ಮತದಾರರ ಆಶೀರ್ವಾದ ಸೌಭಾಗ್ಯ

ವಿಜಯವಾಣಿ ಸುದ್ದಿಜಾಲ ಕುಂದಗೋಳ

25 ವರ್ಷಗಳ ಹಿಂದೆ ನನ್ನ ರಾಜಕೀಯ ಜೀವನವು ಕಲ್ಲು ಮುಳ್ಳಿನ ಹಾಸಿಗೆಯಾಗಿತ್ತು. ಸುತ್ತಲೂ ಬೆಂಕಿಯ ತಾಪಮಾನಕ್ಕೆ ಬೆಂದು ಇಷ್ಟೆತ್ತರ ಬೆಳೆಯಲು ತಾಲೂಕಿನ ಮತದಾರರ ಆಶೀರ್ವಾದ ಹಾಗೂ ನನ್ನ ರಾಜಕೀಯ ಗುರುಗಳಾದ ದಿ. ಎಸ್.ಬಂಗಾರಪ್ಪ, ಎಸ್.ಆರ್. ಮುಲ್ಕಿ ಪಾಟೀಲ, ಎಂ.ಎಸ್. ಕಟಗಿ ಇವರ ರಾಜಕೀಯ ಮಾರ್ಗದರ್ಶನವೇ ಕಾರಣ ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಪ.ಪಂ.ನಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅದ್ದೂರಿ ಸ್ವಾಗತ- ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣದ ಕಾಶಮ್ಮರ ಮನೆಯಲ್ಲಿ ಚುರುಮರಿ ತಿಂದು, ಜಾತಿ-ಮತ ಪರಿಗಣಿಸದೆ ಎಲ್ಲರೊಂದಿಗೆ ಬೆರೆತು ರಾಜಕೀಯ ಮಾಡಿದ್ದೇನೆ. ಎಷ್ಟೆ ಅಪ ಪ್ರಚಾರ ನಡೆದರೂ ಲೆಕ್ಕಿಸದ ಮತದಾರ ಪ್ರಭುಗಳು ನನನ್ನು ಬೆಂಬಲಿಸಿದ್ದಾರೆ. ಜನರ ಆಶೀರ್ವಾದವೇ ನನ್ನ ಪಾಲಿನ ದೊಡ್ಡ ಸೌಭಾಗ್ಯ ಎಂದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ ಅವರಂತೆ ಬೆಳೆಯಬೇಕು ಎಂದಾಗ ವೇದಿಕೆಯಲ್ಲಿಯ ಗಣ್ಯರು ನಗೆ ಅಲೆಯಲ್ಲಿ ತೇಲಿದರು. ಶಿವಳ್ಳಿ ಪರಿಶ್ರಮ ಜೀವಿ ಪ್ರಶಂಸಿಸಿದರು.

ಧಾರಾವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ ಮಾತನಾಡಿ, ಝೀರೋದಿಂದ ಹೀರೋ ಆದ ಶಿವಳ್ಳಿಯವರ ನಡೆ, ನುಡಿ, ಜನಸ್ನೇಹಿ ಕಾರ್ಯಗಳು ನಮ್ಮೆಲ್ಲರಿಗೆ ಮಾರ್ಗದರ್ಶನವಾಗಿವೆ ಎಂದರು.

ಅದ್ದೂರಿ ಮೆರವಣಿಗೆ: ಸಚಿವರಾದ ಮೇಲೆ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಸಿ.ಎಸ್. ಶಿವಳ್ಳಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಶುಕ್ರವಾರ ಅದ್ದೂರಿಯಾಗಿ ಬರಮಾಡಿಕೊಂಡರು. ಪಟ್ಟಣದ ಬ್ರಹ್ಮ ಲಿಂಗೇಶ್ವರ ದೇವಾಲಯ, ನಾಸಾಬಲಿ ದರ್ಗಾ, ಶಂಕರಲಿಂಗ ಗುಡಿ, ಕಲ್ಯಾಣಪುರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಗಾಳಿಮರೆಮ್ಮ ಗುಡಿಯಿಂದ ಮೆರವಣಿಗೆ ಮೂಲಕ ಟಿಎಪಿಸಿಎಂಎಸ್ ಆವರಣಕ್ಕೆ ಕರೆತರಲಾಯಿತು.

ಜಿ.ಪಂ. ಸದಸ್ಯ ಉಮೇಶ ಹೆಬಸೂರ, ಪ.ಪಂ. ಅಧ್ಯಕ್ಷೆ ಹಾಸಂಬಿ ಚಡ್ಡಿ, ಕಾಂಗ್ರೆಸ್ ಮುಖಂಡರಾದ ಅರವಿಂದ ಕಟಗಿ, ಡಾ. ಮಹೇಶ ನಾಲವಾಡ, ಅಲ್ತಾಫ್ ಹಳ್ಳೂರ, ಎ.ಬಿ. ಉಪ್ಪಿನ, ಎಪಿಎಂಸಿ ಅಧ್ಯಕ್ಷ ಬೀರಪ್ಪ ಕುರುಬರ, ಶಾಂತವ್ವ ಗುಜ್ಜಳ, ಸಿದ್ದಪ್ಪ ಹುಣಸಣ್ಣವರ, ಸಾವಕ್ಕ ಬಡಿಗೇರ, ಮಲ್ಲಿಕಾರ್ಜುನ ಕಿರೇಸೂರ, ಅಜೀಜ ಕ್ಯಾಲ್ಕೊಂಡ, ಮಾಬೂಲಿ ನದಾಫ್, ಬಸುರಾಜ ದೊಡಮನಿ, ದ್ಯಾಮವ್ವ ಬಿಡನಾಳ, ಬಸಮ್ಮ ಅಲ್ಲಾಪುರ, ರಾಯೇಸಾಬ ಕಳ್ಳಿಮನಿ, ಗಂಗಾಧರ ಪಾಣಿಗಟ್ಟಿ, ಇಮ್ತಿಯಾಜ ಮುಲ್ಲಾ, ದಯಾನಂದ ಕುಂದೂರ, ಸುರೇಶ ಗಂಗಾಯಿ, ಶೇಖರ ಯಲವಿಗಿ, ಬಸುರಾಜ ವಟವಟಿ, ಧೃತಿ ಸಾಲ್ಮನಿ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ಹನುಮಂತನ ಹಾರೈಕೆ:ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪಟ್ಟಣದ ಶಿಥಿಕಂಠೇಶ್ವರ ಸ್ವಾಮೀಜಿ ನೇರವಾಗಿ 3 ತಿಂಗಳು ಮೊದಲೇ ನನ್ನ ವಿರುದ್ಧ ಬಗಲಲ್ಲಿ ಹನುಮಂತನ ಮೂರ್ತಿಯನ್ನು ಹಿಡಿದು ಪ್ರಚಾರ ಮಾಡಿದರು. ಆದರೂ, ಆ ಹನುಮಂತನು ನನಗೆ ಆಶೀರ್ವದಿಸಿದ್ದಾನೆ ಎಂದು ಶಿವಳ್ಳಿ ಮಾರ್ವಿುಕವಾಗಿ ನುಡಿದರು.

Leave a Reply

Your email address will not be published. Required fields are marked *