ಮಲೇರಿಯಾ ಮುಕ್ತ ಭಾರತಕ್ಕೆ ಸಹಕರಿಸಿ

ವೈದ್ಯಾಧಿಕಾರಿ ಡಾ.ಎಂ.ಶಿವಾನಂದ ಮನವಿ

ಪಿರಿಯಾಪಟ್ಟಣ : ಮಲೇರಿಯಾ ಮುಕ್ತ ಭಾರತ ಮಾಡಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ದೊಡ್ಡಬೇಲಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಶಿವಾನಂದ ಮನವಿ ಮಾಡಿದರು.
ವಿಶ್ವ ಮಲೇರಿಯಾ ದಿನದ ಅಂಗವಾಗಿ ತಾಲೂಕಿನ ದೊಡ್ಡಬೇಲಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವದಾದ್ಯಂತ ಮಲೇರಿಯಾ ಮುಕ್ತವನ್ನಾಗಿ ಮಾಡುವ ಗುರಿಯೊಂದಿಗೆ ಈ ಬಾರಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಮನೆಗಳಲ್ಲಿ ಶೇಖರಿಸುವ ನೀರಿನ ಕೊಡಗಳನ್ನು ವಾರಕ್ಕೆರಡು ಬಾರಿ ಶುಚಿಗೊಳಿಸುವುದು, ಸಂಜೆ ವೇಳೆ ಮನೆಯಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕುವುದು ಹಾಗೂ ಮೈತುಂಬ ಬಟ್ಟೆ ಹಾಕಿಕೊಳ್ಳುವುದು, ಸೊಳ್ಳೆ ಪರದೆ ಉಪಯೋಗಿಸುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಂ.ವೈ.ಲಲಿತಾ ಮಾತನಾಡಿದರು. ಆರೋಗ್ಯ ನೀರಿಕ್ಷಕ ಜಿ.ವಿ.ಶ್ರೀನಾಥ್ ಅನಾಫಿಲಿಸ್ ಸೊಳ್ಳೆಗಳ ನಿಯಂತ್ರಣ ಮತ್ತು ಮಲೇರಿಯಾ ದಿನ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಈ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿ ಗೀತಾಕುಮಾರಿ, ಕೆ.ಎನ್.ರೋಹಿಣಿ, ಬಿ.ಟಿ.ಶುಭಾ, ಪ್ರಸನ್ನ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಜಾಗೃತಿ ಜಾಥಾ:
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಶ್ವ ಮಲೇರಿಯಾ ದಿನದ ಕುರಿತು ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು ಹಾಗೂ ಕರಪತ್ರಗಳನ್ನು ವಿತರಿಸಿ ಸ್ವಚ್ಛತೆ ಮತ್ತು ಸೊಳ್ಳೆಗಳ ನಿರ್ಮೂಲನೆ ಮಾಡುವ ಕುರಿತು ಅರಿವು ಮೂಡಿಸಲಾಯಿತು.

25001:
ವಿಶ್ವ ಮಲೇರಿಯಾ ದಿನದ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ವೈದ್ಯಾಧಿಕಾರಿ ಡಾ.ಎಂ.ಶಿವಾನಂದ ಚಾಲನೆ ನೀಡಿದರು.