ಹೊಳೆಹೊನ್ನೂರು: ಪುಣ್ಯದ ಕೆಲಸ ಮಾಡಿದವರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಮೀಪದ ಆನವೇರಿಯ ಹಿರಿಮಾವುದರಮ್ಮ ಸಭಾ ಭವನದಲ್ಲಿ ಹೊಳೆಹೊನ್ನೂರು ಮಂಡಲ ಕಾರ್ಯಕರ್ತರು ಹಮ್ಮಿಕೊಂಡಿದ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಮತದಾರರ ಋಣ ತೀರಿಸಲು ಸಾಧ್ಯವಿಲ್ಲ. ಒಂದು ತಾಲೂಕಿನಿಂದ ಸಿಗುವಷ್ಟು ಲೀಡ್‌ನ್ನು ಗ್ರಾಮಾಂತರದ ಮೂರು ಜಿಪಂ ಕ್ಷೇತ್ರಗಳು ನೀಡಿರುವುದು ಸುಲಭದ ಮಾತಲ್ಲ. ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಒಂದು ಹೆಜ್ಜೆ ಮುಂದಿಡಲಾಗುವುದು. ದ್ರೋಹ ಮಾಡಿದವರನ್ನು ಜನತೆ ಕ್ಷಮಿಸುವುದಿಲ್ಲ ಎಂಬುದು ಸರ್ವಕಾಲಿಕ ಸತ್ಯ. ಗ್ಯಾರಂಟಿ ತಿಂದು ಹೊಟ್ಟೆ ತುಂಬಿದವರು ಬಿಜೆಪಿಗೆ ಮತ ಹಾಕಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವರು ಮತದಾರರನ್ನು ಕನಿಷ್ಠವಾಗಿ ಕಾಣುತ್ತಿದ್ದಾರೆ. ತೈಲ ಬೆಲೆ ಹೆಚ್ಚಳ ಮಾಡಿ ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಮತ ನೀಡದ ಮತದಾರರ ವಿರುದ್ಧ ಬೆಲೆ ಏರಿಕೆ ಅಸ ಪ್ರಯೋಗಿಸುತ್ತಿದೆ. ಬಿತ್ತನೆ ಸಮಯದಲ್ಲಿ ತೈಲ ಬೆಲೆ ಅನ್ನದಾತನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಮಾತನಾಡಿ, ಡೇಂಜರ್ ಸರ್ಕಾರ ಹೆಚ್ಚು ಕಾಲ ರಾಜ್ಯದಲ್ಲಿ ಉಳಿಯಬಾರದು. ಕಾಂಗ್ರೆಸ್ ಗ್ಯಾರಂಟಿಗಳ ಮಧ್ಯೆ ಮರುಭೂಮಿಯಲ್ಲಿ ಓಯಸಿಸ್‌ನಂತೆ ಬಿಜೆಪಿ ಅರಳಿರುವುದು ಕಾಂಗ್ರೆಸ್‌ಗೆ ನುಂಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿಯ ಸದೃಢ ಕಾರ್ಯಕರ್ತರ ಪಡೆಯು ನಾಯಕರಿಗೆ ಆನೆ ಬಲ ನೀಡುತ್ತಿದೆ ಎಂದರು.
ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದನ್ನು ಬಿ.ವೈ.ರಾಘವೇಂದ್ರ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಿಜೆಪಿ ಸಂವಿಧಾನ ಬದಲಾಯಿಸುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ 106 ಬಾರಿ ಸಂವಿಧಾನ ತಿದ್ದಿದೆ. ಕ್ಷೇತ್ರದ ಅಭಿವೃದ್ಧಿಯ ನಾಗಲೋಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರ‌್ಯಾಂಕ್ ಗಳಿಸಿದರು ಹೆಚ್ಚು ಅಂಕ ಬಂದಿಲ್ಲ ಎಂದು ಚಿಂತಿಸುತ್ತಿದೆ. ಜಸ್ಟ್ ಪಾಸ್ ಆಗಿರುವ ಕಾಂಗ್ರೆಸ್ ಸಂಭ್ರಮಿಸುತ್ತಿದೆ. ಜನತೆಯ ಹೃದಯದಲ್ಲಿ ಜಾಗ ಪಡೆದಿರುವ ಬಿಜೆಪಿಗೆ ಮುಂದಿನ ದಿನಗಳು ಇನ್ನೂ ಉತ್ತಮವಾಗಿವೆ. ರಾಜ್ಯದ ಅಭಿವದ್ಧಿಯನ್ನು ಕಡೆಗಣಿಸಿರುವ ಸರ್ಕಾರ ನಿಗಮಗಳಲ್ಲಿನ ಹಣಕ್ಕೆ ಗಾಳ ಹಾಕುತ್ತಿದೆ. ರಾಜ್ಯ ಸರ್ಕಾರದ ಬೆಲೆ ಏರಿಕೆಯ ದಿನಗಳು ಆರಂಭವಾಗಿವೆ. ಗ್ಯಾರಂಟಿ ನೆಚ್ಚಿಕೊಂಡಿರುವ ರಾಜ್ಯ ಸರ್ಕಾರದ ಮೈಲೆಜ್ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.
ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಜಗದೀಶಪ್ಪಗೌಡ, ಕಿರಣ್ ಕುಮಾರ್ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಸತೀಶ್ ಶೆಟ್ಟಿ, ವೀರಭದ್ರಪ್ಪ ಪೂಜಾರ್, ರುದ್ರೇಶಪ್ಪ, ಷಡಕ್ಷರಪ್ಪ ಗೌಡ, ಎಂ.ಎಸ್.ಚಂದ್ರಶೇಖರ್, ಡಿ.ಮಂಜುನಾಥ್, ಸುಬ್ರಹ್ಮಣಿ, ಎಸ್.ಶ್ರೀನಿವಾಸ್, ರಾಜೇಶ್ ಪಾಟೀಲ್, ಸತೀಶ್ ಸಾವಂತ್, ಬಾಳೋಜಿ ಬಸವರಾಜ್, ಸದಾಶಿವಪ್ಪ ಗೌಡ, ಹಾಲಪ್ಪ ಗೌಡ, ಶಿವನಗೌಡ, ಸಿದ್ದಲಿಂಗಪ್ಪ, ಶಂಕರಮೂರ್ತಿ, ಚಂದ್ರುಕುಮಾರ್, ರವಿಗೌಡ, ಹೇಮಂತ್‌ಗೌಡ, ಚಿದಾನಂದಮೂರ್ತಿ, ಎಂ.ಕುಬೇಂದ್ರಪ್ಪ, ಎ.ಕೆ ತಿಪ್ಪೇಶ್ ಇತರರಿದ್ದರು.
ನೀರು ಕೊಟ್ಟವರಿಗೂ ದುಡ್ಡು ಕೊಟ್ಟಿಲ್ಲ
ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯತ್ತ ಸಾಗುತ್ತಿದೆ. ಅಧಿಕಾರಿಗಳು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಿ ಸರ್ಕಾರಕ್ಕೆ ನೆರವಾದವರಿಗೆ ಹಣ ನೀಡಲು ಮೀನಮೇಷ ಏಣಿಸುತ್ತಿದೆ ಎಂದು ಬಿ.ವೈ.ರಾಘವೇಂದ್ರ ದೂರಿದರು. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಮುಂದಿನ ದಿನಗಳನ್ನು ನೆನೆದರೆ ಭಯವಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಭದ್ರಾವತಿಯ ಕಬ್ಬಿಣ ಕಾರ್ಖಾನೆಯ ಪುನಶ್ಚೇತನಕ್ಕೆ ಶಕ್ತಿ ಮೀರಿ ಕೆಲಸ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಬರುವ ಜಿಪಂ, ತಾಪಂ ಚುನಾವಣೆಗಳನ್ನು ನಿಭಾಯಿಸಲು ಸನ್ನದ್ಧರಾಗಬೇಕು ಎಂದರು.