More

    ಜನರ ಹಿತವೇ ಮುಖ್ಯ

    ರಾಜ್ಯದ ಮಹತ್ವದ ಯೋಜನೆಗಳು, ಬೇಡಿಕೆ, ಅನುದಾನ ಹಂಚಿಕೆ, ನೆರೆ ಪರಿಹಾರ ಹೀಗೆ ಎಲ್ಲ ವಿಷಯದಲ್ಲೂ ಕೇಂದ್ರ ಸರ್ಕಾರ ಕರ್ನಾಟಕದ ದನಿಯನ್ನು ನಿರ್ಲಕ್ಷಿಸುತ್ತಿದೆ ಎಂಬುದಕ್ಕೆ ಕಳೆದ ಕೆಲ ತಿಂಗಳುಗಳ ಬೆಳವಣಿಗೆಗಳೇ ಸಾಕ್ಷಿ. ನರೇಂದ್ರ ಮೋದಿ ಸ್ಪಂದನಶೀಲ ಪ್ರಧಾನಿಯಾಗಿ, ಮಹತ್ವದ ವಿಷಯಗಳ ಬಗ್ಗೆ ತಕ್ಷಣ ಸ್ಪಂದಿಸುತ್ತಾರೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ, ಕರ್ನಾಟಕದ ವಿಷಯ ಬಂದಾಗ ಈ ಸ್ಪಂದನೆ ಏಕೆ ಇರುವುದಿಲ್ಲ ಎಂಬುದೇ ಜನಸಾಮಾನ್ಯರ ಪ್ರಶ್ನೆ. ಅಭಿವೃದ್ಧಿ ಯೋಜನೆಗಳ ವಿಷಯ ಇರಲಿ ಕರ್ನಾಟಕ ಭಾರಿ ನೆರೆಯಿಂದ ನಲುಗಿ, ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾದರೂ, ಪ್ರಧಾನಿ ಏನೂ ಮಾತನಾಡಲಿಲ್ಲ. ಅದೇ ಸಂದರ್ಭದಲ್ಲಿ ಬೇರೆ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದನ್ನು ಕರ್ನಾಟಕದ ಜನತೆ ಮರೆತಿಲ್ಲ. ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದರೂ 3,800 ಕೋಟಿ ರೂ.ಬದಲಿಗೆ ಸಿಕ್ಕಿದ್ದು, ಬರೀ  1,200 ಕೋಟಿ ರೂ. ನರೇಗಾ ಯೋಜನೆಯಡಿ ಗ್ರಾಮೀಣಭಾಗದಲ್ಲಿ ಜನರಿಗೆ ಉದ್ಯೋಗ ನೀಡಿದ ಬಾಬ್ತು ಬಾಕಿ ಹಣ  2 ಸಾವಿರ ಕೋಟಿ ರೂ.ಕೇಂದ್ರದಿಂದ ಬರಬೇಕಿದೆ. ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ.

    ಈ ಬಾರಿ ಕರ್ನಾಟಕ ಬಿಜೆಪಿಯಿಂದಲೇ 25 ಸಂಸದರನ್ನು ಲೋಕಸಭೆಗೆ ಕಳುಹಿಸಿದೆ. ಇಷ್ಟು ಪ್ರಮಾಣದ ಬಿಜೆಪಿ ಸಂಸದರು ಹಿಂದೆಂದೂ ಇರಲಿಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಇತ್ತೀಚಿನ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲೂ ಜನಾದೇಶ ಬಿಜೆಪಿ ಪರ ದೊರೆತ ಪರಿಣಾಮ, ರಾಜ್ಯದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇಷ್ಟು ದೊಡ್ಡಪ್ರಮಾಣದಲ್ಲಿ ಜನ ಆಶೀರ್ವದಿಸಿದರೂ, ಜನದನಿಯನ್ನು, ಅವರ ಬೇಡಿಕೆಗಳನ್ನು ಆಲಿಸಲು ಕೇಂದ್ರ ಸಿದ್ಧವಿಲ್ಲ ಎಂದರೆ ಅದು ಮಲತಾಯಿ ಧೋರಣೆ ಅಲ್ಲದೆ ಮತ್ತೇನು? ಉಪಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಷಯದಲ್ಲಿ ಕರ್ನಾಟಕ ಪರ ನಿಲುವು ತಳೆದಂತೆ ಕಂಡ ಕೇಂದ್ರ ಸರ್ಕಾರ, ಆ ಬಳಿಕ ಹಿಂದಡಿ ಇಟ್ಟಿತು. ಇದು ಉತ್ತರ ಕರ್ನಾಟಕ ಜನರಿಗೆ ಮಾಡಿದ ಮೋಸ ಅಲ್ಲವೇ? ನೆರೆ ನಂತರ ಅಲ್ಲಿನ ಜನರಿಗೆ ಇನ್ನೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಅರಿತುಕೊಂಡಿದೆಯೇ?

    ಗುರುವಾರ ತುಮಕೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಎರಡನೇ ಹಂತ ಲೋಕಾರ್ಪಣೆ ಮಾಡಿ, ಸಾಧಕ ರೈತರನ್ನು ಗೌರವಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಬೇಡಿಕೆಗಳ ಬಗ್ಗೆ ಪ್ರಧಾನಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

    ಮೂರೂವರೆ ದಶಕದ ನಂತರ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇರುವುದರಿಂದ ಜನರು ನ್ಯಾಯದ ನಿರೀಕ್ಷೆ, ಅಭಿವೃದ್ಧಿಯ ಕನಸುಗಳನ್ನು ಇರಿಸಿಕೊಂಡಿದ್ದಾರೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸುವುದು, ಕೇಂದ್ರದ ಯೋಜನೆಗಳಲ್ಲಿ ಕರ್ನಾಟಕಕ್ಕೆ ಮಹತ್ವದ ಪಾಲು ದೊರಕಿಸಿ ಕೊಡುವುದು ಸರ್ಕಾರದ ಜವಾಬ್ದಾರಿಯೂ ಹೌದು. ಪ್ರಧಾನಿ ಕರ್ನಾಟಕ ಪ್ರವಾಸದ ಬಳಿಕವಾದರೂ, ರಾಜ್ಯದ ಪರಿಸ್ಥಿತಿ ಅವರಿಗೆ ಅರ್ಥವಾಗಿ, ನ್ಯಾಯ ದೊರೆಯಲಿ ಎಂಬ ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts