More

  ನ್ಯಾಯ ವ್ಯವಸ್ಥೆಯ ಮೇಲೆ ಜನರು ವಿಶ್ವಾಸವಿರಿಸುವುದು ಮುಖ್ಯ

  ತೀವ್ರ ತರಹದ ಅಪರಾಧ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವುದಿದ್ದರೆ ಡೆತ್​ವಾರಂಟ್ ಜಾರಿಯಾದ ಏಳು ದಿನಗಳ ಒಳಗಾಗಿ ಸಲ್ಲಿಸುವಂತೆ ಗಡುವು ನಿಗದಿಪಡಿಸಬೇಕೆಂದು ಕೇಂದ್ರ ಸರ್ಕಾರವು ಸವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ಇದಲ್ಲದೆ, ಗಲ್ಲು ಶಿಕ್ಷೆ ಕಾಯಂ ಆದ ಅಪರಾಧಿ ಸವೋಚ್ಚ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿ ತಿರಸ್ಕೃತವಾದ ನಂತರ ಕ್ಯುರೇಟಿವ್ ಅರ್ಜಿ ಸಲ್ಲಿಸುವುದಕ್ಕೂ ಗಡುವು ನಿಗದಿ ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಕೋರಿದೆ.

  ಗಲ್ಲು ಶಿಕ್ಷೆಯನ್ನು ವಿಳಂಬವಿಲ್ಲದೆ ಜಾರಿಮಾಡಲು ಇಂಥ ಕ್ರಮ ಅಗತ್ಯ ಎಂಬುದು ಕೇಂದ್ರದ ಪ್ರತಿಪಾದನೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಾಲ್ವರಿಗೆ ಮರಣದಂಡನೆ ಶಿಕ್ಷೆ ಘೋಷಿಸಲಾಗಿದೆ. ವಿವಿಧ ತಕರಾರು ಅರ್ಜಿಗಳ ಕಾನೂನು ಪ್ರಕ್ರಿಯೆಯಿಂದಾಗಿ ಶಿಕ್ಷೆ ಜಾರಿ ತಡವಾಗುತ್ತಿದ್ದು, ಈಗ ಫೆ.1ರ ಗಡುವು ನಿಗದಿಯಾಗಿದೆ. ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು ಒಬ್ಬರಾದ ಮೇಲೊಬ್ಬರು ಮರುಪರಿಶೀಲನಾ ಅರ್ಜಿ, ಕ್ಯುರೇಟಿವ್ ಅರ್ಜಿ, ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುತ್ತ ಕಾನೂನಿನ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದು, ಇದು ಶಿಕ್ಷೆ ಜಾರಿಯನ್ನು ಆದಷ್ಟು ವಿಳಂಬಿಸುವಂತೆ ಮಾಡುವ ತಂತ್ರ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥ ನಿಲುವಿಗೆ ಬಂದಿದೆ. ಯಾವುದೇ ಶಿಕ್ಷೆಗೆ ಒಳಗಾದ ಅಪರಾಧಿಗಾದರೂ ಕಾನೂನು ಕೆಲ ಅವಕಾಶಗಳನ್ನು ನೀಡುತ್ತದೆ; ಗಲ್ಲಿಗೇರುವವನನ್ನು ಕೂಡ ಕೊನೆಯಾಸೆ ಏನೆಂದು ಕೇಳುವುದು ನಮ್ಮ ವ್ಯವಸ್ಥೆ ಒದಗಿಸಿರುವ ಅವಕಾಶ. ಆದರೆ ಈ ಅವಕಾಶವನ್ನು ಶಿಕ್ಷೆಯ ಜಾರಿಯಲ್ಲಿ ವಿಳಂಬ ಉಂಟುಮಾಡುವ ಉದ್ದೇಶಪೂರ್ವಕ ತಂತ್ರವಾಗಿ ಬಳಸುವುದು ಸಲ್ಲದು. ನಮ್ಮ ಕಾನೂನು ವ್ಯವಸ್ಥೆ ನಿರಪರಾಧಿಗಳಿಗೆ ಅನ್ಯಾಯ ಆಗದಂತೆ ತೀವ್ರ ಎಚ್ಚರವಹಿಸುತ್ತದೆ. ಅದೇ ಸಂದರ್ಭದಲ್ಲಿ, ಎಂಥ ಅಪರಾಧಿಗೂ ಕಾನೂನಾತ್ಮಕ ಅವಕಾಶಗಳನ್ನು ಕಲ್ಪಿಸುತ್ತದೆ. ಉದಾ: ಮುಂಬೈ ಭಯೋತ್ಪಾದಕ ದಾಳಿಯ ಅಜ್ಮಲ್ ಕಸಬ್​ಗೆ ಸಹ ಎಲ್ಲ ರೀತಿಯ ಕಾನೂನು ಅವಕಾಶಗಳನ್ನು ಒದಗಿಸಲಾಗಿತ್ತು. ಇದರಿಂದಾಗಿ ಶಿಕ್ಷೆ ಜಾರಿ ವಿಳಂಬವಾಗುತ್ತದೆ ಎಂಬ ಭಾವನೆ ಜನರಲ್ಲಿ ಮೂಡುವುದು ಸಹಜವಾದರೂ ನ್ಯಾಯಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸುವುದು ಅನಿವಾರ್ಯ. ನ್ಯಾಯಾಧೀಶರ ಕೊರತೆ ಮುಂತಾದ ಕಾರಣಗಳಿಂದಾಗಿ ನಮ್ಮಲ್ಲಿ ಎಲ್ಲ ಹಂತದ ಕೋರ್ಟುಗಳ ಭಾರ ಹೆಚ್ಚುತ್ತಲೇ ಇದೆ. ಇದರಿಂದಾಗಿ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತದೆ. ಇದರೊಟ್ಟಿಗೆ, ಉದ್ದೇಶಪೂರ್ವಕವಾಗಿ ನ್ಯಾಯ ವಿಳಂಬ ಮಾಡಲು ಅಪರಾಧಿಗಳು ತಂತ್ರ ಹೂಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ಹೀಗಾಗಿ ಕಾಲಮಿತಿಯಲ್ಲಿ ಅರ್ಜಿ ಇತ್ಯರ್ಥವಾಗಬೇಕೆನ್ನುವ ವಾದದಲ್ಲಿ ಹುರುಳಿದೆ. ಇದು ಎಲ್ಲ ಬಗೆಯ ಪ್ರಕರಣಗಳಿಗೂ ಅನ್ವಯವಾದರೆ ಅನುಕೂಲ. ಇದಕ್ಕೆ ಪೂರಕವಾಗಿ, ತಂತ್ರಜ್ಞಾನ ಅಳವಡಿಕೆ, ನ್ಯಾಯಾಧೀಶರ ನೇಮಕ ಮುಂತಾಗಿ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ, ನ್ಯಾಯವ್ಯವಸ್ಥೆಯ ಮೇಲೆ ಜನರು ವಿಶ್ವಾಸವಿರಿಸುವುದು ಮುಖ್ಯ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts