ಕಾನಹೊಸಹಳ್ಳಿ: ಮಹಿಳೆಯರು, ಮಕ್ಕಳು ಸೇರಿ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾದರೂ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ತಿಳಿಸಿದರು.
ಇದನ್ನೂ ಓದಿ: ವಿಪಕ್ಷಗಳ ಪ್ರತಿಭಟನೆ ಗುಮ್ಮ, ಪೊಲೀಸ್ ಸರ್ಪಗಾವಲು
ಇಲ್ಲಿನ ಪೊಲೀಸ್ ಠಾಣೆಯಿಂದ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು. ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ಮಟ್ಕಾ, ಇಸ್ಪೀಟ್ ಸೇರಿ ಇತರ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಅಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಮನೆಗೆ ಬೀಗ ಹಾಕಿ ಯಾರಾದರೂ ಕುಟುಂಬ ಸಮೇತ ಊರುಗಳಿಗೆ ಹೋಗುವುದಿದ್ದರೆ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡುವ ಜತೆಗೆ ಠಾಣೆಗೆ ತಿಳಿಸುವುದು ಒಳಿತು ಎಂದರು.
ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಬ್ಯಾಂಕ್‌ಗಳ ಹೆಸರಿನಲ್ಲಿ ಕರೆ ಮಾಡುವ ದುರುಳರು ಹಣ ಲಪಟಾಯಿಸುವ ಕುರಿತು ಎಚ್ಚರವಿರಬೇಕು. ಹಳ್ಳಿಗಳಲ್ಲಿ ಯಾರಾದರೂ ಕುಡಿದು ಗಲಾಟೆ ಮಾಡುವುದು, ತೊಂದರೆ ಕೊಡುವುದು ನಡೆಯುತ್ತಿದ್ದರೆ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಅಂಗಡಿ, ಹೋಟೆಲ್ ನಡೆಸುವವರು ಕಸವನ್ನು ರಸ್ತೆಗೆ ಹಾಕುತ್ತಿದ್ದು, ತಡೆಯಬೇಕು ಎಂದು ದಸಂಸ ತಾಲೂಕು ಸಂಚಾಲಕ ಎಳನೀರು ಗಂಗಾಧರ ಕೋರಿದರು. ಉಜ್ಜಿನಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್, ಬಸ್, ಆಟೋಗಳನ್ನು ನಿಲ್ಲಿಸುವುದರಿಂದ ಸಂಚಾರ ಸಮಸ್ಯೆಯಾಗುತ್ತಿದೆ ಎಂದು ಮುಖಂಡರು ಸಭೆಗೆ ತಿಳಿಸಿದರು. ಗಾಣಿಗರ ಸಮುದಾಯ ಭವನ ಎದುರಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅವೈಜ್ಞಾನಿಕವಾಗಿ ಹಾಕಿರುವ ಡಿವೈಡರ್ ಬದಲಿಸಬೇಕು ಎಂದು ಕೆ.ಎಸ್.ವಿಶ್ವನಾಥ ಒತ್ತಾಯಿಸಿದರು.
ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಪಿಎಸ್‌ಐ ಸಿದ್ರಾಮ ಬಿದರಾಣಿ ಪ್ರತಿಕ್ರಿಯಿಸಿ, ರಸ್ತೆಗಳಲ್ಲಿ ಕಸ ಹಾಕದಂತೆ ತಡೆಯಲು ಸಂಬಂಧಿತ ಗ್ರಾಪಂಗೆ ತಿಳಿಸಲಾಗುವುದು. ಉಜ್ಜಿನಿ ರಸ್ತೆಯ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.