ಮೋದಿ ಆಡಳಿತದಿಂದ ಜನರ ಬದುಕು ದುರ್ಬಲ

ಮಂಡ್ಯ: 3 ತಿಂಗಳ ಅವಧಿಗೆ ಉಪಚುನಾವಣೆ ಅಗತ್ಯ ಇರಲಿಲ್ಲ; ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಟ್ ರೀತಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.

ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ಬಿಸಿಲಿರುವ ಕಾರಣದಿಂದ ಫೆಬ್ರವರಿ ತಿಂಗಳಲ್ಲೇ ಲೋಕಸಭೆ ಚುನಾವಣೆ ನಡೆಸುವಂತೆ ಉತ್ತರ ಭಾರತದ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಆದ್ದರಿಂದ ಚುನಾವಣೆ ಅಗತ್ಯವಿರಲಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೋದಿ ಸರ್ಕಾರದಿಂದ ಜನರಿಗೆ ಸಂಕಷ್ಟ ಎದುರಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತಿವೆ. ಅಡುಗೆ ಉಪ್ಪು, ಎಣ್ಣೆ, ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಎಲ್ಲ ವಸ್ತುಗಳ ಬೆಲೆಗಳು ಹೆಚ್ಚಳವಾಗಿದ್ದು, ಜನರ ಬದುಕು ದುರ್ಬರವಾಗಿದೆ ಎಂದು ಆರೋಪಿಸಿದರು.

ಮೋದಿ ಸರ್ಕಾರ ಜನವಿರೋಧಿ ಆಗಿದ್ದರೂ ಬಿಜೆಪಿ ಸಂಸದರು ತುಟಿ ಬಿಚ್ಚುತ್ತಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಶೋಭಾ ಕರಂದ್ಲಾಜೆ, ಸದಾನಂದಗೌಡ, ಕಟೀಲ್ ಅಡುಗೆ ಸಿಲಿಂಡರ್ ಹೊತ್ತು ಪ್ರತಿಭಟನೆ ನಡೆಸಿದ್ದರು. ಈಗ ಏಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ಟೀಕಿಸಿದರು.

ರೈತರ ಆತ್ಮಹತ್ಯೆ ಬಗ್ಗೆ ಸಂಸತ್‌ನಲ್ಲಿ ಇದುವರೆಗೂ ಒಮ್ಮೆಯೂ ಚರ್ಚೆ ನಡೆದಿಲ್ಲ. ಪ್ರಧಾನಿ ಮೋದಿ ಅವರು ರೈತರ ಆತ್ಮಹತ್ಯೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ರೈತ ಬೆನ್ನೆಲುಬು ಅಂತಾರೆ, ಯಡಿಯೂರಪ್ಪ ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಯಾಕೆ ರೈತರ ಬಗ್ಗೆ ಮಾತನಾಡುತ್ತಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಂಖ್ಯೆ ಹೊಂದಿರುವ ಪ್ರತಿಪಕ್ಷ ಸಂಪೂರ್ಣ ವಿಫಲವಾಗಿದೆ. ಕೇವಲ ಸರ್ಕಾರ ಬೀಳುವುದನ್ನು ಕಾಯುತ್ತಿದೆ ಎಂದು ಟೀಕೆ ಮಾಡಿದರು.

ಗ್ರೀಸ್ ದೇಶದಲ್ಲಿ ನೋಟು ಅಮಾನ್ಯವಾಗಿತ್ತು. ಅದರಿಂದ ಆ ದೇಶ ದಿವಾಳಿಯಾಗಿದೆ. ಇದೆಲ್ಲ ಗೊತ್ತಿದ್ದರೂ ಮೋದಿ ಅವರು ನೋಟು ಅಮಾನ್ಯ ಮಾಡಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಯಾವುದೇ ಅನುಕೂಲವಾಗಿಲ್ಲ. ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗಿದೆ. ಬ್ಯಾಂಕ್‌ಗಳಿಗೆ ಟೋಪಿ ಹಾಕಿರುವವರು ಮೋದಿ ಅವರ ಸ್ನೇಹಿತರೆ. ಮನಮೋಹನ್ ಸಿಂಗ್ ಆರ್‌ಟಿಇ, ಆರ್‌ಟಿಐ ಜಾರಿಗೆ ತಂದರು, ಅಂಥ ಯಾವ ಯೋಜನೆಯನ್ನೂ ಮೋದಿ ತರಲಿಲ್ಲ. ಅಂಥ ಪಕ್ಷಕ್ಕೆ ಅಧಿಕಾರ ನೀಡಬೇಕೆ ಪ್ರಶ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಭಾವುಕಜೀವಿ. ಸಂಯಮದ ವ್ಯಕ್ತಿ. ಎಲ್ಲೋ ಸಂಯಮದಲ್ಲಿ ಕೊಂಚ ವ್ಯತ್ಯಾಸವಾಗಿರಬಹುದು. ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಿತ್ರರು ಕಾಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಮಿತ್ರರು ದೂರವಾಗಿಲ್ಲ. ಆತ್ಮಾನಂದ, ಅಮರಾವತಿ ಚಂದ್ರಶೇಖರ್‌ಗಿಂತ ದೊಡ್ಡ ನಾಯಕರು ಬೇಕೆ ಎಂದು ಹೇಳಿದರು. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಸಂಸದರಾದ ಮುನಿಯಪ್ಪ, ದೊಡ್ಡಹನುಮೇಗೌಡ, ಅಲ್ಪಸಂಖ್ಯಾತರ ಮುಖಂಡರು ಭಾಗಿಯಾಗಿರಲಿಲ್ಲವೆ ಎಂದು ಮರುಪ್ರಶ್ನೆ ಹಾಕಿದರು.
ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಾಧ್ಯಕ್ಷ ಗೌರೀಶ್ ಹಾಜರಿದ್ದರು.