ಕಾವೇರಿಗೆ ಹೊರೆಯಾದ ಪ್ರೊರೇಟಾ

| ಡಿ.ಎಸ್. ವೆಂಕಟಾಚಲಪತಿ ಯಲಹಂಕ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಪೈಕಿ 29 ಹಳ್ಳಿಗಳಿಗೆ ಸೇವೆ ವಿಸ್ತರಿಸಿಕೊಂಡಿರುವ ಜಲಮಂಡಳಿ, ಕಾವೇರಿ ಸಂಪರ್ಕ ನೀಡುವ ಮುನ್ನ ದುಬಾರಿ ದಮಾಷು ಶುಲ್ಕ (ಪ್ರೊರೇಟಾ)ವಿಧಿಸುವಂತೆ ಒತ್ತಡ ಹಾಕುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಕಾವೇರಿ 5ನೇ ಹಂತದ ವಿಸ್ತರಣೆ ನಂತರ 110 ಹಳ್ಳಿಗಳಿಗೆ ಸೇವೆಯನ್ನು ಪೂರ್ಣಪ್ರಮಾಣದಲ್ಲಿ ನೀಡಲು ಮಂಡಳಿ ಸಿದ್ಧತೆಯಲ್ಲಿದೆ. ಆದರೆ, ಕಾವೇರಿ ನೀರು ಪೂರೈಕೆಗೆ ಮುನ್ನ ನೆಲಮಹಡಿ ಸೇರಿ ಎರಡು ಅಂತಸ್ತು ಅಥವಾ ಮೂರು ಅಡುಗೆ ಮನೆ ಇರುವ ಕಟ್ಟಡಗಳು ಕಡ್ಡಾಯವಾಗಿ ಪ್ರೊರೇಟಾ ಪಾವತಿಸಬೇಕೆಂಬ ನಿಯಮ ರೂಪಿಸಿರುವುದು ಮಧ್ಯಮ ವರ್ಗದ ಜನರ ಮೇಲೆ ಬರೆ ಎಳೆದಂತಾಗಿದೆ. 29 ಹಳ್ಳಿಗಳಿಗೆ ಸೇವೆ ವಿಸ್ತರಿಸಿದರೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಂಪರ್ಕಗಳಿಗೆ ಅರ್ಜಿ ಸಲ್ಲಿಕೆಯಾಗಿದೆ. ದುಬಾರಿ ಶುಲ್ಕವನ್ನು ಪಾವತಿಸಿದ ನಂತರವೇ ನೀರು ಎಂಬ ಮಂಡಳಿಯ ನಿಲುವು ಇದಕ್ಕೆ ಕಾರಣ ಎನ್ನಲಾಗಿದೆ.

ಯಲಹಂಕದ ಕೆಂಪೇಗೌಡ ವಾರ್ಡ್ ವ್ಯಾಪ್ತಿಯ ಮಾರುತಿ ನಗರ, ಪಾಪಯ್ಯ ಲೇಔಟ್, ಸಪ್ತಗಿರಿ ಬಡಾವಣೆಗಳಲ್ಲಿ 3 ಸಾವಿರ ಮನೆಗಳಿದ್ದು, ಹೆಚ್ಚಿನವರು ಮಧ್ಯಮ ಮತ್ತು ಬಡವರು. ಈ ಪ್ರದೇಶದಲ್ಲಿ ಜಲಮಂಡಳಿ ಕಾವೇರಿ ನೀರು ಪೂರೈಕೆಯ ಪೈಪ್​ಲೇನ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿ, ನೆಲಮಟ್ಟದ ಜಲಾಗಾರವನ್ನು ಸಿದ್ಧಪಡಿಸುತ್ತಿದೆಯಾದರೂ ಕಾವೇರಿ ಸಂಪರ್ಕ ಪಡೆಯಲು ಯಾರೊಬ್ಬರೂ ಮುಂದಾಗಿಲ್ಲ.

ಈ ಮಧ್ಯೆ ಹತ್ತು ವರ್ಷಗಳ ಹಿಂದೆಯೇ ಸುಜಲಾ ಯೋಜನೆಯಡಿಯಲ್ಲಿ ಕಾವೇರಿ ಪೂರೈಕೆಗಾಗಿ ಜಲಮಂಡಳಿ ಸ್ಥಳೀಯರಿಂದ 5 ರಿಂದ 10 ಸಾವಿರ ರೂ.ವರೆಗೂ ಠೇವಣಿ ಸಂಗ್ರಹಿಸಿತ್ತು. ಈಗ ಕಾವೇರಿ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಹಿಂದೆ ಪಾವತಿಸಿದ ಠೇವಣಿ ಹಣವನ್ನು ಕಡಿತಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕೆಲವರು ಠೇವಣಿ ಪಾವತಿ ಮಾಡಿದ ಬ್ಯಾಂಕ್ ದಾಖಲಾತಿಗಳನ್ನು ನೀಡಿದರೂ, ಜಲಮಂಡಳಿ ಬ್ಯಾಂಕುಗಳಿಂದ ಅಧಿಕೃತ ಪತ್ರ ತರುವಂತೆ ಒತ್ತಾಯಿಸುತ್ತಿರುವುದು ಜನರನ್ನು ಮತ್ತಷ್ಟು ಕೆರಳಿಸಿದೆ.

ಟ್ಯಾಂಕರ್ ಮಾಫಿಯಾ ಪ್ರಭಾವ..! ಕೆಲವು ವಾಲ್​ವ್ಯಾನ್​ಗಳು ಟ್ಯಾಂಕರ್ ನೀರು ಮಾರಾಟಗಾರರ ಆಮಿಷಕ್ಕೆ ಒಳಗಾಗಿ ನೀರು ಸರಬರಾಜು ನಿಲ್ಲಿಸುತ್ತಾರೆ. ಜನರ ಬೇಡಿಕೆಯನ್ನು ಬಂಡವಾಳವಾಗಿಸಿಕೊಂಡು ದಂಧೆ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇನ್ನೊಂದೆಡೆ ಅಕ್ರಮ ಸಂಪರ್ಕಗಳಿಗೆ ಕಡಿವಾಣ ಹಾಕುವುದಾಗಿ ಹೇಳಿ ಮಂಡಳಿ, ವಿಚಕ್ಷಣಾ ದಳಗಳನ್ನು ರಚಿಸಿ ಮೌನಕ್ಕೆ ಶರಣಾಗಿದೆ. ಕಣ್ಣೆದುರೇ ಹಲವು ಪ್ರಕರಣಗಳಿದ್ದರೂ ನಿಯಂತ್ರಿಸುವಲ್ಲಿ ಮಂಡಳಿ ಅಧಿಕಾರಿಗಳು ವಿಫಲವಾಗಿದ್ದಾರೆ.

ಗುತ್ತಿಗೆದಾರರಿಂದಲೂ ಹಣ ವಸೂಲಿ..? ಕೆಲವರು ನೀರಿನ ಸಂಪರ್ಕ ಪಡೆಯಲು ಮುಂದಾಗಿದ್ದರೂ ಇಲ್ಲಿನ ಗುತ್ತಿಗೆದಾರರು ಒಂದು ಸಂಪರ್ಕಕ್ಕೆ 4 ರಿಂದ 5 ಸಾವಿರ ರೂ. ಶುಲ್ಕ ವಿಧಿಸಿರುವುದು ಜನಗಳ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಜಲಮಂಡಳಿಯ ಅಧಿಕಾರಿಗಳ ಖರ್ಚು ವೆಚ್ಚಗಳಿಗೆ ಕೊಡಬೇಕಾಗುತ್ತದೆ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ.

ಪ್ರೊರೇಟಾ ದರ ವಿವರ

ವಸತಿ ಗೃಹಗಳಿಗೆ ಪ್ರತಿ ಚದರ ಮೀಟರ್​ಗೆ 250 ರೂ., ಬಹುಮಹಡಿ ವಸತಿ ಗೃಹಸಮುಚ್ಚಯ, ಕಟ್ಟಡ, ವಾಣಿಜ್ಯ ಕಟ್ಟಡ, ವಿಲಾಸಿ ಬಂಗಲೆ, ವಿಲ್ಲಾಗಳಿಗೆ ಪ್ರತಿ ಚದರ ಮೀಟರ್​ಗೆ 400 ರೂ., ಎಲ್ಲ ವಿಧದ ಗೃಹೇತರ , ವಾಣಿಜ್ಯ ಕಟ್ಟಡಗಳಿಗೆ ಪ್ರತಿ ಚದರ ಮೀಟರ್ ಮೀಟರ್​ಗೆ 600 ರೂ.ಗಳ ದಮಾಷ ಶುಲ್ಕವನ್ನು ವಿಧಿಸಲಾಗುತ್ತಿದೆ. ಪಾವತಿಸದಿರುವವರಿಗೆ ದಂಡ ವಿಧಿಸಲಾಗುತ್ತಿದೆ.

ಪ್ರೊರೇಟಾ ವಿಧಿಸುತ್ತಿರುವುದು ಅವೈಜ್ಞಾನಿಕ. ಇದರಿಂದ ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ನಿಯಮ ಜಾರಿಗೆ ಬರುವ ಮುನ್ನ ನಿರ್ವಣಗೊಂಡಿರುವ ಕಟ್ಟಡಗಳಿಗೂ ನಿಯಮ ಪೂರ್ವಾನ್ವಯಗೊಳ್ಳುವಂತೆ ಮಾಡಿರುವುದು ಸರಿಯಲ್ಲ.

| ಶ್ರೀಕಂಠ ಶಾಸ್ತ್ರಿ, ಮಾರುತಿನಗರ

ಮಾರುತಿನಗರ ಸುತ್ತಮುತ್ತಲೂ ಅಂತರ್ಜಲ ಅಪಾಯಕಾರಿಮಟ್ಟಕ್ಕೆ ತಲುಪಿದೆ. ಇರುವ ಬೋರ್​ವೆಲ್​ಗಳು ಸಹ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ನೀರು ಪೂರೈಕೆ ಅನಿವಾರ್ಯವಾಗಲಿದೆ. ಕಾವೇರಿ ಸಂಪರ್ಕ ಪಡೆಯುವುದು ಕಡ್ಡಾಯ. ಮುಂದಿನ ದಿನಗಳಲ್ಲಿ ಬೋರ್​ವೆಲ್​ಗಳಿಂದ ನೀರು ಪೂರೈಕೆ ಇರುವುದಿಲ್ಲ.

| ಎಸ್.ಆರ್. ವಿಶ್ವನಾಥ್, ಶಾಸಕ

ಪೊ›ೕರೇಟಾ ನಿಯಮಗಳನ್ನು ಜಾರಿಗೆ ತಂದಿರುವುದು ಜಲಮಂಡಳಿಯ ಉನ್ನತಾಧಿಕಾರಿಗಳ ನಿರ್ಣಯ. ಹಾಗಾಗಿ ಪ್ರತಿಯೊಬ್ಬರೂ ಪೋ›ರೇಟಾ ದರಗಳನ್ನು ಕಡ್ಡಾಯವಾಗಿ ಪಾವತಿಸಿ ಕಾವೇರಿ ನೀರು ಸಂಪರ್ಕ ಪಡೆಯಬೇಕು

| ಜಯಶಂಕರ ಇ.ಇ., ಜಲಮಂಡಳಿ

Leave a Reply

Your email address will not be published. Required fields are marked *