ವಿಂಗ್​ ಕಮಾಂಡರ್​ ಅಭಿನಂದನ್​ ಬಿಡುಗಡೆಗೆ ಕ್ಷಣಗಣನೆ: ರಾಜ್ಯಾದ್ಯಂತ ಸಂಭ್ರಮಾಚರಣೆ

ಬೆಂಗಳೂರು: ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಜನರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಹಾವೇರಿಯ ನೇತಾಜಿ ನಗರದಲ್ಲಿರುವ ಇಂಜಿನಿಯರಿಂಗ್​ ವಸತಿ ನಿಲಯದ ವಿದ್ಯಾರ್ಥಿನಿಯರು ಸಿಹಿ ಹಂಚಿ ಅಭಿನಂದನ್​ ಮತ್ತು ಭಾರತ ಮಾತೆಗೆ ಜೈಕಾರ ಕೂಗಿ ಸಂಭ್ರಮಿಸಿದರು. ಸಕ್ಕರೆ ನಾಡು ಮಂಡ್ಯದ ಸಂಜಯ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾರತೀಯ ಸೇನೆಯ ಪರ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ವೀರ ಯೋಧ ಅಭಿನಂದನ್​ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಅವರಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಇನ್ನು ದಾವಣಗೆರೆಯಲ್ಲಿ ಹಿಂದು ಜಾಗರಣ ವೇದಿಕೆಯ ವತಿಯಿಂದ ಜಯದೇವ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಕಲಬುರಗಿಯಲ್ಲಿ ಅಭಿನಂದನ್​ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ನೃತ್ಯ ಮಾಡುವ ಮೂಲಕ ಸಂಭ್ರಮ ಪಟ್ಟರು.