ಈ ಚುನಾವಣೆಯಲ್ಲಿ ಬಿಜೆಪಿಗೆ ವೋಟ್​ ಮಾಡುವ ಮೂಲಕ ಜನ ಕಾಂಗ್ರೆಸ್​ಗೆ ಪಾಠ ಕಲಿಸಲಿದ್ದಾರೆ: ಶಿವರಾಜ್​ ಸಿಂಗ್​ ಚೌಹಾಣ್​

ಭೋಪಾಲ್​: ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಮುಖವಾದ ಅಂಶಗಳಿವೆ. ಒಂದು ರಾಷ್ಟ್ರ ಭದ್ರತೆ ಹಾಗೂ ಜನರ ಕಲ್ಯಾಣ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದರು.

ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯಂತಹ ಒಬ್ಬರೇ ನಾಯಕರಿಂದ ಮಾತ್ರ ಸ್ಥಿರ ಸರ್ಕಾರವನ್ನು ನೀಡಲು ಸಾಧ್ಯ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಬಂದು ನಾಲ್ಕು ತಿಂಗಳು ಕಳೆದಿದ್ದು, ಅಸ್ತವ್ಯಸ್ತವಾಗಿರುವ ಪರಿಸರ ನಿರ್ಮಾಣವಾಗಿದೆ. ಬಿಜೆಪಿಯನ್ನು ಆಯ್ಕೆ ಮಾಡದೇ ನಾವು ತಪ್ಪು ಮಾಡಿದೆವು ಎಂದು ಜನರು ಭಾವಿಸುತ್ತಿದ್ದಾರೆ. ಹೀಗಾಗಿ ಜನರು ಖಂಡಿತವಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ವೋಟ್​ ಮಾಡಿ ರಾಜ್ಯದ ಕಾಂಗ್ರೆಸ್​ ನೇತೃತ್ವದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ ಅಭ್ಯರ್ಥಿ ದಿಗ್ವಿಜಯ ಸಿಂಗ್​ ಪರ ಬಿಹಾರದ ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್​ ಪ್ರಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವರಾಜ್​ ಸಿಂಗ್, ದೇಶದ್ರೋಹ ಪ್ರಕರಣ ಹೊಂದಿರುವವರು, ದೇಶವಿರೋಧಿ ಹೇಳಿಕೆ ನೀಡುವವರು ಮಾತ್ರ ಅವರಿಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ಅನ್ನು ಜರಿದರು. (ಏಜೆನ್ಸೀಸ್​)