ಭದ್ರಾವತಿ: ಬಿಸಿಲಿನ ಝಳ ದಿನೇದಿನೆ ಏರಿಕೆಯಾಗುತ್ತಿದ್ದು, ಜನ ಹೈರಾಣಾಗಿದ್ದಾರೆ. ಮಧ್ಯಾಹ್ನವಾಗುತ್ತಿದ್ದಂತೆ ಜನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತವೆ. ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ, ವಹಿವಾಟಿಲ್ಲದೆ ಖಾಲಿ ಹೊಡೆಯುತ್ತಿವೆ.
ಕೆಲಸದ ನಿಮಿತ್ತ ನಗರಕ್ಕೆ ಬರುವ ನಾಗರಿಕರು ಅನಿವಾರ್ಯವಾಗಿ ಸುಡುವ ಬಿಸಿಲಲ್ಲೇ ಸಂಚರಿಸಬೇಕಾಗುತ್ತದೆ. ಅಲ್ಲಲ್ಲಿ ಮಾರಾಟವಾಗುವ ಎಳನೀರು, ಕಬ್ಬಿನ ಹಾಲು, ಗೋಲಿ ಸೋಡಾ ಕುಡಿದು, ಹಣ್ಣುಗಳನ್ನು ತಿಂದು ದಣಿವಾರಿಸಿಕೊಳ್ಳುತ್ತಾರೆ.
ನ್ಯೂಟೌನ್ ಚರ್ಚ್ ಪಕ್ಕದ ವಿಐಎಸ್‌ಎಲ್ ಸಂತೆ ಮೈದಾನದಲ್ಲಿ 20 ವರ್ಷಗಳಿಂದ ಕಬ್ಬಿನ ಹಾಲು ಮಾರಾಟ ಮಾಡುತ್ತಾರೆ ಪ್ರದೀಪ. ಉಂಬ್ಳೇಬೈಲು ರಸ್ತೆಯಲ್ಲಿ ಸಂಚರಿಸುವ ಬಹುತೇಕ ಮಂದಿ ಈತನ ಬಳಿ ಕಬ್ಬಿನ ಹಾಲು ಕುಡಿಯದೆ ಮುಂದಕ್ಕೆ ಸಾಗುವುದೇ ಇಲ್ಲ. ಬಿಸಿಲಿನಲ್ಲಿ ನಗರ ಸುತ್ತಿ ಹಿಂದಿರುಗುವ ನ್ಯೂಟೌನ್ ಭಾಗದ ಜನರು ಕಬ್ಬಿನ ಹಾಲು ಕುಡಿದು ಮುಂದುವರಿಯುತ್ತಾರೆ. ತಾಪಮಾನ ಏರಿಕೆ ಆಗುತ್ತಿರುವುದರಿಂದ ಜನರ ಸಂಚಾರ ಕೂಡ ವಿರಳವಾಗುತ್ತಿದೆ. ಇದರಿಂದ ಬೇಸಿಗೆಯಲ್ಲೇ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಪ್ರದೀಪ
ಎಳನೀರಿಗೂ ಡಿಮಾಂಡ್: ಅಂಡರ್ ಬ್ರಿಡ್ಜ್ ಬಳಿ ಮೆಸ್ಕಾಂ ಕಚೇರಿ ಮುಂಭಾಗ ಎಳನೀರು ಮಾರಾಟ ಮಾಡಲಾಗುತ್ತದೆ. ಗೋಣಿಬೀಡು ಗ್ರಾಮದಿಂದ ನಗರಕ್ಕೆ ಎಳನೀರು ತಂದು ಮಾರಾಟ ಮಾಡುತ್ತಿರುವ ರಾಕೇಶ್ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ವ್ಯಾಪಾರ ಮಾಡುತ್ತಾರೆ. ಆಟೋ, ಕಾರು, ಬೈಕುಗಳಲ್ಲಿ ಹೋಗುವವರು ಎಳನೀರು ಸೇವಿಸಿ ದೇಹವನ್ನು ತಂಪಾಗಿಸಿಕೊಳ್ಳುತ್ತಿದ್ದಾರೆ. ದರ ತುಸು ಹೆಚ್ಚಾದರೂ ಜನರು ಚೌಕಾಸಿ ಮಾಡದೆ ಸೇವಿಸುತ್ತಾರೆ. ಜನರು ಹೊರಬಾರದಿದ್ದರಿಂದ ಬೆಳಗ್ಗೆ ತಂದ ಎಳನೀರು ಕೆಲವೊಮ್ಮೆ ಸಂಜೆಯಾದರೂ ಖಾಲಿಯಾಗುವುದಿಲ್ಲ. ಬಿಸಿಲು ಹೆಚ್ಚಾದರೆ ವ್ಯಾಪಾರಕ್ಕೂ ತೊಂದರೆಯಾಗುವುದು ಖಚಿತ ಎಂಬುದು ರಾಕೇಶ ಅವರ ಆತಂಕ.
ಗೋಲಿ ಸೋಡಾ ಜೀವಂತ: ಬೇಸಿಗೆಯಲ್ಲಿ ಮಾತ್ರ ಗೋಲಿಸೋಡ ತಣ್ಣಗೆ ಸದ್ದು ಮಾಡುತ್ತದೆ. ಗೋಲಿ ಸೋಡಾ ಮಾರಾಟ ತುಂಬ ಹಳೆಯ ವೃತ್ತಿಯಾದರೂ ಐಸ್‌ಸ್ಕ್ರೀಂ ಭರಾಟೆಯಲ್ಲಿ ಗೋಲಿ ಸೋಡಾ ಮಾರಾಟ ಮಾಡುವವರ ಸಂಖ್ಯೆ ಕ್ಷೀಣಿಸಿದೆ. ಗಾಜಿನ ಲೋಟಕ್ಕೆ ಗೋಲಿಸೋಡಾ ಸುರಿದು ನಿಂಬೆಹಣ್ಣು ಇಲ್ಲವೇ ಹಿರಳೀಕಾಯಿ ಹುಳಿ ಹಿಂಡಿ ಸ್ವಲ್ಪ ಉಪ್ಪು, ಐಸ್ ಹಾಕಿ ಕೊಡಲಾಗುತ್ತದೆ. ಆದರೆ ಭದ್ರಾವತಿಯಲ್ಲಿ ಆನಂದ ಎಂಬುವರು ಗೋಲಿ ಸೋಡಾ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯುವುದು ಬೇಸಿಗೆಯಲ್ಲೇ. ಸಾಮಾನ್ಯವಾಗಿ ಆಹಾರ ಜೀರ್ಣವಾಗಲು ಹಾಗೂ ಬಿಸಿಲಿನ ತಾಪಕ್ಕೆ ತಾಪಮಾನ ತಣ್ಣಗಾಗಿಸಲು ಗೋಲಿ ಸೋಡಾವನ್ನು ಅವಲಂಬಿಸುವುದೇ ಹೆಚ್ಚು.
ಅಂಬಲಿ ಮಾರಾಟ: ಇತ್ತೀಚೆಗೆ ರಸ್ತೆ ಪಕ್ಕದಲ್ಲಿ ಮಜ್ಜಿಗೆ, ಅಂಬಲಿ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಸ್ತೆ ಬದಿಯಲ್ಲಿ ಶುಚಿ-ರುಚಿ ಜತೆಗೆ ಗುಣಮಟ್ಟದ ಅಂಬಲಿ ನೀಡುವುದರಿಂದ ಜನರು ಕೂಡ ಆಕರ್ಷಿತರಾಗುತ್ತಿದ್ದಾರೆ. ಹಾಗೆಯೇ ಎಳನೀರು, ಕಬ್ಬಿನಹಾಲು, ಗೋಲಿಸೋಡಾ, ಕಲ್ಲಂಗಡಿ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಬೇಸಿಗೆ ಕಳೆದರೆ ಸಾಕಪ್ಪಾ ಎನ್ನುತ್ತಿದ್ದಾರೆ ಜನರು.
ದಾಹ ನೀಗಿಸಿಕೊಳ್ಳಲು ಎಳನೀರು ಮೊರೆಹೋದ ಜನ

You Might Also Like
ಪೀಚ್ ಹಣ್ಣು ತಿನ್ನುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು! | Peaches
Peaches : ಪೀಚ್‌ಗಳು ತುಂಬಾ ಆರೋಗ್ಯಕರವಾಗಿದ್ದು, ಇದನ್ನು ತಿನ್ನುವುದರಿಂದ ಉತ್ತಮ ಆರೋಗ್ಯ ಲಭಿಸುವುದರ ಜತೆಗೆ ದೇಹಕ್ಕೆ…
ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango
mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…
ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ.. Akshaya Tritiya
Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಅಂಗಡಿಗಳು ವ್ಯಾಪಾರದಿಂದ…