ಕೊಳ್ಳೇಗಾಲ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದಿದ್ದು, ಕೊಳ್ಳೇಗಾಲ ಪಟ್ಟಣದಲ್ಲಿ ಸಾರ್ವಜನಿಕರು ಬಹಳ ಕೌತುಕದಿಂದ ಫಲಿತಾಂಶವನ್ನು ವೀಕ್ಷಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಏ.26 ರಂದು ಚುನಾವಣೆ ನಡೆದಿತ್ತು. 39 ದಿನಗಳ ಬಳಿಕ ಇದೀಗ ಫಲಿತಾಂಶ ಹೊರ ಬಂದಿದ್ದು. ಮಂಗಳವಾರ ಬೆಳಗ್ಗೆ ಆರಂಭಗೊಂಡ ಎಣಿಕೆ ಪ್ರಕ್ರಿಯೆ ಫಲಿತಾಂಶವನ್ನು ಸಾರ್ವಜನಿಕರು ಬಹಳ ಆಸಕ್ತಿಯಿಂದ ವೀಕ್ಷಿಸಿದರು.
ಟೀ ಅಂಗಡಿಗಳು, ಹೋಟೆಲ್‌ಗಳು, ಹರಳಿಕಟ್ಟೆಗಳು, ಬಸ್ ನಿಲ್ದಾಣ, ಕಾಲೇಜು ಮೈದಾನಗಳು, ಯುವಕರು, ವಯಸ್ಕರು ತಂಡೋಪ ತಂಡವಾಗಿ ಕುಳಿತು ಮೊಬೈಲ್ ಹಿಡಿದು ಫಲಿತಾಂಶ ನೋಡಿದರು. ಇನ್ನು ಮಹಿಳೆಯರು, ಮಕ್ಕಳು ಮನೆಯಲ್ಲಿರುವ ಟಿವಿಯಲ್ಲಿ ನ್ಯೂಸ್ ಚಾನಲ್‌ಗಳಲ್ಲಿ ಫಲಿತಾಂಶದ ಮಾಹಿತಿ ಪಡೆದುಕೊಂಡರು.
ಬಿಜೆಪಿ, ಇತರ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಹಿನ್ನಡೆ ಆಗಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಗೆಲುವು, ಸೋಲಿನ ಲೆಕ್ಕಚಾರಗಳ ಬಗ್ಗೆ ಚರ್ಚಿಸುತ್ತಿದ್ದರು.
ನಿರೀಕ್ಷೆಯಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಜಯಭೇರಿ ಭಾರಿಸಿದರು. ವಿಶೇಷ ಎಂದತೆ ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ.ಕೆ.ಸುರೇಶ್ ಸೋಲಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದ ದೃಶ್ಯ ಕಂಡುಬಂತು.
ಮತ ಎಣಿಕೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನಸಾಮಾನ್ಯರ ಸಂಚಾರ ವಿರಳವಾಗಿತ್ತು. ಸದಾ ಗಿಜುಗುಡುತ್ತಿದ್ದ ತಾಲೂಕು ಕಚೇರಿ, ನಗರಸಭೆ, ತಾಲೂಕು ಪಂಚಾಯಿತಿ ಇನ್ನಿತರ ಸರ್ಕಾರಿ ಕಚೇರಿಗಳು ಖಾಲಿ ಹೊಡೆಯುತ್ತಿದ್ದವು.