ಇನ್ನೊಂದು ಮುಖ ತೋರಿಸಮ್ಮ ಎಂದು ಸುಮಲತಾ ಇಲ್ಲಿಗೆ ಬಂದಾಗ ಕೇಳಿ: ಎಚ್‌ ಡಿ ಕುಮಾರಸ್ವಾಮಿ

ಮಂಡ್ಯ: ಸುಮಲತಾ ಅವರ ಇನ್ನೊಂದು ಮುಖ ತೋರಿಸಮ್ಮ ಎಂದು ಕೇಳಬೇಕು. ಸುಮಲತಾ ಬಂದಾಗ ಕೇಳಬೇಕು. ನಾವು ಕುತಂತ್ರ ಮಾಡಿ, ಯಾರನ್ನೂ ಹೆದರಿಸಿ ಚುನಾವಣೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ.

ಗೆಜ್ಜಲಗೆರೆಯಿಂದ ರೋಡ್ ಶೋ ಆರಂಭಿಸಿ ಮಾತನಾಡಿ, ನಮ್ಮ ಕಡೆಯವರನ್ನು ಸೆಳೆದು, ಸಿಂಗಾಪುರಕ್ಕೆ ಕಳುಹಿಸುತ್ತಾರೆ ಎಂದು ಹೇಳುತ್ತಾರೆ. ನನ್ನ ಒಂದು ಮುಖ ನೋಡಿದ್ದೀರಾ, ಇನ್ನೊಂದು ಮುಖವನ್ನು ನೋಡಬೇಕಾಗುತ್ತದೆ ಎಂದು ಪಕ್ಷೇತರ ಅಭ್ಯರ್ಥಿ ಹೇಳುತ್ತಾರೆ. ನಮ್ಮ ತಾಯಂದಿರು ಅವರು ಬಂದಾಗ ಇನ್ನೊಂದು ಮುಖವನ್ನು ತೋರಿಸಮ್ಮ ಎಂದು ಕೇಳಬೇಕು ಎಂದು ಹೇಳಿದರು.

ಎದುರಾಳಿಯವರು ಚುನಾವಣೆಯಲ್ಲಿ ಅನುಕಂಪ ಪಡೆಯಲು, ಅವರವರೇ ಕಲ್ಲು ಹೊಡೆದುಕೊಂಡು ಆಸ್ಪತ್ರೆಗೆ ದಾಖಲಾಗಿ ನಮ್ಮ ವಿರುದ್ಧ ಕುತಂತ್ರ ನಡೆಸಲು ಮುಂದಾಗಿದ್ದಾರೆ. ಅವರ ಬಳಿ ಅಸ್ತ್ರಗಳೆಲ್ಲ ಮುಗಿದು ಹೋಗಿದೆ. ಹೀಗಾಗಿ ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಮತದಾರರು ಅದಕ್ಕೆಲ್ಲ ಕಿವಿಗೊಡಬೇಡಿ. ನಿಮ್ಮ ಅಭಿವೃದ್ಧಿಗೆ ದುಡಿಮೆ ಮಾಡುವ ನಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಮೊನ್ನೆ ನಮ್ಮ ಸ್ವತಂತ್ರ ಅಭ್ಯರ್ಥಿ ಮನೆಯಲ್ಲಿ ಕೆಲಸ ಮಾಡುವನಿಗೆ 15 ಲಕ್ಷ ನಿವೇಶನದ ಆಮಿಷ ಒಡ್ಡಿ ಹುನ್ನಾರ ನಡೆಸಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡಿದರು. ಅಂತಹ ಕೀಳು ಮಟ್ಟದ ರಾಜಕೀಯ ಮಾಡುವುದು ನಮಗೆ ಗೊತ್ತಿಲ್ಲ. ಅದನ್ನು ಇದುವರೆಗೂ ಮಾಡಿಲ್ಲ. ಮಂಡ್ಯ ಜಿಲ್ಲೆಗೆ 9,000 ಕೋಟಿ ರೂ ಯೋಜನೆ ನೀಡಿದ್ದೇನೆ. ಆದರೆ, ನನಗೆ ತೊಂದರೆ ಮಾಡಲು ಹೊರಟಿದ್ದಾರೆ. ನಾನು ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಿಲ್ಲ. ಇಲ್ಲಿನ ಶಾಸಕರೇ ಅವನನ್ನು ನಿಲ್ಲಿಸಿದ್ದಾರೆ. ನಿಖಿಲ್‌ನನ್ನು ಸೋಲಿಸಲು ಎಲ್ಲ ಪಕ್ಷದವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೃಹತ್‌ ಸೇಬಿನ ಹಾರ ಹಾಕಿ ನಿಖಿಲ್‌ಗೆ ಸ್ವಾಗತ

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ಆರಂಭವಾಗಿದ್ದು, ಹನಕೆರೆಯಲ್ಲಿ ಸಾರ್ವಜನಿಕರು ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದರು. ರೋಡ್ ಶೋ ನಡೆಸುತ್ತಿರುವ ನಿಖಿಲ್‌ ಮತಯಾಚನೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)