ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

ವಿಜಯವಾಣಿ ವಿಶೇಷ ರಾಣೆಬೆನ್ನೂರ

ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲೂಕಿನ ಕೆಲ ಗ್ರಾಮಗಳ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ತಾಲೂಕಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬೋರ್​ವೆಲ್ ನೀರೂ ದೊರಕುತ್ತಿಲ್ಲ. ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ಆದರೆ, ಬೇಸಿಗೆ ಮುನ್ನವೇ ಜನತೆ ತತ್ತರಿಸಿ ಹೋಗುವ ಪರಿಸ್ಥಿತಿ ತಲೆದೋರಿದೆ.

ಯಾವ ಗ್ರಾಮಗಳಲ್ಲಿ ಸಮಸ್ಯೆ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ತಾಲೂಕಿನ ಜೋಹಿಸರಹರಳಹಳ್ಳಿ, ಸುಣಕಲ್ಲಬಿದರಿ, ಹೆಡಿಯಾಲ, ಗುಡ್ಡದಹೊಸಳ್ಳಿ, ಯರೇಕುಪ್ಪಿ, ತಿರುಮಲದೇವರಕೊಪ್ಪ, ಉಕ್ಕುಂದ, ಸರವಂದ, ಪದ್ಮಾವತಿಪುರ, ಕಮದೋಡ, ಹುಣಸಿಕಟ್ಟಿ, ಗೋವಿಂದಬಡಾವಣೆ, ರಾಹುತನಕಟ್ಟಿ ಸೇರಿ ಒಟ್ಟು 16 ಗ್ರಾಮಗಳನ್ನು ಈಗಾಗಲೇ ಗುರುತಿಸಿದ್ದಾರೆ.

ಬ್ಯಾಡಗಿ ಮತಕ್ಷೇತ್ರದಲ್ಲಿ ಹೆಚ್ಚು: ರಾಣೆಬೆನ್ನೂರ ತಾಲೂಕಿನ ಬ್ಯಾಡಗಿ ಮತಕ್ಷೇತ್ರಕ್ಕೆ ಸೇರಿರುವ ಗ್ರಾಮಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಭಾಗದ ಪ್ರತಿ ಗ್ರಾಮಗಳಲ್ಲಿ 7ರಿಂದ 8 ಬೋರ್​ವೆಲ್​ಗಳಿವೆ. ಆದರೆ, ಬೋರ್​ವೆಲ್ ಕೊರೆಸಿದ ಕೆಲ ತಿಂಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಇನ್ನು ಹೊಸದಾಗಿ ಬೋರ್​ವೆಲ್ ಕೊರೆಸಲು ಮುಂದಾದರೆ, 600ರಿಂದ 700 ಅಡಿ ಅಗೆದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಸದ್ಯ ಚಾಲ್ತಿಯಲ್ಲಿರುವ ಖಾಸಗಿ ಬೋರ್​ವೆಲ್​ಗಳಿಂದ ನೀರು ಸರಬರಾಜು ಮಾಡಲು ಪ್ರಯತ್ನ ನಡೆಸಿದ್ದೇವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಶುದ್ಧ ನೀರು ಮರೀಚಿಕೆ: ತಾಲೂಕಿನಲ್ಲಿ ಸಹಕಾರಿ ಸಂಘ, ಭೂಸೇನಾ ಇಲಾಖೆ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯಿಂದ ಒಟ್ಟು 109 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಆದರೆ, ಕೆಲ ಗ್ರಾಮಗಳಲ್ಲಿ ನೀರಿನ ಘಟಕಗಳು ದುರಸ್ತಿಯಲ್ಲಿದ್ದರೆ, ಕೆಲವೆಡೆ ನೀರಿನ ಕೊರತೆಯಿಂದ ಬಂದ್ ಆಗಿವೆ. ಇದರಿಂದಾಗಿ ಜನರಿಗೆ ಶುದ್ಧ ಕುಡಿಯುವ ನೀರು ಮರಿಚೀಕೆಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಕೂಡಲೇ ಸಮಸ್ಯೆಯಿರುವ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗ್ರಾಮೀಣ ಭಾಗದಲ್ಲಿ ಸದ್ಯದ ಮಟ್ಟಿಗೆ ಗಂಭೀರ ಸಮಸ್ಯೆಯಿಲ್ಲ. ಹೆಡಿಯಾಲ, ಯರೇಕುಪ್ಪಿಯಲ್ಲಿ ಅಲ್ಪ ಸಮಸ್ಯೆಯಿದ್ದು, ಬೋರ್​ವೆಲ್ ಕೊರೆಸಿದರೂ ನೀರು ದೊರೆಯುತ್ತಿಲ್ಲ. ಬೇರೆ ಮೂಲಗಳಿಂದ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುವ ಗ್ರಾಮಗಳನ್ನು ಗುರುತಿಸಿದ್ದು, ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು.

| ಸಿ.ಬಿ. ಬುದರೂರಮಠ, ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ