ಹಿಂದಿನ ಬಜೆಟ್​ನಂತಾಗದಿದ್ದರೆ ಸಾಕು!

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಾಣಿಜ್ಯ-ಉದ್ಯಮ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆಯುತ್ತ ಬಂದಿರುವ, ಎರಡನೇ ರಾಜಧಾನಿ ಎಂಬ ಖ್ಯಾತಿಯೂ ಇರುವ ಧಾರವಾಡ ಜಿಲ್ಲೆಗೆ ಹಿಂದಿನ ಸಲ ರಾಜ್ಯ ಮುಂಗಡಪತ್ರದಲ್ಲಿ ಯಾವುದೇ ವಿಶೇಷ ಯೋಜನೆ ಸಿಕ್ಕಿರಲಿಲ್ಲ. ಕುಮಾರಸ್ವಾಮಿ ಅವರಿಗಿಂತ ಮೊದಲು ಸಿದ್ದರಾಮಯ್ಯ ಮಂಡಿಸಿದ ಆಯವ್ಯಯಪತ್ರದಲ್ಲಿ ಮಹಿಳಾ ಎಸ್​ಇಝೆಡ್, ಎಚ್-ಡಿ ಟ್ರ್ಯಾಕ್ ಇತ್ಯಾದಿ ಹೇಳಿದ್ದರೂ ಅದ್ಯಾವುದೂ ಈವರೆಗೆ ಕಾರ್ಯಗತವಾಗಿಲ್ಲ. ಈ ಸಲ…?

ಹಿಂದಿನಂತೆ ಆಗದಿದ್ದರೆ ಸಾಕು ಎಂದು ಜನಸಾಮಾನ್ಯರು ಹಾರೈಸುವಂತಾಗಿದೆ.

ರಾಜ್ಯದಲ್ಲಿ ಎರಡನೇ ದೊಡ್ಡದಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ‘ಬಡತನ’ವನ್ನು ಕರುಣಿಸಿತ್ತು. 117 ಕೋಟಿ ರೂ. ಪಿಂಚಣಿ ಹಣವನ್ನು ಸುದೀರ್ಘ ಅವಧಿಯಿಂದ ಬಾಕಿ ಇಟ್ಟಿತ್ತು. ಸಮ್ಮಿಶ್ರ ಸರ್ಕಾರದ ಕರ್ಣಧಾರತ್ವ ವಹಿಸಿರುವ ಎಚ್.ಡಿ. ಕುಮಾರಸ್ವಾಮಿ ಸಹ ಆ ಹಣವನ್ನು ಇಂದಿನವರೆಗೂ ಕೊಟ್ಟಿಲ್ಲ.

ಸರ್ಕಾರದ ದಿವ್ಯ ನಿರ್ಲಕ್ಷ್ಯ ಮತ್ತು ಪಕ್ಷಪಾತದಿಂದಾಗಿ ಜನೋಪಯೋಗಿ ಕೆಲಸ ಮಾಡಲು ಹಣವಿಲ್ಲದೇ ಕಾಪೋರೇಟರ್​ಗಳು ಜನರ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಾರೆ. ಸದ್ಯದಲ್ಲೇ ಚುನಾವಣೆ ಬೇರೆ ಬರಲಿದೆ. ಈ ಸಲವಾದರೂ ಅದನ್ನು ಕೊಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಕೆಲವು ವರ್ಷದಿಂದ ಧಾರವಾಡ ಜಿಲ್ಲೆಯಲ್ಲಿ ಒಂದೂ ಬೃಹತ್ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಈಗಾಗಲೇ ಇರುವ ಕೈಗಾರಿಕಾ ವಸಾಹತುಗಳ ಸ್ಥಿತಿ ಶೋಚನೀಯವಾಗಿದೆ. ಬರ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಮಹದಾಯಿ ವಿಷಯದಲ್ಲಿ ನ್ಯಾಯಾಧಿಕರಣದ ಐತೀರ್ಪ ನೋಡಿಕೊಂಡು ಮುಂದಿನ ಕ್ರಮ ಜರುಗಿಸುವುದಾಗಿ ಕಳೆದ ಮುಂಗಡಪತ್ರದಲ್ಲಿ ಹೇಳಿದ್ದ ಕುಮಾರಸ್ವಾಮಿಯವರು ಒಂದು ಪೈಸೆಯನ್ನೂ ಖಚಿತಪಡಿಸಿರಲಿಲ್ಲ. ಈಗ ಸರ್ಕಾರವೇ ಮೇಲ್ಮನವಿ ಸಲ್ಲಿಸಿದೆ. ಈ ಸಲವಾದರೂ ಬಹುನಿರೀಕ್ಷಿತ ಯೋಜನೆಗೆ ಆಯವ್ಯಯದ ಬೆಂಬಲ ಒದಗಿಸುವರೆ?

ಕೇಂದ್ರ ಸರ್ಕಾರ ರಸ್ತೆ ಸುಧಾರಣೆಗೆ ಧಾರಾಳವಾಗಿ ಕೊಡುಗೆ ನೀಡಿದೆ. ಆದರೆ, ಭೂಸ್ವಾಧೀನಕ್ಕೆ 150-200 ಕೋಟಿ ರೂ. ವಿಶೇಷ ಅನುದಾನ ಬೇಕು. ಅದನ್ನಾದರೂ ಖಚಿತಪಡಿಸಬಹುದೆ? ಸೊರಗಿ ಹೋಗಿರುವ ರೈತ ಸಮೂಹಕ್ಕೆ ಪುಷ್ಟಿ ನೀಡಲು ಆಹಾರ ಸಂಸ್ಕರಣೆಯಂಥ ಉದ್ಯಮಕ್ಕೆ ಸಂಬಂಧಿಸಿ ವಿಶೇಷ ಯೋಜನೆ ಘೊಷಿಸಬಹುದೆ? ಇಸ್ರೇಲ್ ಮಾದರಿ ಕೃಷಿ ಯೋಜನೆ ವಿಸ್ತರಿಸಬಹುದೆ ಎಂದು ಜನ ಕಾಯುತ್ತಿದ್ದಾರೆ.