕೆ.ನಾಗ ಖಾರ್ವಿ, ರಮೇಶ ಕುಂದರ್, ಭಾಸ್ಕರ ಆರ್ಕಾಟಿ, ಮಂಜುನಾಥ ಖಾರ್ವಿ, ರವಿಶಂಕರ ಖಾರ್ವಿ, ಭಾಸ್ಕರ ಖಾರ್ವಿ, ವಾಸುದೇವ ಶಿಪಾ, ಮೊಯಿದ್ದೀನ್ ಮತ್ತಿತರರಿದ್ದರು.

 ಜೆಟ್ಟಿ ದುರಸ್ತಿಯಾಗುವವರೆಗೆ ಮೀನುಗಾರಿಕೆಗೆ ತೊಂದರೆಯಾಗದಂತೆ ಬಂದರಿನ ಉತ್ತರ ದಿಕ್ಕಿನಲ್ಲಿ ನಿರುಪಯುಕ್ತವಾಗಿರುವ ಜೆಟ್ಟಿಯನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಜೆಟ್ಟಿ ಪ್ರದೇಶದಲ್ಲಿ ಕಲ್ಲು ಹಾಗೂ ಹೂಳು ತುಂಬಿರುವುದರಿಂದ ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಳಿಕ ಜೆಟ್ಟಿ ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುವುದು. ಬಂದರಿನ ದಕ್ಷಿಣ ದಿಕ್ಕಿನಲ್ಲಿರುವ ಜಾಗವನ್ನು 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿ ಆ ಪ್ರದೇಶದಲ್ಲಿ ಮೀನುಗಾರಿಕೆಗೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.
 ಕೆ.ಗಣೇಶ, ಉಡುಪಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ (ಪ್ರಭಾರ)

Leave a Reply

Your email address will not be published. Required fields are marked *