ಇಂಡಿ: ಪಟ್ಟಣದ ಗಣಪತಿ ಗುಡಿಯಿಂದ ಮಿನಿ ವಿಧಾನಸೌಧದವರೆಗಿನ ರಸ್ತೆಯಲ್ಲಿ ಅತಿಕ್ರಮಣವಾಗಿದ್ದ ಜಾಗವನ್ನು ಮೂರು ಜೆಸಿಬಿ ಯಂತ್ರಗಳ ಮೂಲಕ ಶನಿವಾರ ಕಂದಾಯ ಉಪವಿಭಾಗಾ-ಧಿಕಾರಿ ಅಬೀದ್ ಗದ್ಯಾಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಇನ್ನೂ ಕಾರ್ಯಾಚರಣೆ ಮುಂದುವರಿಯಲಿದೆ.
ಪಟ್ಟಣದ ಮಿನಿ ವಿಧಾನಸೌಧದಿಂದ ಸಾಲೋಟಗಿ ಗ್ರಾಮಕ್ಕೆ ಹೋಗುವ ಹಳೇ ರಸ್ತೆಯನ್ನು ಪಟ್ಟಣದ ಮಧ್ಯಭಾಗದಲ್ಲಿ ಅಂದಾಜು 200 ಮೀಟರ್ ರಸ್ತೆಯನ್ನು ಕಳೆದ 25 ವರ್ಷಗಳಿಂದ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯಿಂದ ಒತ್ತುವರಿಯಾಗಿತ್ತು.
ಇದರಿಂದ ಈ ಭಾಗದಲ್ಲಿ ಗಟಾರದ ನೀರು ನಿಂತು, ಅದನ್ನು ಸ್ವಚ್ಛಗೊಳಿಸಲು ಕೂಡ ಪುರಸಭೆಯ ಕಾರ್ಮಿಕರಿಗೆೆ ಸ್ಥಳವಿಲ್ಲದಂತಾಗಿತ್ತು. ಗಬ್ಬು ವಾಸನೆ ಹರಡಿ, ಸಾಂಕ್ರಾಮಿಕ ರೋಗಗಳಿಗೆ ಭೀತಿ ಹೆಚ್ಚಾಗಿತ್ತು.
ಈ ಬಗ್ಗೆ ಸಾರ್ವಜನಿಕರು ಹಲವಾರು ಸಲ ಉಪ ಕಂದಾಯ ವಿಭಾಗಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುತ್ತ ಬರಲಾಗಿತ್ತು. ಈ ಬಗ್ಗೆ ಒಂದೆರಡು ಬಾರು ಲೋಕಾಯುಕ್ತರಿಗೂ ಮನವಿ ಸಲ್ಲಿಸಲಾಗಿತ್ತು.
ಇತ್ತೀಚೆಗೆ ಈ ಬಗ್ಗೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡಿರುವ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮತ್ತು ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಪುರಸಭೆಯ ಸದಸ್ಯ ಅನೀಲಗೌಡ ಬಿರಾದಾರ ಅವರು ಸಿಟಿ ಸರ್ವೆ ಇಲಾಖೆಯಿಂದ ರಸ್ತೆ ಒತ್ತುವರಿಯಾದ ಬಗ್ಗೆ ಸರ್ವೆ ಕಾರ್ಯ ಮಾಡಿಸಿದ್ದರು.
ತೆರವು ಕಾರ್ಯಕ್ಕೆ ಈ ಭಾಗದ ಸಾರ್ವಜನಿಕರು, ಪಟ್ಟಣ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಪಟ್ಟಣದಲ್ಲಿ ಇನ್ನೂ ಹಲವಾರು ರಸ್ತೆಗಳು ಅತಿಕ್ರಮಣಗೊಂಡಿದ್ದನ್ನೂ ಕೂಡ ಗುರುತಿಸಿ ತೆರವು ಮಾಡಬೇಕು ಎಂದು ತಿಳಿಸಿದ್ದಾರೆ.