ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅವರು ನಿರಂಕುಶ ಆಡಳಿತ, ಉದ್ಧಟತನ, ಭ್ರಷ್ಟಾಚಾರ, ಬ್ಲಾಕ್ ಮೇಲ್ ತಂತ್ರಗಾರಿಕೆಯಂತಹ ಕ್ರಮ ಅನುಸರಿಲಾಗುತ್ತಿದೆ. ಹಾಗಾಗಿ ಅವರ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಸಾಹಿತಿಗಳು, ಪ್ರಾಧ್ಯಾಪಕರು, ಹೋರಾಟಗಾರರು, ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸರ್ವಾಧಿಕಾರಿ ಮಹೇಶ್ ಜೋಶಿ ಇಳಿಸಿ -ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ’ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದವರು ಈ ನಿರ್ಣಯ ಕೈಗೊಂಡರು.
ಮಹೇಶ್ ಜೋಶಿ ಅವರು ಪರಿಷತ್ತಿನ ಅಧ್ಯಕ್ಷರಾದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಕ್ಕೆ ಧಕ್ಕೆ ಎದುರಾಗಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಆಡಳಿತಾಧಿಕಾರಿ ನೇಮಿಸಬೇಕು. ಅವರ ವಿರುದ್ಧ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ಜತೆಗೆ ಕಾನೂನಿನ ರೀತಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಶತಮಾನದ ಇತಿಹಾಸವಿರುವ ಸಾಹಿತ್ಯ ಪರಿಷತ್ತನ್ನು ಉಳಿಸಬೇಕಾಗಿದೆ. ಇದಕ್ಕಾಗಿ ಎಲ್ಲ ಸಾಹಿತಿಗಳು, ಸಾಹಿತ್ಯ ಪರಿಷತ್ತಿನ ಸದಸ್ಯರು ಒಂದಾಗಬೇಕು. ಸಾಹಿತ್ಯ ವಿರೋಧಿ ಹಾಗೂ ಮನುಷ್ಯ ವಿರೋಧಿ ವರ್ತನೆಯ ನಿರಂಕುಶ ಪ್ರಭುತ್ವ ಮನೋಭಾವದ ಮಹೇಶ್ ಜೋಶಿ ಅಧಿಕಾರವಧಿಯ ಎಲ್ಲ ಅವ್ಯವಹಾರಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದರು.
ಬೆಂಗಳೂರಿನಲ್ಲಿ ಎಲ್ಲ ಸಾಹಿತಿ ಮತ್ತು ಹೋರಾಟಗಾರರ ಒಡಗೂಡಿ ಜೋಶಿ ದುರಾಡಳಿತದ ವಿರುದ್ಧ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ಮನವಿ ನೀಡಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ, ಸರ್ಕಾರ ನೀಡಿರುವ ಅನುದಾನ ಹಣದ ಅವ್ಯವಹಾರದ ಬಗ್ಗೆ ವಿವರಿಸಲಾಗಿದೆ. ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ನೀಡಿದ ಅನುದಾನದಲ್ಲಿ ಎರಡೂವರೆ ಕೋಟಿ ರೂ. ಹಣದ ಲೆಕ್ಕ ನೀಡದ ಬಗ್ಗೆ ಗಮನಕ್ಕೆ ತರಲಾಗಿದೆ ಎಂದು ಸಭೆಗೆ ತಿಳಿಸಿದರು.
ಮೇ 17 ರಂದು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿರುವ ‘ಕಸಾಪ ಉಳಿಸಿ ಜನಾಂದೋಲನ’ ಹೋರಾಟಕ್ಕೆ ಹಳೇ ಮೈಸೂರು ಭಾಗದ ಸಾಹಿತಿಗಳು, ಸಾಹಿತ್ಯ ಸಂಘಟಕರು, ಕಸಾಪ ಸದಸ್ಯರು, ಕನ್ನಡಪರ ಸಂಘಟನೆಗಳು ಆಗಮಿಸಿ ಯಶಸ್ವಿಯಾಗಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಜಿ. ನಾರಾಯಣ ಮತ್ತು ಹಂಪಾ ನಾಗರಾಜಯ್ಯ ಅವರ ಅಧ್ಯರಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮವಾಗಿ ಕೆಲಸ ಮಾಡಿದೆ. ಮೌಲಿಕ ಪ್ರಾಚೀನ ಗ್ರಂಥಗಳ ಪ್ರಕಟ ಮಾಡಿದ್ದರು. ಪರಿಷತ್ತಿನ ಚಟುವಟಿಕೆಗಳನ್ನು ವಿಸ್ತರಿಸಿದ್ದರು. ಆದರೆ ಜೋಶಿಯವರ ಕಾಲದಲ್ಲಿ ಕಸಾಪ ತನ್ನ ಘನತೆಯನ್ನು ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಗ್ಗಿ ಪುಸ್ತಕ ಪ್ರಕಟ: ಮಂಡ್ಯದ ಸಮ್ಮೇಳನದಲ್ಲಿ ಮಗ್ಗಿ ಪುಸ್ತಕದಂತಹ ಕೃತಿಗಳನ್ನು ಪ್ರಕಟ ಮಾಡಲಾಗಿದೆ. ಪರಿಷತ್ತಿನ ಬೈಲಾವನ್ನು ಮನಬಂದಂತೆ ತಿದ್ದುಪಡಿ ಮಾಡಲಾಗಿದೆ. ಅಧಿಕಾರವನ್ನು ತಮ್ಮೊಬ್ಬರಲ್ಲಿ ಕೇಂದ್ರೀಕರಿಸಿಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ. ಚುನಾಯಿತ ಪ್ರತಿನಿಧಿಗಳಾಗಿರುವ ಜಿಲ್ಲಾ ಅಧ್ಯಕ್ಷರ ಮೇಲೆ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷರೆಲ್ಲ ಭಯದಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅನುದಾನ ನೀಡಿಕೆ ವಿಚಾರದಲ್ಲಿ ಸತಾಯಿಸಲಾಗುತ್ತಿದೆ. ಕಾರ್ಯಕಾರಿ ಸಮಿತಿಯನ್ನು ಕೈಗೊಂಬೆ ಮಾಡಿಕೊಳ್ಳಲಾಗಿದೆ. ತಮ್ಮನ್ನು ಪ್ರಶ್ನಿಸುವವರ ದನಿಯನ್ನು ದಮನಗೊಳಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಾಡು-ನುಡಿಗೆ ಧಕ್ಕೆಯಾದಾಗ ಧ್ವನಿ ಎತ್ತಬೇಕಾದ ಪರಿಷತ್‌ನ ಅಧ್ಯಕ್ಷ ಜೋಶಿ, ಬೆಳಗಾವಿಯಲ್ಲಿ ಪುಂಡರು ತಂಟೆ ತೆಗೆದಾಗ, ಶಿಕ್ಷಣ, ಆಡಳಿತದಲ್ಲಿ ಕನ್ನಡ ಕಡೆಗಣಿಸಿದಾಗ, ಪದವಿಯಲ್ಲಿ ಕನ್ನಡಕ್ಕೆ ಅವಧಿ ಕಡಿಮೆ ಮಾಡಿದಾಗ ಚಕಾರ ಎತ್ತದೆ ಮೌನ ವಹಿಸಿದ್ದಾರೆ. ಹಣವನ್ನು ದುಂದು ವೆಚ್ಚ ಮಾಡುವುದರಲ್ಲಿ, ತಮಗೆ ಆಗದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಭೆಯಲ್ಲಿ ಆರೋಪ ಕೇಳಿಬಂತು.
ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಭ್ರಷ್ಟಾಚಾರ ಎಸಗಿರುವ ಜೋಶಿ ವಿರುದ್ಧದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಹೋರಾಟ ಮಾಡುವ ಜತೆಗೆ, ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ, ಮುಖ್ಯಮಂತ್ರಿಗೆ ಗಡುವು ವಿಧಿಸಬೇಕು. ಆ ಗಡುವಿನಲ್ಲಿ ಕ್ರಮವಾಗದಿದ್ದರೆ ಹೋರಾಟ ತೀವ್ರಗೊಳಿಸಬೇಕು ಎಂದು ಹೇಳಿದರು.
ಇತಿಹಾಸ ತಜ್ಞ ಡಾ.ಎನ್.ಎಸ್. ರಂಗರಾಜು ಮಾತನಾಡಿ, ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದು ನಿಯೋಗ ಭೇಟಿ ಮಾಡಿ, ಕಸಾಪದಲ್ಲಿನ ಎಲ್ಲ ಅಹಿತಕರ ವಿಚಾರಗಳನ್ನು ಮನದಟ್ಟು ಮಾಡಬೇಕು. ಸರ್ಕಾರ ಮಧ್ಯ ಪ್ರವೇಶಿಸಿ, ಮಹೇಶ್ ಜೋಶಿ ವಿರುದ್ಧದ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಜರುಗಿಸಲು ಒತ್ತಾಯಿಸಬೇಕು ಎಂದು ತಿಳಿಸಿದರು.
ವಿಚಾರವಾದಿ ಎನ್.ಎಸ್. ಗೋಪಿನಾಥ್ ಮಾತನಾಡಿ, ಮಹೇಶ್ ಜೋಶಿ ಪರಿಷತ್ತಿಗೆ ಒಂದು ಕಳಂಕವಾಗಿದ್ದು, ಅವರ ನಿರಂಕುಶ ಆಡಳಿತ, ಭ್ರಷ್ಟಾಚಾರ, ಜೀವ ವಿರೋಧಿ ನಿಲುವು ಅಕ್ಷಮ್ಯ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅನರ್ಹ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಎನ್. ಎಸ್.ರಾಮೇಗೌಡ, ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್, ಹಿರಿಯ ಜಾನಪದ ವಿದ್ವಾಂಸ ಡಾ. ರಾಗೌ, ಚಿಂತಕ ಪ್ರೊ.ಕಾಳಚನ್ನೇಗೌಡ, ಕನ್ನಡ ಪ್ರಾಧ್ಯಾಪಕರಾದ ಡಾ.ಎಚ್.ಆರ್.ತಿಮ್ಮೇಗೌಡ, ಡಾ. ತ್ರಿವೇಣಿ, ಡಾ.ಪಿ.ಬೆಟ್ಟೇಗೌಡ, ಸಾಮಾಜಿಕ ಹೋರಾಟಗಾರ ಅರವಿಂದ ಶರ್ಮ, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ ಜವರೇಗೌಡ, ಪತ್ರಕರ್ತರಾದ ಮಾ. ವೆಂಕಟೇಶ್, ಪ್ರಕಾಶ್ ಬಾಬು, ರಂಗಕರ್ಮಿ ಚಂದ್ರು ಮಂಡ್ಯ, ಸಾಹಿತಿಗಳಾದ ಸಾತನೂರು ದೇವರಾಜು, ಡಾ.ನೀ.ಗೂ. ರಮೇಶ್, ಜಯಪ್ಪ ಹೊನ್ನಾಳಿ, ಡಾ.ಬಿ. ಬಸವರಾಜು, ಯಶೋಧ ರಾಮಕೃಷ್ಣ, ಗಾಯಕಿ ಸುಗಂಧಮ್ಮ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಟಿ. ವೀರಪ್ಪ, ಡಾ. ಮೀರಾ ಶಿವಲಿಂಗಯ್ಯ, ಪುಣ್ಯಕೋಟಿ ಸಮಾಜ ಸೇವ ಟ್ರಸ್ಟ್‌ನ ಅಧ್ಯಕ್ಷ ಹನುಮಂತೇಶ್, ಪರಿಸರವಾದಿ ಪರಶುರಾಮೇಗೌಡ ಇತರರಿದ್ದರು.

ದೇವನೂರ ಮಹಾದೇವ ಮನೆಗೆ ಭೇಟಿ
ಪೂರ್ವಭಾವಿ ಸಭೆ ಬಳಿಕ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಮನೆಗೆ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ನಿಯೋಗ ಭೇಟಿ ನೀಡಿ, ಜೋಶಿ ಅವರ ದುರಾಡಳಿತದ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮಗ್ರವಾಗಿ ಚರ್ಚಿಸಲಾಯಿತು. ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ದೇವನೂರ ಮಹದೇವ ಅವರು, ಈ ಎಲ್ಲ ಬೆಳವಣಿಗೆಗಳು ಮಾಧ್ಯಮಗಳ ಮೂಲಕ ತಮಗೆ ಗೊತ್ತಿದೆ. ಆದ್ದರಿಂದ ನಿಮಗೆ ನನ್ನ ನೈತಿಕ ಬೆಂಬಲವಿದೆ. ಹೋರಾಟ ಮುಂದುವರಿಯಲಿ. ನಾನು ಕೂಡ ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಒತ್ತಾಯಿಸುವುದಾಗಿ ತಿಳಿಸಿದರು.