ಇಟಗಿ ಗ್ರಾಪಂ ಸಭೆಯಲ್ಲಿ ಸಾರ್ವಜನಿಕರ ಧರಣಿ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಕಾಡುಪ್ರಾಣಿಗಳಿಂದ ಹಾನಿಗೀಡಾದ ಬೆಳೆಗೆ ಪರಿಹಾರ ನೀಡುವುದಕ್ಕಿಂತ, ಕಾಡು ಪ್ರಾಣಿಗಳ ಹಾವಳಿ ತಡೆಯಲು ಶಾಶ್ವತವಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಇಟಗಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಎರಡು ತಾಸು ಧರಣಿ ನಡೆಸಿದರು.

ಇಟಗಿ ರಾಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಲೋಕೇಶ ನಾಯ್ಕ ಅಧ್ಯಕ್ಷತೆಯಲ್ಲಿ ಮಂಗಳವಾರ ಕರೆಯಲಾಗಿದ್ದ ಗ್ರಾಮ ಸಭೆಯಲ್ಲಿ, ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಕ್ಯಾದಗಿ ಆರ್​ಎಫ್​ಒ ಹರೀಶ, ‘ಇಟಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನೂ ಕೊಡುವುದಿದೆ. ಮತ್ತಿನ್ನೇನಾದರೂ ಪರಿಹಾರ ಬೇಕಾದರೆ ಹೇಳಿ’ ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇಟಗಿ ಕೃಷಿ ಪರಿವಾರದ ಅಧ್ಯಕ್ಷ ಗೋವಿಂದರಾಜ್ ಹೆಗಡೆ ತಾರಗೋಡ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೆಶ ಹೆಗಡೆ ಕೊಡ್ತಗಣಿ, ನಾರಾಯಣ ನಾಯ್ಕ, ಗಜಾನನ ಹೆಗಡೆ, ರಮಾನಂದ ಹೆಗಡೆ, ಪಾಂಡು ನಾಯ್ಕ, ವಸಂತ ಹೆಗಡೆ, ರಮಾನಂದ ನಾಯ್ಕ, ಕೃಷ್ಣ ಮಡಿವಾಳ ಇತರರು, ಕಾಡುಪ್ರಾಣಿಗಳ ಉಪಟಳದಿಂದ ಬೆಳೆ ರಕ್ಷಣೆ ಜತೆಗೆ ರೈತರು ಬದುಕುವುದು ಕಷ್ಟವಾಗಿದೆ. ಬೆಳೆಗಾರರಿಗೆ ಪರಿಹಾರ ಬೇಡ. ಮೊದಲು ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಎಂದು ಒತ್ತಾಯಿಸಿದರು.

ಆರ್​ಎಫ್​ಒ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಹಾರದ ಕುರಿತು ತೀರ್ವನವಾಗದಿದ್ದಾಗ ‘ಸ್ಥಳಕ್ಕೆ ಹಿರಿಯ ಅಧಿಕಾರಿಗಳನ್ನು ಕರೆಸಿ. ಅಲ್ಲಿಯವರೆಗೆ ನಾವು ಧರಣಿ ನಡೆಸುತ್ತೇವೆ’ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಸಿಪಿಐ ಪ್ರಕಾಶ, ನೋಡೆಲ್ ಅಧಿಕಾರಿ ಡಾ. ನಂದಕುಮಾರ ಪೈ ಅವರು ಧರಣಿ ನಿರತರು ಹಾಗೂ ಆರ್​ಎಫ್​ಒ ಅವರೊಂದಿಗೆ ಚರ್ಚೆ ನಡೆಸಿ 15 ದಿನದೊಳಗೆ ಆರ್​ಎಫ್​ಒ ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಗ್ರಾಮ ಸಭೆ ನಡೆಸಬೇಕು ಎಂದು ಹೇಳಿದರು. ಆಗ ಗ್ರಾಮಸ್ಥರು ಧರಣಿ ಹಿಂದಕ್ಕೆ ಪಡೆದರು.

ಜಿ.ಪಂ. ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಗ್ರಾ.ಪಂ. ಉಪಾಧ್ಯಕ್ಷ ಶಬ್ಬೀರ್ ಸಾಬ್, ಸದಸ್ಯರು, ಪಿಡಿಒ ರಾಜೇಶ ನಾಯ್ಕ ಉಪಸ್ಥಿತರಿದ್ದರು.

ಸೀಮೆ ಎಣ್ಣೆ ಹಿಡಿದುಬಂದ ರೈತ: ಕಾಡುಪ್ರಾಣಿಗಳಿಂದ ಬೆಳೆ ನಾಶವಾಗಿದ್ದರಿಂದ ಬೇಸತ್ತ ರೈತ ವೆಂಕಟೇಶ ನಾಯ್ಕ ಎಂಬುವವರು ಸೀಮೆ ಎಣ್ಣೆ ಕ್ಯಾನ್​ನೊಂದಿಗೆ ಸಭೆಗೆ ಆಗಮಿಸಿದ್ದರು. ‘ನಮಗೆ ಶಾಶ್ವತ ಪರಿಹಾರ ಕೊಡಿ. ಇಲ್ಲದಿದ್ದರೆ ಸೀಮೆ ಎಣ್ಣೆ ಸುರಿದುಕೊಂಡು ಸಾಯುತ್ತೇನೆ’ ಎಂದು ಎಚ್ಚರಿಕೆ ನೀಡಿ ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವೆಂಕಟೇಶ ನಾಯ್ಕ ಅವರನ್ನು ಗ್ರಾಮಸ್ಥರು ಸಮಾಧಾನಪಡಿಸಿದರು.

Leave a Reply

Your email address will not be published. Required fields are marked *