ಯೋಗವನ್ನು ಸಾಮಾನ್ಯವಾಗಿ ಆರೋಗ್ಯ ಮತ್ತು ಫಿಟ್ನೆಸ್ಗಾಗಿ ಇರುವ ಚಿಕಿತ್ಸೆ ಅಥವಾ ವ್ಯಾಯಾಮ ವ್ಯವಸ್ಥೆ ಎಂದು ಅರ್ಥೈಸಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಯೋಗದ ನೈಸರ್ಗಿಕ ಪರಿಣಾಮಗಳಾಗಿದ್ದರೆ, ಯೋಗದ ಗುರಿಯು ಹೆಚ್ಚು ದೂರಗಾಮಿಯಾಗಿದೆ. ಯೋಗವು ನಿಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಪ್ರಯೋಜನಗಳನ್ನು ಹೊಂದಿದೆ. ನಾವಾಸನ, ನೌಕಾಸನ ಅಥವಾ ದೋಣಿ ಭಂಗಿಯು ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಪರಿಪೂರ್ಣ ಎಂದರೆ ಸಂಪೂರ್ಣ. ಪರಿಪೂರ್ನ ನಾವಾಸನವು ಹುಟ್ಟುಗಳಿರುವ ದೋಣಿಯ ಆಕಾರವನ್ನು ಹೋಲುತ್ತದೆ.

ಆಸನ ಮಾಡುವ ವಿಧಾನ
ಜಮಖಾನವನ್ನು ಹಾಸಿಕೊಳ್ಳಿ. ಅದರ ಮೇಲೆ ಕಾಲುಗಳನ್ನು ನೇರವಾಗಿ ಚಾಚಿ ಕುಳಿತುಕೊಳ್ಳಿ. ಕೈಗಳು ತೊಡೆಯ ಪಕ್ಕದಲ್ಲಿರಲಿ. ಆಮೇಲೆ ಉಸಿರನ್ನು ಬಿಡುತ್ತಾ ತಲೆಯನ್ನು ಮುಂಭಾಗಕ್ಕೆ ಬಾಗಿಸುತ್ತಿರುವಾಗ ಕಾಲುಗಳನ್ನು ನೆಲದಿಂದ ಮೇಲೆತ್ತಿ ಕಬ್ಬಿಣದ ಸಲಾಕೆಯಂತೆ ಬಿಗಿ ಮಾಡಿ ಕೈಗಳನ್ನು ನೆಲದಿಂದ ಮೇಲೆತ್ತಿ ತೊಡೆಗಳ ಪಕ್ಕದಲ್ಲಿ ನೇರವಾಗಿಸಿ. ಕಾಲುಗಳು ತಲೆಯ ಮಟ್ಟಕ್ಕಿಂತ ಮೇಲೆ ಇರಲಿ. ಇಡೀ ದೇಹವನ್ನು ಪೃಷ್ಠದ ಮೇಲೆ ಸಮತೋಲನವಾಗಿರಿಸಿ. ಈ ಸ್ಥಿತಿಯಲ್ಲಿ 20-30 ಸೆಕೆಂಡುಗಳ ಸಾಮಾನ್ಯ ಉಸಿರಾಟದಲ್ಲಿ ನೆಲೆಸಿ, ಆಮೇಲೆ ವಿರಮಿಸಿ. ಈ ಆಸನವನ್ನು ಮೂರು ಬಾರಿ ಅಭ್ಯಾಸ ಮಾಡಿ.
ಪ್ರಯೋಜನ
ನೌಕಾಸನ ಅಥವಾ ದೋಣಿ ಭಂಗಿಯು ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪ್ರಬಲ ಯೋಗಾಸನವಾಗಿದೆ. ಈ ಆಸನವು ಶರೀರದ ಕೇಂದ್ರ ಬಾಗ (ಕೋರ್) ಅನ್ನು ಬಲಪಡಿಸುತ್ತದೆ. ಕಾಲುಗಳನ್ನು ಸದೃಢಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ, ಬೆನ್ನು ಮೂಳೆಯ ನಮ್ಯತೆ (ಕಾರ್ಯಕ್ಷಮತೆ)ಯನ್ನು ಸುಧಾರಿಸುತ್ತದೆ. ನೌಕಾಸನ ಅಥವಾ ದೋಣಿ ಭಂಗಿಯು ಸರಳವಾದ ಅದರೆ ಹೆಚ್ಚು ಪ್ರಯೋಜನಕಾರಿ ಯೋಗಾಸನವಾಗಿದೆ. ಸಂಸ್ಕೃದಲ್ಲಿ ನೌಕಾ ಎಂದರೆ ದೋಣಿ ಮತ್ತು ಆಸನ ಎಂದರೆ ಭಂಗಿ. ಹೆಸರೇ ಸೂಚಿಸುವಂತೆ ನೌಕಾಸನದಲ್ಲಿ ದೇಹವು ದೋಣಿಯ ಆಕಾರ ದಲ್ಲಿದೆ.
ಈ ಆಸನವು ಆಳವಾದ ಕಿಬ್ಬೊಟ್ಟೆಯ ಸ್ನಾಯುಗಳನ್ನು ಉತ್ತಮಗೊಳಿಸುತ್ತದೆ ಮತ್ತು ಸೊಂಟ, ತೊಡೆಗಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಇದು ಜೀರ್ಣಕ್ರಿಯೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಹರ್ನಿಯಾ ಇರುವವರಿಗೆ ಸಹಾಯಕವಾಗುತ್ತದೆ. ನೌಕಾಸನವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮಲಬದ್ಧತೆಯನ್ನು ಗುಣಪಡಿಸುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾಲಿನ ಸ್ನಾಯುಗಳು ಮತ್ತು ತೋಳುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.
ಜೀರ್ಣಕಾರಿ ಅಸ್ವಸ್ಥತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದು ಬೆನ್ನಿನ ಸ್ನಾಯುಗಳಿಗೆ ಒಳ್ಳೆಯದು. ರಕ್ತಪರಿಚಲನೆ ಸುಧಾರಿಸುತ್ತದೆ. ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಉತ್ತೇಜಿಸುತ್ತದೆ. ಪ್ರಾಸ್ಟೇಟ್ ಮತ್ತು ಥೈರಾಯ್ಡ್ ಗ್ರಂಥಿಗಳಿಗೆ ಈ ಭಂಗಿ ಒಳ್ಳೆಯದು. ಹೊಟ್ಟೆಯ ಗ್ಯಾಸ್, ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ. ಹೊಟ್ಟೆಯ ಬೊಜ್ಜು ನೀಗಿಸಲು ಸಹಕಾರಿಯಾಗುತ್ತದೆ ಮತ್ತು ಮೂತ್ರ ದೋಷ ನಿಯಂತ್ರಣವಾಗುತ್ತದೆ. ಹಾಗೂ ಪೃಷ್ಠದ ಭಾಗವು ಬಲಿಷ್ಠವಾಗುತ್ತದೆ. ಮಧುಮೇಹ ಹತೋಟಿಯಾಗಲು ಈ ಆಸನವು ಸಹಕಾರಿಯಾಗಿದೆ.
ಯಾರು ಮಾಡಬಾರದು?
ರಕ್ತದೊತ್ತಡ, ತೀವ್ರ ತಲೆನೋವು, ಮೈಗ್ರೇನ್ ಅಥವಾ ಇತ್ತೀಚಿನ ದಿನಗಳಲ್ಲಿ ನೀವು ಕೆಲವು ದೀರ್ಘಕಾಲದ ಕಾಯಿಲೆಗಳು ಅಥವಾ ಬೆನ್ನುಮೂಳೆಯ ಅಸ್ವಾಸ್ಥ್ಯಗಳಿಂದ ಬಳಲುತ್ತಿದ್ದರೆ ಈ ಯೋಗಾಸನವನ್ನು ಅಭ್ಯಾಸ ಮಾಡಬೇಡಿ. ಅಸ್ತಮಾ ಮತ್ತು ಹೃದಯ ರೋಗಿಗಳಿಗೆ ಈ ಭಂಗಿಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಮತ್ತು ಋತುಚಕ್ರದ ಮೊದಲ ಎರಡು ದಿನಗಳಲ್ಲಿ ಮಹಿಳೆಯರು ದೋಣಿ ಭಂಗಿ ಮಾಡಬಾರದು.
ಈ 9 ಆಹಾರಗಳನ್ನು ತಿಂದರೆ HMPV ವೈರಸ್ನಿಂದ ದೂರ ಉಳಿಯಬಹುದು! ಇಲ್ಲಿದೆ ಉಪಯುಕ್ತ ಮಾಹಿತಿ…