ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಎರಡು ದಿನಗಳ ಕಾಲ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು.

ಬೆಳಗ್ಗೆ 11 ಗಂಟೆಗೆ ಆರಂಭವಾದ ಕವಿಗೋಷ್ಠಿ ಹಾಗೂ ಜನನಿ ಗೋಷ್ಠಿಗಳಲ್ಲಿ ಕುರ್ಚಿಗಳು ಖಾಲಿ ಇದ್ದವು. ಶನಿವಾರ 3ರಿಂದ 4 ಸಾವಿರದಷ್ಟಿದ್ದ ಕನ್ನಡಾಭಿಮಾನಿಗಳ ಸಂಖ್ಯೆ ಭಾನುವಾರ ಇನ್ನಷ್ಟು ಹೆಚ್ಚಾಗಬೇಕಿತ್ತು. ಆದರೆ, ನಿರೀಕ್ಷೆಯಂತೆ ಅರ್ಧದಷ್ಟು ಸಂಖ್ಯೆಯ ಜನರೂ ಸಮ್ಮೇಳನಕ್ಕೆ ಬರಲಿಲ್ಲ. ವೇದಿಕೆಯ ಮುಂಭಾಗದಲ್ಲಿ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಭಾನುವಾರ ಶಿಕ್ಷಕ ಸಮೂಹವು ಶಾಲಾ-ಕಾಲೇಜ್ ರಜೆ ಇದ್ದರೂ ಹೆಚ್ಚಾಗಿ ಆಗಮಿಸಲಿಲ್ಲ. ಕಳೆದ ವಾರದಿಂದ ಜಿಲ್ಲೆಯ ಶಾಸಕರು ಹಾಗೂ ವಿವಿಧ ಜನಪ್ರತಿನಿಧಿಗಳು ರಾಜಕಾರಣದಲ್ಲಿ ಬ್ಯುಜಿಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಅವರ ಹಿಂಬಾಲರು ಹಾಗೂ ಮುಖಂಡರು ಹೆಚ್ಚಾಗಿ ಪಾಲ್ಗೊಳ್ಳಲಿಲ್ಲ.

ಮಳಿಗೆಗಳು ಖಾಲಿ: ಸುಮಾರು 20ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪುಸ್ತಕ, ಆಯುರ್ವೆದ ಔಷಧ, ಹೊಸ ತಂತ್ರಜ್ಞಾನ ವಸ್ತುಗಳು, ಖಾದಿ ಭಂಡಾರ, ಹಳೆಯ ಪತ್ರಿಕೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಸೇರಿ ಹಲವು ಬಗೆಯ ಮಳಿಗೆಗಳಿದ್ದವು. ಶನಿವಾರ ಸ್ವಲ್ಪ ಪ್ರಮಾಣದಲ್ಲಿ ವ್ಯಾಪಾರ ನಡೆದಿತ್ತು. ಭಾನುವಾರ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ತೆರೆದ ಅಂಗಡಿಗಳಿಗೂ ವ್ಯಾಪಾರ ಸಮರ್ಪಕವಾಗಿ ನಡೆದಿಲ್ಲವೆಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಧೂಳಿಗೆ ಸುಸ್ತಾದ ಜನ: ಬೆಳಗ್ಗೆ ಪುರಸಭೆ ಸ್ವಚ್ಛತಾ ಕಾರ್ವಿುಕರು ತಾಲೂಕು ಕ್ರೀಡಾಂಗಣದ ಎಲ್ಲ ಮೈದಾನವನ್ನು ಸ್ವಚ್ಛಗೊಳಿಸಿ, ಧೂಳು ಹಾರದಂತೆ ಟ್ಯಾಂಕರ್ ಮೂಲಕ ನೀರು ಸಿಂಪಡಿಸಿದ್ದರು. ಆದರೆ, ಬಿಸಿಲೇರುತ್ತಿದ್ದಂತೆ ಜೋರಾದ ಗಾಳಿಗೆ ಸಭಿಕರ ಕುರ್ಚಿಗಳತ್ತ ಧೂಳು ಬರತೊಡಗಿತು. ಇದರಿಂದ ಬಹುತೇಕರು ಕಿರಿಕಿರಿ ಅನುಭವಿಸಿದರು. ಅಲ್ಲದೆ, ವೇದಿಕೆ ಮುಂಭಾಗದಲ್ಲಿ ಗಣ್ಯರು ಧೂಳಿನಿಂದ ರಕ್ಷಣೆ ಪಡೆಯಲು ಬ್ಯಾಗ್ ಹಾಗೂ ಪತ್ರಿಕೆ ಮೊರೆ ಹೋದರು.

ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಬೇಸರ: ‘ಜನನಿ’ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಮದ್ರಾಸ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕಿ ತಮಿಳ್ ಸೆಲ್ವಿ, ಪೌರಾಣಿಕ ಕಾಲದಿಂದಲೂ ಮಹಿಳೆಗೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ, ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆ ತೊಲಗಿಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ ಎಂದು ಹೇಳಿದರು.

ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ದೇವತೆ ರೂಪದಲ್ಲಿ ಸ್ಮರಿಸಲಾಗುತ್ತಿದೆ. ನದಿ, ಭೂಮಿ, ಗಂಗೆ ಸೇರಿ ಹಲವು ರೂಪದಲ್ಲಿ ಕರೆಯಲಾಗುತ್ತಿದೆ. ಭಾರತೀಯ ಕುಟುಂಬದಲ್ಲಿ ಮಹಿಳೆಯು ತನ್ನ ಮರ್ಯಾದೆ, ಗೌರವ ಕಾಪಾಡಲು ತ್ಯಾಗ ಮಾಡಿದ್ದಾಳೆ. ಮಹಾಭಾರತ, ರಾಮಾಯಣ ಕಾಲದಿಂದಲೂ ತ್ಯಾಗಮಯಿಯಾಗಿರುವ ಮಹಿಳೆಗೆ ಪರಿಪೂರ್ಣ ಜೀವನ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬುದು ಚರ್ಚೆಯ ವಿಷಯ. ದೇವಸ್ಥಾನಗಳಲ್ಲಿ ಪ್ರವೇಶಕ್ಕೆ ಮಹಿಳೆಗೆ ಏಕೆ ವಿರೋಧಿಸಲಾಗುತ್ತಿದೆ? ಸ್ವಾತಂತ್ರ್ಯ ನಂತರ ಸಾಕಷ್ಟು ಹೋರಾಟ ಮೂಲಕ ಬೆಳವಣಿಗೆ ಕಂಡುಕೊಂಡಿದ್ದೇವೆ. ಈಗ ಯಾರೂ ಅವಮಾನ, ಅಪಮಾನ ಸಹಿಸಲ್ಲ, ಇಂತಹ ವಿಚಾರ ಕುರಿತು ಮಾಧ್ಯಮದಲ್ಲೂ ಗಂಭೀರ ಚರ್ಚೆ ನಡೆಯಬೇಕಿದೆ ಎಂದರು.