More

    ಪಿರಿಯಾಪಟ್ಟಣದಲ್ಲಿ ಹನುಮ ಉತ್ಸವ

    ಪಿರಿಯಾಪಟ್ಟಣ: ಪಟ್ಟಣದಲ್ಲಿ ಹನುಮ ಜಯಂತಿ ಉತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
    ಪಟ್ಟಣದ ಒಳಕೋಟೆ ಬಡಾವಣೆಯಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ 5 ಗಂಟೆಯಿಂದಲೇ ಹೋಮ ಮತ್ತು ಪೂಜಾ ಕೈಂಕರ್ಯ ಜರುಗಿದವು. ನಂತರ ಹನುಮನ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಕೂರಿಸಿ ಮೆರವಣಿಗೆಗೆ ಸಿದ್ಧಪಡಿಸಲಾಯಿತು. ಬೆಳಗ್ಗೆ 12 ಗಂಟೆಗೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಸಾವಿರಾರು ಜನರ ನಡುವೆ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಜತೆಗೆ 4 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.
    ಸಂಭ್ರಮಿಸಿದ ಯುವಕರು
    ತಾಲೂಕಿನ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರು ಮೆರವಣಿಗೆಯಲ್ಲಿ ಡಿಜೆ ಮತ್ತು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಕೇಸರಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕರು ಬೃಹತ್ ಗಾತ್ರದ ಬಾವುಟಗಳನ್ನು ಹಿಡಿದು ರಸ್ತೆಯಲ್ಲಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಹನುಮನಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಮೆರವಣಿಗೆಯು ನೆಹರು ರಸ್ತೆ, ದೊಡ್ಡ ಬೀದಿ, ನುಗ್ಗೇಹಳ್ಳಿಬೀದಿ, ಪುಷ್ಪಾ ಕಾನ್ವೆಂಟ್ ರಸ್ತೆ ಮೂಲಕ ಗೋಣಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಭಾ ವೇದಿಕೆಯ ಬಳಿ ಆಗಮಿಸಿತು.
    ಡಿಜೆಗೆ ಪೊಲೀಸರ ಅಡ್ಡಿ: ಮೆರವಣಿಗೆಯು ಬಿ.ಎಂ.ರಸ್ತೆ ತಲುಪಿದಾಗ ಡಿಜೆ ಹಾಕಿದ್ದ ವಾಹನ ಕಂಡು ಡಿವೈಎಸ್‌ಪಿ ಸುಂದರ್‌ರಾಜ್, ನಿಮಗೆ ಸಣ್ಣ ಸ್ಪೀಕರ್ ಅಳವಡಿಸಲು ಅನುಮತಿ ನೀಡಲಾಗಿದೆ. ಆದರೆ ಡಿಜೆಗೆ ಅನುಮತಿ ನೀಡಿಲ್ಲ ಎಂದು ವಾಹನ ತಡೆದರು. ಈ ವೇಳೆ ಕೆಲವು ನಿಮಿಷಗಳ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಮೈಸೂರು-ಕೊಡಗು ಸಂಸದ, ಪೊಲೀಸರನ್ನು ಸಮಾಧಾನಪಡಿಸಿ ಡಿಜೆ ವಾಹನ ಮೆರವಣಿಗೆಯಲ್ಲಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
    ಹನುಮ ಉತ್ಸವ ಹಿನ್ನೆಲೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಣ್ಣದ ಬಟ್ಟೆ ಹಾಗೂ ಬಂಟಿಂಗ್ಸ್ ಕಟ್ಟಲಾಗಿತ್ತು. ಯುವಕರು ಕೇಸರಿ ಬಣ್ಣದ ಟೀ-ಶರ್ಟ್ ಧರಿಸಿದ್ದರೆ, ಕೆಲವರು ಕೇಸರಿ ಶಲ್ಯ ಹಾಗೂ ಕೇಸರಿ ರುಮಾಲು ಧರಿಸಿದ್ದರು. ಹೀಗಾಗಿ ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿತ್ತು.
    ಮೆರವಣಿಗೆಯಲ್ಲಿ ಮಾಜಿ ಶಾಸಕ ಎಚ್.ಸಿ.ಬಸವರಾಜು, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ್‌ಬಾಬು ರಾವ್, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಕಾಂಗ್ರೆಸ್ ಮುಖಂಡ ಪ್ರಶಾಂತ್‌ಗೌಡ, ಬಿಜೆಪಿ ಮುಖಂಡರಾದ ಶಶಿಕುಮಾರ್, ಪಿ.ಜೆ.ರವಿ, ಜಿ.ಸಿ.ವಿಕ್ರಂರಾಜ್ ಹಾಜರಿದ್ದರು.
    ಸಮಾರೋಪ: ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಪುಟ್ಟಣ್ಣ ಕಣಗಾಲು ಬಯಲು ರಂಗಮಂದಿರದಲ್ಲಿ ಹನುಮಂತೋತ್ಸವದ ಸಮಾರೋಪ ಸಮಾರಂಭ ಜರುಗಿತು. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಶಿಕುಮಾರ್, ಅಧ್ಯಕ್ಷ ಪ್ರಸಾದ್, ಉಪಾಧ್ಯಕ್ಷ ಕಪಾಲಿ ನಾಗರಾಜ್, ವಕೀಲ ಹರೀಶ್‌ಮತ್ತಿತರರು ಹಾಜರಿದ್ದರು.
    ಮುಖ್ಯಮಂತ್ರಿ ಪುತ್ರ ಸಾಥ್: ಪಿರಿಯಾಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಹನುಮ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಮೆರವಣಿಗೆಯಲ್ಲಿ ಹೋಗುತ್ತಿದ್ದ ತೆರೆದ ಜೀಪು ಏರಿದ ವಿಜಯೇಂದ್ರ, ಮೈಸೂರು-ಕೊಡಗು ಸಂಸದರ ಜತೆ ಸ್ವಲ್ಪ ದೂರ ಸಾಗಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೆಳಗ್ಗೆ 9 ಗಂಟೆಗೆ ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮೈಸೂರಿಗೆ ತೆರಳಿದರು.
    ಪೊಲೀಸ್ ಬಂದೋಬಸ್ತ್: ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಸ್‌ಪಿ ರಿಷ್ಯಂತ್, ಅಡಿಷನಲ್‌ಎಸ್‌ಪಿ ಸ್ನೇಹಾ, ಡಿವೈಎಸ್‌ಪಿ ಸುಂದರ್‌ರಾಜ್, ಸಿಪಿಐ ಬಿ.ಆರ್.ಪ್ರದೀಪ್, ಪಿಎಸ್‌ಐಗಳಾದ ಗಣೇಶ್, ಲೋಕೇಶ್, ಸಿ.ಯು.ಸವಿ ನೇತೃತ್ವದಲ್ಲಿ 5 ಜಿಲ್ಲಾ ಮೀಸಲು ಪಡೆ ಮತ್ತು 1 ಕೆಎಸ್‌ಆರ್‌ಪಿ ವಾಹನ ಸೇರಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts