ಗಾಂಧಿ ಕುಟುಂಬದೊಂದಿಗೆ ದೇಶಕ್ಕೆ ಭಾವನಾತ್ಮಕ ನಂಟಿದೆ, ಇಂದಿರಾ ನೆನಪು ಮಾಸದು ಎಂದ ಶಿವಸೇನೆ ನಾಯಕ

ಮುಂಬೈ: ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ಅವರ ಸಕ್ರಿಯ ರಾಜಕೀಯ ಪ್ರವೇಶಕ್ಕೆ ದೇಶದ ರಾಜಕೀಯ ರಂಗದ ಹಲವು ನಾಯಕರು ಭಿನ್ನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿಯ ದೋಸ್ತಿ ಪಕ್ಷವಾಗಿರುವ ಶಿವಸೇನೆ ಕಾಂಗ್ರೆಸ್​ನಲ್ಲಿನ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

ಈ ಕುರಿತು ಮಾತನಾಡಿರುವ ಶಿವಸೇನೆಯ ಪ್ರಮುಖ ನಾಯಕ, ಪಕ್ಷದ ಮುಖವಾಣಿ ಪತ್ರಿಕೆ ‘ಸಾಮ್ನಾ’ದ ಮಾಜಿ ಸಂಪಾದಕ ಸಂಜಯ್​ ರಾವತ್​, ” ಪ್ರಿಯಾಂಕಾ ಗಾಂಧಿ ಅವರನ್ನು ರಾಜಕೀಯಕ್ಕೆ ಕರೆ ತಂದ ರಾಹುಲ್​ ಗಾಂಧಿ ಅವರ ನಿರ್ಧಾರ ಉತ್ತಮವಾದದ್ದು. ಭಾರತೀಯರು ಯಾವಾಗಲೂ ಗಾಂಧಿ ಕುಟುಂಬದೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಇಂದಿರಾ ಅವರ ಗತ ವೈಭವ ಅಜರಾಮರ.

ಪ್ರಿಯಾಂಕಾ ಅವರ ಪ್ರವೇಶದಿಂದಾಗಿ ಕಾಂಗ್ರೆಸ್​ ಹೆಚ್ಚಿನ ಲಾಭ ಪಡೆಯಲಿದೆ,” ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಂಗ ಪಕ್ಷವಾಗಿರುವ ಶಿವಸೇನೆ, ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಪಾಲುದಾರಿಕೆಯನ್ನೂ ಪಡೆದಿದೆ. ಆದರೆ, ಕೆಲದಿನಗಳಿಂದೀಚೆಗೆ ಬಿಜೆಪಿ ವಿರೋಧಿ ಬೆಳವಣಿಗೆಗಳನ್ನು ಸ್ವಾಗತಿಸುತ್ತಾ ಬಂದಿರುವುದು ಗಮನಾರ್ಹ.