ಶ್ರೀಶೈಲ ಪೀಠದ ಜನಜಾಗೃತಿ ಸಮಾವೇಶ

|ಪ್ರಶಾಂತ ರಿಪ್ಪನ್​ಪೇಟೆ

ಉತ್ಕೃ್ಟವಾದ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಠ-ಪೀಠಗಳ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಶೈಲಪೀಠದ ಲಿಂಗೈಕ್ಯ ಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯರ ಕರಕಮಲಸಂಜಾತ ಶ್ರೀ ಉಮಾಪತಿ ಪಂಡಿತಾರಾಧ್ಯ ಭಗವತ್ಪಾದರ ಕಾರ್ಯ ಗಮನಾರ್ಹ. ಲಭ್ಯ ದಾಖಲೆಗಳ ಪ್ರಕಾರ; ಶ್ರೀಶೈಲಪೀಠದ 31ನೆಯ ಜಗದ್ಗುರುಗಳಾಗಿದ್ದ ಉಮಾಪತಿ ಪಂಡಿತಾರಾಧ್ಯ ಭಗವತ್ಪಾದರು ಕನ್ನಡ, ಹಿಂದಿ, ತೆಲಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದವರು. ಮಹಾಸಾಧಕರಾಗಿದ್ದ ಶ್ರೀ ವಾಗೀಶ ಪಂಡಿತಾರಾಧ್ಯ ಭಗವತ್ಪಾದರ ವರಪ್ರಸಾದವಾಗಿ ಪೀಠಕ್ಕೆ ನೇಮಕಗೊಂಡವರು ಅವರು.

1981ರಲ್ಲಿ ಶ್ರೀಶೈಲ ಸೂರ್ಯಸಿಂಹಾಸನವನ್ನು ಆರೋಹಣ ಮಾಡಿದ ಪೂಜ್ಯರು ಹಿರಿಯ ಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯರ ಗರಡಿಯಲ್ಲಿ ಐದು ವರ್ಷ ಪರಿಪಕ್ವಗೊಂಡು ಪೀಠದ ಇತಿಹಾಸವನ್ನು ಉಜ್ವಲಗೊಳಿಸುವಲ್ಲಿ ಶ್ರಮ ವಹಿಸಿದರು.

ಶ್ರೀಶೈಲ ಕ್ಷೇತ್ರ ಸಂಪೂರ್ಣ ಜವಾಬ್ದಾರಿ ಒಂದು ಕಾಲಕ್ಕೆ ಪೀಠದ ಅಧೀನದಲ್ಲಿದ್ದ ಸಂದರ್ಭದಲ್ಲಿ; ಆಂಧ್ರ ಸರ್ಕಾರದ ಮುಜರಾಯಿ ಇಲಾಖೆ ಸ್ಥಾಪಿಸಿದ ಟ್ರಸ್ಟ್ ಬೋರ್ಡ್​ನ ಪ್ರಥಮ ಅಧ್ಯಕ್ಷರಾಗಿ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದವರು ಪೂಜ್ಯರು. ಕ್ಷೇತ್ರಕ್ಕೆ ಬರುವ ಯಾತ್ರಿಕರ ಅನುಕೂಲಕ್ಕಾಗಿ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದರು. ಅವುಗಳಲ್ಲಿ ಪ್ರಮುಖವಾದದ್ದು ಶ್ರೀಶೈಲಕ್ಕೆ ರಸ್ತೆ ನಿರ್ವಣ. ಕರ್ನಾಟಕ ಮತ್ತು ಆಂಧ್ರದ ರಾಜ್ಯಪಾಲರು ನೂತನ ರಸ್ತೆ ಉದ್ಘಾಟಿಸಿದಾಗ ಶ್ರೀ ವಾಗೀಶ ಜಗದ್ಗುರುಗಳ ಕಾರು ಮೊದಲ ಸಂಚಾರ ನಡೆಸಿತ್ತು. ಭಕ್ತರ ವಸತಿಗಾಗಿ ಯಾತ್ರಿನಿವಾಸ, ನಿತ್ಯಾನ್ನ ದಾಸೋಹ ಕೇಂದ್ರಗಳನ್ನು ಪೀಠದ ವತಿಯಿಂದ ಸ್ಥಾಪಿಸುವ ಕಾರ್ಯ, ಜೊತೆಗೆ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದ ಶಿವಶರಣರ ಇತಿಹಾಸ ಶಾಶ್ವತಗೊಳಿಸುವುದಕ್ಕೂ ಮುನ್ನುಡಿ ಬರೆದಿದ್ದರು. ಇಂತಹ ಹತ್ತು ಹಲವು ಯೋಜನೆಗಳು ಶ್ರೀ ವಾಗೀಶ ಜಗದ್ಗುರುಗಳಿಂದ ಆರಂಭವಾದರೂ ಅವುಗಳನ್ನು ಪೂರ್ಣಗೊಳಿಸಿದ ಕೀರ್ತಿ ಶ್ರೀಉಮಾಪತಿ ಜಗದ್ಗುರುಗಳಿಗೆ ಸಲ್ಲುತ್ತದೆ.

‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂಬ ಉಕ್ತಿಯಂತೆ ವಜ್ರದಷ್ಟು ಕಠಿಣ ಮಾತುಗಳನ್ನಾಡುತ್ತಿದ್ದ ಉಮಾಪತಿ ಜಗದ್ಗುರುಗಳು ಹೂವಿನಂತೆ ಮೃದು ಮನಸ್ಸನ್ನು ಹೊಂದಿದ್ದರು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಪಶು-ಪಕ್ಷಿ, ಪ್ರಾಣಿಗಳ ಮೇಲೆಯೂ ಅಪಾರ ಪ್ರೀತಿಯನ್ನು ಇರಿಸಿಕೊಂಡಿದ್ದ ಶ್ರೀಗಳು ತಮ್ಮ ಬಿಡುವಿನ ವೇಳೆಯಲ್ಲಿ ಅವುಗಳ ಜೊತೆ ಕಾಲ ಕಳೆಯುತ್ತಿದ್ದರು. ಮೂರು ಭಾಷೆಗಳಲ್ಲಿ ಅದ್ಭುತ ಆಶೀರ್ವಚನ ನೀಡುತ್ತಿದ್ದ ಅವರಿಗೆ ಹಾಸ್ಯದ ಜೊತೆಗೆ ಧಮೋಪದೇಶ ನೀಡುವ ವಿಶೇಷ ಕಲೆ ಕರಗತವಾಗಿತ್ತು.

ಕೇವಲ ಶ್ರೀಶೈಲದ ಪರಿಸರದಲ್ಲಿ ಮಾತ್ರವಲ್ಲದೆ ಆಂಧ್ರ, ಕರ್ನಾಟಕದ ಹಲವು ಭಾಗಗಳಲ್ಲಿದ್ದ ಪೀಠದ ಶಾಖಾಮಠಗಳ ಅಭಿವೃದ್ಧಿ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಸಾಮಾಜಿಕ, ಧಾರ್ವಿುಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಜಗದ್ಗುರುಗಳ ಪೂರ್ವಾಶ್ರಮ

ಬಸವಜನ್ಮಭೂಮಿ ಬಾಗೇವಾಡಿಯ ಸಂಗಯ್ಯ, ಶಿವಲಿಂಗಮ್ಮ ದಂಪತಿಯ ಪುಣ್ಯಗರ್ಭದಲ್ಲಿ 1949ರಲ್ಲಿ ಜನಿಸಿದ ಪೂಜ್ಯರ ಮೇಲೆ ಅಜ್ಜ ವಿರೂಪಾಕ್ಷಯ್ಯನವರ ಗಾಢ ಪ್ರಭಾವ ಉಂಟಾಯಿತು. ಸಹಜವಾಗಿಯೇ ಧರ್ಮದಲ್ಲಿ ಆಸಕ್ತಿ ಹೊಂದಿದ್ದ ಅವರು; ಪ್ರಾಥಮಿಕ ಶಿಕ್ಷಣವನ್ನು ಬಾಗೇವಾಡಿಯಲ್ಲಿ ಪೂರೈಸಿ ಮುಂದೆ ಶಿವಯೋಗ ಮಂದಿರ ಹಾಗೂ ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಹುಬ್ಬಳ್ಳಿ ಹೊಸಮಠದ ಶ್ರೀ ಶಿವಬಸವ ಸ್ವಾಮಿಗಳಿಂದ ಸಂಸ್ಕೃತ ಸಾಹಿತ್ಯದ ಆಳವಾದ ಅಧ್ಯಯನವನ್ನು ಮಾಡಿದ ಶ್ರೀ ಉಮಾಪತಿ ದೇವರು ಮುಂದೆ ಉನ್ನತ ಅಧ್ಯಯನಕ್ಕಾಗಿ ಕಾಶಿಗೆ ತೆರಳಿದರು. ಅಲ್ಲಿ ಆರೇಳು ವರ್ಷಗಳ ಕಾಲ ಇದ್ದು, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಪ್ರಯಾಗ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿ ವಿವಿಧ ಪದವಿಗಳನ್ನು ಪಡೆದರು.

ಅಂದಿನ ಕಾಶಿ ಜಗದ್ಗುರು ಶ್ರೀ ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರ ಶಿಫಾರಸು ಮತ್ತು ರಂಭಾಪುರಿ ಶ್ರೀ ವೀರಗಂಗಾಧರ ಜಗದ್ಗುರುಗಳ ಸಮ್ಮತಿಯಂತೆ ಶ್ರೀಶೈಲ ಶ್ರೀ ವಾಗೀಶ ಜಗದ್ಗುರುಗಳ ಉತ್ತರಾಧಿಕಾರಿಗಳಾಗಿ ಆಯ್ಕೆಗೊಂಡು ತತ್ಕಾಲೀನ ಸಮಾನ ಪೀಠಾಚಾರ್ಯರ ಸಾನ್ನಿಧ್ಯದಲ್ಲಿ 1981ರಲ್ಲಿ ಸೂರ್ಯಸಿಂಹಾಸನದ ಪೀಠಾರೋಹಣ ಮಾಡಿದರು. ಸುಮಾರು 30 ವರ್ಷಗಳ ಈ ಪರಂಪರೆಯನ್ನು ಮುನ್ನಡೆಸಿ 2011ರಲ್ಲಿ ಲಿಂಗೈಕ್ಯರಾದರು.

ದಾವಣಗೆರೆಯೊಂದಿಗೆ ಅವಿನಾಭಾವ ನಂಟು

ಶ್ರೀಶೈಲಪೀಠವು ಆಂಧ್ರಪ್ರದೇಶದಲ್ಲಿದ್ದರೂ ಪೀಠದ ಕಾರ್ಯಕ್ಷೇತ್ರ ದೇಶದ ವಿವಿಧ ಪ್ರಾಂತಗಳಲ್ಲಿ ಹರಡಿದೆ. ಅದರಲ್ಲೂ ಕರ್ನಾಟಕದಲ್ಲಿ ವಿಶೇಷವಾಗಿದೆ. ಆ ಹಿನ್ನೆಲೆಯಲ್ಲಿ ದಾವಣಗೆರೆಯನ್ನು ಶ್ರೀಶೈಲದ ಎರಡನೇ ಕೇಂದ್ರಸ್ಥಾನ ಎಂದು ಕರೆಯಲಾಗುತ್ತದೆ. ಲಿಂಗೈಕ್ಯ ಶ್ರೀ ವಾಗೀಶ ಜಗದ್ಗುರುಗಳ ಕಾಲದಲ್ಲಿ ಸ್ಥಾಪನೆಗೊಂಡ ಶಿಕ್ಷಣಸಂಸ್ಥೆಗಳು, ದಾವಣಗೆರೆ ನಗರದಲ್ಲಿರುವ ಶ್ರೀಶೈಲ ಮಠ ಈ ಭಾಗದ ಭಕ್ತ ಸಮುದಾಯಕ್ಕೆ ಆ ಕಾಲದಿಂದಲೂ ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಶ್ರೀ ಉಮಾಪತಿ ಜಗದ್ಗುರುಗಳು ಉತ್ತರಾಧಿಕಾರಿ ಪರೀಕ್ಷೆಗೆ ಬಂದು ಶ್ರೀ ವಾಗೀಶ ಜಗದ್ಗುರುಗಳನ್ನು ಭೇಟಿಯಾಗಿದ್ದು, ಆಯ್ಕೆಯಾಗಿ ಘೊಷಣೆಯಾಗಿದ್ದು, ಮುಂದೆ ಲಿಂಗೈಕ್ಯರಾಗಿದ್ದೂ ಇದೇ ದಾವಣಗೆರೆಯಲ್ಲಿ. ದಾವಣಗೆರೆ ಜಿಲ್ಲೆಯಲ್ಲಿ ಶ್ರೀಶೈಲ ಪೀಠದ ಮೂರು ಜಗದ್ಗುರುಗಳ ಗದ್ದುಗೆಗಳಿವೆ. ಶ್ರೀ ಉಮಾಪತಿ ಜಗದ್ಗುರುಗಳಿಗಿಂತ ಮೊದಲು ಶ್ರೀ ವಾಗೀಶ ಜಗದ್ಗುರುಗಳ ಗದ್ದುಗೆ ಹಾಗೂ ಹೊನ್ನಾಳಿ ಹಿರೇಕಲ್ಮಠದಲ್ಲಿ 26ನೆಯ ಪೀಠಾಧಿಪತಿಯಾಗಿದ್ದ ಶ್ರೀ ಜಡೆಯ ಶಂಕರ ಭಗವತ್ಪಾದರ ಗದ್ದುಗೆ ಇವೆ.

ಶ್ರೀ ವಾಗೀಶ ಜಗದ್ಗುರುಗಳು 1986ರ ಸೆ. 15ರಂದು ಲಿಂಗೈಕ್ಯರಾದರೆ, ಶ್ರೀ ಉಮಾಪತಿ ಜಗದ್ಗುರುಗಳು 2011ರ ಅ. 29ರಂದು ಲಿಂಗೈಕ್ಯರಾದರು. ನಂತರ ದಾವಣಗೆರೆಯ ಭಕ್ತರು ಪ್ರತಿ ವರ್ಷ ಪ್ರಸ್ತುತ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಉಭಯ ಜಗದ್ಗುರುಗಳ ಪುಣ್ಯಸ್ಮರಣೋತ್ಸವವನ್ನ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಸೆ.22 ರಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ವಾಗೀಶ ಜಗದ್ಗುರುಗಳ 32ನೇ ಪುಣ್ಯಾರಾಧನೆ ಹಾಗೂ ಶ್ರೀ ಉಮಾಪತಿ ಜಗದ್ಗುರುಗಳ ಏಳನೆಯ ಪುಣ್ಯಸ್ಮರಣೆಯ ಅಂಗವಾಗಿ ದಾವಣಗೆರೆಯ ಶ್ರೀಶೈಲ ಮಠದಲ್ಲಿ ಶಿವದೀಕ್ಷೆ, ಭಾವೈಕ್ಯ ಜನಜಾಗೃತಿ ಧರ್ಮ ಸಮಾವೇಶ, ಉಭಯ ಜಗದ್ಗುರುಗಳ ರಜತಮೂರ್ತಿಗಳ ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.