ಧೂಳಿಗೆ ಜನ ಹೈರಾಣು

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಪಟ್ಟಣದ ಒಳಚರಂಡಿ ಹಾಗೂ 247 ನೀರು ಪೂರೈಕೆ ಯೋಜನೆ ಕಾಮಗಾರಿ ವಿಳಂಬದಿಂದಾಗಿ ರಸ್ತೆಗಳು ಹದಗೆಟ್ಟು ಹೋಗಿದ್ದು, ಸಾರ್ವಜನಿಕರು ಧೂಳಿನ ಸಮಸ್ಯೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.

ಪಟ್ಟಣದ 23 ವಾರ್ಡ್​ಗಳಲ್ಲಿ ಎರಡು ವರ್ಷಗಳಿಂದ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಜನರು ಓಡಾಡಲು ಬಾರದಂತಾಗಿದೆ. ಎಲ್ಲಿ ನೋಡಿದರೂ ಗುಂಡಿ, ಮಣ್ಣಿನ ರಾಶಿಗಳು ನಿರ್ವಣವಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ತೆರಳಲು ಹರಸಾಹಸ ಪಡಬೇಕಾಗಿದೆ. ಇಂಜಿನಿಯರ್​ಗಳು ಹಾಗೂ ಕಾರ್ವಿುಕರ ನಿರ್ಲಕ್ಷ್ಯದಿಂದ ಕಾಮಗಾರಿ ಅಲ್ಲಲ್ಲಿ ಉಳಿದುಕೊಂಡಿವೆ.

ಮುಖ ಮುಚ್ಚಿಕೊಂಡು ಓಡಾಡಬೇಕು: ಪಟ್ಟಣದ ಯಾವ ರಸ್ತೆಗಳನ್ನೂ ಕೀಳದೆ ಬಿಟ್ಟಿಲ್ಲ. ಎಲ್ಲೆಡೆ ರಸ್ತೆಗಳ ಬಳಿ ಚೇಂಬರ್ ತೆಗೆದು ಮಣ್ಣಿನ ರಾಶಿಗಳನ್ನು ಪಕ್ಕದಲ್ಲಿ ಹಾಕಲಾಗಿದೆ. ಈ ಹಿಂದೆ ಬ್ಯಾಡಗಿಯ ಎಲ್ಲ ರಸ್ತೆಗಳಿಗೆ ಡಾಂಬರ್ ಹಾಕಲಾಗಿತ್ತು. ಆದರೆ, ಈ ಯೋಜನೆ ಆರಂಭವಾದ ಬಳಿಕ ಎಲ್ಲೆಡೆ ರಸ್ತೆಗಳು ಹಾಳಾಗಿವೆ. ಆಟೋ, ಲಾರಿ, ಬಸ್ ಹಾಗೂ ಇತರ ವಾಹನಗಳು ಹೋಗುತ್ತಿದ್ದಂತೆ ಧೂಳೆಬ್ಬಿಸುತ್ತಿದ್ದು, ಉಸಿರು ಕಟ್ಟುವ ವಾತಾವರಣ ಉಂಟಾಗಿದೆ.

ಮುಖ್ಯರಸ್ತೆಯ ವ್ಯಾಪಾರಸ್ಥರಂತೂ ಎರಡು ವರ್ಷಗಳಿಂದ ಸುಸ್ತಾಗಿ ಹೋಗಿದ್ದಾರೆ. ಜನರು ಧೂಳಿನಿಂದ ರಕ್ಷಣೆ ಪಡೆಯಲು ಮೂಗಿಗೆ ಕರವಸ್ತ್ರ, ಮಾಸ್ಕ್ ಹಾಕಿಕೊಂಡು ಓಡಾಡಬೇಕಿದೆ. ಇಲ್ಲವಾದರೆ, ಶ್ವಾಸಕೋಶ ಕಾಯಿಲೆ ಸೇರಿ ಹಲವು ತೊಂದರೆ ಉಂಟಾಗುವ ಸಾಧ್ಯತೆಯಿದೆ. ಕೆಲವೆಡೆ ಕಿತ್ತ ರಸ್ತೆಗಳಿಗೆ ಕಲ್ಲಿನ ಪುಡಿ ಹಾಕಿದ ಪರಿಣಾಮ ವಾಹನಗಳ ಹಿಂದೆ ತೆರಳುವ ಪಾದಚಾರಿಗಳ ಮುಖಕ್ಕೆ ಧೂಳು ಆವರಿಸುತ್ತಿವೆ. ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು ಕಣ್ಣು ಕಾಣಿಸದೆ ಬಿದ್ದ ಘಟನೆಯೂ ಜರುಗಿವೆ. ಆದರೆ, ಅಧಿಕಾರಿಗಳು, ಗುತ್ತಿಗೆದಾರರು ಯಾವುದಕ್ಕೂ ಕ್ಯಾರೆ ಅನ್ನುತ್ತಿಲ್ಲ.

ಇಲ್ಲಿನ ಬೆಟ್ಟದ ಮಲ್ಲೇಶ್ವರ ಬಡಾವಣೆ, ಶೆಟ್ಟರ್ ಓಣಿ, ಗಾಂಧಿನಗರ, ಸಂಗಮೇಶ್ವರ ನಗರ, ಹೊಂಡದ ಓಣಿ, ಮುಖ್ಯರಸ್ತೆ, ಶಿವಪುರ ಬಡಾವಣೆ ಸೇರಿದಂತೆ ಹಲವು ವಾರ್ಡ್​ಗಳ ರಸ್ತೆಗಳನ್ನು ಡಾಂಬರು ಮಾಡದ ಹಿನ್ನೆಲೆಯಲ್ಲಿ ಧೂಳುಮಯವಾಗಿವೆ. ಪ್ರತಿದಿನ ಮಕ್ಕಳು, ವೃದ್ಧರು ಓಡಾಡಲು ತೀವ್ರ ತೊಂದರೆ ಉಂಟಾಗುತ್ತಿದೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಯುಜಿಡಿ ಇಂಜಿನಿಯರ್​ಗಳು ಯಾರ ಮಾತಿಗೂ ಸ್ಪಂದಿಸುತ್ತಿಲ್ಲ. ಇನ್ಮುಂದೆಯೂ ನಿರ್ಲಕ್ಷ್ಯ ತೋರಿದಲ್ಲಿ ಹೋರಾಟಕ್ಕಿಳಿಯಲಾಗುವುದು.

| ಚಂದ್ರು ಛತ್ರದ ಸಾಮಾಜಿಕ ಹೋರಾಟಗಾರ

ಯುಜಿಡಿ ಹಾಗೂ 247 ಯೋಜನೆ ಕಾಮಗಾರಿ ನಡೆಯುತ್ತಿದ್ದು, ಕೆಲವೊಮ್ಮೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿವೆ. ಕಿರಿದಾದ ರಸ್ತೆ ಹಾಗೂ ಓಣಿಗಳಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನಗತಿ ನಡೆಯುತ್ತಿದೆ. ಶೇ. 70ರಷ್ಟು ರಸ್ತೆ ದುರಸ್ತಿಗೊಂಡಿದ್ದು, 15 ದಿನದಲ್ಲಿ ಬಹುತೇಕ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು.

| ಉಮೇಶ ಕಾಮಗಾರಿ ಇಂಜಿನಿಯರ್