ಹೆಬ್ರಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಥಮ ಹಂತವಾಗಿ ನಗಾರಿ ಗೋಪುರ ಜೀರ್ಣೋದ್ಧಾರ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ, ತೂಗುಮಣಿ ಗಂಟೆ, ಚಿನ್ನದ ನಾಲಗೆ ಸಮರ್ಪಣೆ, ಮುಷ್ಠಿಕಾಣಿಕೆ ಸಮರ್ಪಣೆ ಮತ್ತು ಮಹಾಮೃತ್ಯುಂಜಯ ಯಾಗ ನಡೆಯಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ತಂತ್ರಿಗಳು, ಅರ್ಚಕರು, ಕಾರ್ಯನಿರ್ವಹಣಾಕಾರಿ ಮತ್ತು ಸಿಬ್ಬಂದಿ ವರ್ಗದ ನೇತತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಮುಷ್ಠಿ ಕಾಣಿಕೆ ಸಮರ್ಪಿಸಿದರು. ದೇವಸ್ಥಾನದ ಶಬ್ದದೋಷ ನಿವಾರಣೆಗೆ ತೂಗುಮಣಿ ಗಂಟೆ, ವಾಕ್ ದೋಷ ನಿವಾರಣಾರ್ಥವಾಗಿ ಚಿನ್ನದ ನಾಲಗೆ ಸಮರ್ಪಿಸಲಾಯಿತು.
ಜೀರ್ಣೋದ್ಧಾರ ಹಿನ್ನೆಲೆ ಬೊಬ್ಬರ್ಯ ಸನ್ನಿಧಾನವನ್ನು ಸಂಕೋಚಿಸಿ, ಬಾಲಾಲಯಕ್ಕೆ ಸ್ಥಳಾಂತರಿಸಲಾಯಿತು.
ಕುವಾರಗುರು ತಂತ್ರಿ ಮತ್ತು ಕೆ.ಜಿ.ವಿಟ್ಠಲ ತಂತ್ರಿ ಸಾಮೂಹಿಕ ಪ್ರಾರ್ಥನೆ ವೇಳೆ ಭಕ್ತರನ್ನುದ್ದೇಶಿಸಿ ವಾತನಾಡಿದರು. ಜೀರ್ಣೋದ್ಧಾರದ ಮೊದಲ ಹಂತವಾಗಿ ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇವಸ್ಥಾನದ ಎದುರಿನ ನಗಾರಿ ಗೋಪುರದ ಪುನರ್ ನಿರ್ವಾಣಕ್ಕೆ ಚಾಲನೆ ದೊರೆಯಿತು.
ವಾಹೆ ಸಹಕುಲಾಪತಿ ಡಾ.ಎಚ್.ಎಸ್.ಬಲ್ಲಾಳ್, ಕಾಪು ತಹಸೀಲ್ದಾರ್ ಪ್ರತಿಭಾ ಆರ್., ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಳಜೆ ಪ್ರಮೋದ ರೈ, ಶಾಂತಾರಾಮ ಸೂಡ, ತಾಂತ್ರಿಕ ಸಲಹೆಗಾರ ಪಕ್ಕಾಲು ಸಂತೋಷ್ ಕುಲಾಲ್, ವ್ಯವಸ್ಥಾಪನಾ ಸಮಿತಿ ಕೃಷ್ಣ ಅಡಿಗ, ರಾಜ್‌ಕುವಾರ್ ಶೆಟ್ಟಿ ದೊಡ್ಮನೆ, ದಿನೇಶ್ ಪೂಜಾರಿ ಗರಡಿಮನೆ, ಸಂತೆಕಟ್ಟೆ ರಾಮದಾಸ ನಾಯ್ಕ, ಲಲಿತಾಂಬಾ ಆನಂದ ಗೌಡ, ರಾಮ ಕುಲಾಲ್ ಪಕ್ಕಾಲು, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಶಾಂತಾ ಆರ್.ಶೆಟ್ಟಿ, ನಾನಾ ಗುತ್ತುಮನೆಗಳ ಪ್ರಮುಖರಿದ್ದರು.