ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ದೋಹಾ (ಕತಾರ್): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ನ 40 ಯೋಧರಿಗೆ ಕತಾರ್​ನ ದೋಹಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಧದ ಗುಡಿ ಕನ್ನಡಿಗರ ಬಳಗದ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದಲ್ಲಿ ಫೆ.18ರ ಸಂಜೆ 7 ಗಂಟೆಗೆ ಟಿಸಿಎ (ಸೃಜನ ಕಲೆ)ಆವರಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.


ಕರ್ನಾಟಕದ ಎಚ್​. ಗುರು ಸೇರಿ ಹುತಾತ್ಮರಾದ ಎಲ್ಲ 40 ಯೋಧರ ಭಾವಚಿತ್ರಗಳನ್ನು ಇರಿಸಲಾಗಿತ್ತು. ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಜನರು ಒಬ್ಬೊಬ್ಬರಾಗಿ ಬಂದು ದೀಪ ಹೊತ್ತಿಸಿ, ವೀರ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.


ಗಡಿಯಲ್ಲಿ ಕಾವಲು ಕಾಯುವ ಯೋಧರು ಕರ್ಣನ ಕವಚಕುಂಡಲವಿದ್ದಂತೆ. ಭಯೋತ್ಪಾದಕರು ಇಂತಹ ಕವಚಕುಂಡಲಗಳಿಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಇದು ಖಂಡನೀಯ. ಸೈನಿಕರು ದಿನರಾತ್ರಿ ಗಡಿಕಾಯುವುದರಿಂದ, ದೇಶದ ಜನರೆಲ್ಲರೂ ಶಾಂತಿ ಮತ್ತು ನೆಮ್ಮದಿಯಿಂದ ಮಲಗಲು ಸಾಧ್ಯ. ಉಗ್ರರ ಇಂತಹ ಅಮಾನವೀಯ ಕೃತ್ಯಗಳು ಖಂಡನೀಯ ಎಂದು ಸಭೆಯಲ್ಲಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.