ಆಘಾತದಲ್ಲಿದ್ದ ಹೆಣ್ಣುಮಗಳನ್ನು ಚುನಾವಣೆಗೆ ನಿಲ್ಲಿಸಿದ್ದೀರಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದು ಯಾರಿಗೆ?

ಮಂಡ್ಯ: ಗಂಡನನ್ನ ಕಳೆದುಕೊಂಡ ಆಘಾತದಲ್ಲಿದ್ದ ಹೆಣ್ಣುಮಗಳನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿದ್ದೀರಿ. ನಿಮ್ಮಲ್ಲೇ ಒಬ್ಬರು ಅಭ್ಯರ್ಥಿಯಾಗಿದ್ದರೆ ಸಿಎಂ ವಿರುದ್ಧ ಮಾತನಾಡುವ ನೈತಿಕತೆ‌ ಇರುತ್ತಿತ್ತು. ಆದರೆ, ಅಂಬರೀಷ್ ನಿಧನದ ಬಳಿಕ, ಅವರ ಸಾವನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡು ಅವರ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ದೊಡ್ಡ ಸಾಧನೆ ಮಾಡಿದವರ ರೀತಿಯಲ್ಲಿ ಓಡಾಡುತ್ತಿದ್ದೀರಾ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ವಿರುದ್ಧ ಪರೋಕ್ಷವಾಗಿ ಮಾತನಾಡಿದ ಅವರು, ಇಲ್ಲಿನ ಜನ ಅಭಿವೃದ್ಧಿ, ಅನುಕಂಪ ಎರಡಕ್ಕೂ ಸ್ಪಂದಿಸಿದ್ದಾರೆ. ಸ್ವಾಭಿಮಾನ ಅನ್ನೋದೆಲ್ಲಾ ಯಾರಲ್ಲೂ ಉಳಿದಿಲ್ಲ. ಸ್ವಾಭಿಮಾನ ಉಳಿಸಿಕೊಂಡಿರುವವರು ಈ ಚುನಾವಣೆಗೆ ನಿಂತಿಲ್ಲ. ಅಭಿವೃದ್ಧಿ, ಅನುಕಂಪದ ನಡುವೆ ಲೋಕಸಭಾ ಚುನಾವಣೆ ನಡೆದಿದೆ. ಮಂಡ್ಯ ಜನ ಅಭಿವೃದ್ಧಿ ಪರವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಕಾರ್ಯಕರ್ತರ ಅಭಿಪ್ರಾಯದ ಪಡೆದು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಆದರೆ, ರಾಜಕೀಯ ಅಸಮಾಧಾನಿತರು, ಪಕ್ಷಕ್ಕೆ ದ್ರೋಹ ಮಾಡಿದವರು, ಪಕ್ಷದಿಂದ ತಿರಸ್ಕೃತರಾದವರು ಚುನಾವಣೆಯಲ್ಲಿ ಸಿಎಂ ಮಗನ ವಿರುದ್ಧ ಪ್ರಚಾರ ನಡೆಸಿದರು. ಈಗ ಬೇಡವಾದ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ನಿಖಿಲ್ ಕುಮಾರಸ್ವಾಮಿ ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *