More

  ಜನ ಶೇ. 1; ದೇಶದ ಸಂಪತ್ತು ಶೇ. 45ರಷ್ಟು!

  ಸಂಪತ್ತಿನ ತಾಯಿಬೇರು ಎಂದರೆ ಆರ್ಥಿಕ ಚಟುವಟಿಕೆಗಳು. ಅದು ಇಲ್ಲದಿದ್ದರೆ ದುಃಖ-ದುಮ್ಮಾನ ಬಡತನ ಬರುತ್ತದೆ -ಇದು ಕೌಟಿಲ್ಯನ ಮಾತು. ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಹೇಳಿದ ಈ ಮಾತು ಇಂದಿಗೂ ಸತ್ಯ. ಉದಾರೀಕರಣ ಯುಗದಲ್ಲಿ ಕೌಟಿಲ್ಯನ ಮಾತು ಅಕ್ಷರಶಃ ಪಾಲನೆ ಆಗಿದೆ. ಅಂದರೆ ಕೌಟಿಲ್ಯನ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ. ಅದರ ಫಲಶೃತಿ ಏನು ಗೊತ್ತೇ? ನಮ್ಮ ದೇಶದಲ್ಲಿ ಇಂದು ಶೇ. 1ರಷ್ಟು ಜನರು ನಮ್ಮ ದೇಶದ ಶೇ. 42.5ರಷ್ಟು ಸಂಪತ್ತನ್ನು ಬಾಚಿಕೊಂಡಿದ್ದಾರೆ! ದೇಶದಲ್ಲಿ ಬಡತನರೇಖೆಯ ಬಳಿ ಇರುವ ಶೇ. 50 ರಷ್ಟು ಜನರು ಕೇವಲ ಶೇ. 2.8 ರಷ್ಟು ದೇಶದ ಸಂಪತ್ತಿಗೆ ಭಾಜನರಾಗಿದ್ದಾರೆ! ಎಂಥ ಅಸಮತೆ; ಏನಿದು ಅವಾಂತರ! ಇದನ್ನೇ ಅತ್ಯಂತ ಕುಶಾಗ್ರಮತಿಯಾದ ಜಗತ್ಪ್ರಸಿದ್ಧ ಕೌಟಿಲ್ಯನು ಹೇಳಿದ್ದು?

  ಖಂಡಿತ ಅಲ್ಲ. ಅವನು ಹೇಳಿದ ವಾಕ್ಯದ ಮೊದಲ ಭಾಗ- ಆರ್ಥಿಕ ಚಟುವಟಿಕೆಗಳು ಸಂಪತ್ತಿನ ತಾಯಿಬೇರು ಎಂಬುದು. ಆದರೆ ಅಷ್ಟೇ ಅವನ ಮಾತಿನ ತಿರುಳು ಅಲ್ಲವೇ ಅಲ್ಲ. ಇದು ಅರ್ಧ ವಾಕ್ಯ; ಅರ್ಧಸತ್ಯ. ಇದರಿಂದಾಗಿಯೇ ದೇಶದ ಅರ್ಧದಷ್ಟು ಸಂಪತ್ತು ಕೆಲವೇ ಜನರ ಪಾಲಾಗಿದೆ. ದೇಶದ ಬಹುಪಾಲು ಜನರು ಉದಾರೀಕರಣ ಯುಗದಲ್ಲಿ ಹಿಂದೆ ಬಿದ್ದಿದ್ದಾರೆ.

  ಇದು ನಿಮಗೆ ಅರ್ಥವಾಗಬೇಕಾದರೆ ಈ ಮಾಹಿತಿ ನೋಡಿ: ಇದು 2020 ರ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ಇದೆ. ಅದೆಂದರೆ ನಮ್ಮ ದೇಶದ ಉತ್ಪತ್ತಿಯಲ್ಲಿ ಕೃಷಿ ಪೈರಿನ ಪಾಲು ಶೇ. 10 ಮಾತ್ರ. ಅಂದರೆ ಇಡೀ ದೇಶದ ರೈತಾಪಿ ವರ್ಗದ ದುಡಿಮೆಯ ಫಲ, ಇಡೀ ಗ್ರಾಮೀಣ ಜನರ ಶ್ರಮದ ಫಲ ದೇಶದಲ್ಲಿ ಎಂದರೆ 10ರಷ್ಟು ಮಾತ್ರ! ಅದೇ ಕಾಲದಲ್ಲಿ ಇನ್ನೊಂದು ಮಹತ್ತರ ಮಾಹಿತಿ ಇದೆ ನೋಡಿ. ಅದೆಂದರೆ ಪೈರಿನ ಪಾಲು ಶೇ. 10 ಇದ್ದರೆ ಪಶುಸಂಗೋಪನೆಯ ಪಾಲು ಶೇ. 4.92! ಇದು ಪ್ರಧಾನ; ಇದು ಬೆರಗಾಗುವಂತಿದೆ. ದೇಶದ ಗ್ರಾಮೀಣ ಜನರ ಸಂಪಾದನೆಯ ಜೀವನಾಡಿ ಎಂದರೆ ಪಶುಪಾಲನೆಯೇ! ಆದರೆ ಅದರ ಗತಿ ಏನಾಗಿದೆ? ನಮ್ಮ ಅರ್ಥ ವ್ಯವಸ್ಥೆಯಲ್ಲಿ ಇದನ್ನು ಲೆಕ್ಕಕ್ಕೆ ಇಟ್ಟಿಲ್ಲ! ಕೃಷಿ ಮೂಲೆಗುಂಪಾಗಿದೆ ನಿಜ. ಆದರೂ ಕೃಷಿ ಸಾಲಕ್ಕೆ ಒಂದಿಷ್ಟು ಮನ್ನಣೆ ಇದೆ. ಈ ಬಜೆಟ್ನಲ್ಲಿ 15 ಲಕ್ಷ ಕೋಟಿ ರೂಪಾಯಿ ಎಂಬುದು ಕೃಷಿ ಬ್ಯಾಂಕ್ ಸಾಲದ ಮಿತಿ ಆಗಿದೆ. ಅದು ಏರಿದೆ. ಆದರೆ ಬೇಕಾಗಿರುವುದೇ ಮುಂಗಾರಿಗೆ 6 ಲಕ್ಷ ಕೋಟಿ ರೂಪಾಯಿ ಮಾತ್ರ! ಹಿಂಗಾರಿನ ದುಡ್ಡೆಲ್ಲಾ ಷೇರುಪೇಟೆಗೆ ಕೃಷಿ ಸಾಲದ ರೂಪದಲ್ಲಿ ಸಾಗುತ್ತದೆ!! ಇದು ಅಚ್ಚರಿಯಾದರೂ ನಿಜ. ಜನವರಿ-ಮಾರ್ಚ್ ಅವಧಿಯಲ್ಲಿ ಕೃಷಿ ಸಾಲದ ಶೇ. 46ರಷ್ಟು ವಿನಿಯೋಗವಾಗುತ್ತದೆ ! ಅದೂ ಎಲ್ಲಿ? ಅದು ಮೆಟ್ರೋ ಕೃಷಿಗೆ ಹೋಗುತ್ತದೆ! ಕೃಷಿಗೆ 11 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲವೇ ಸಾಕು ಬೇಕಾದಷ್ಟು. ಕೃಷಿಗೆ ಬೇಸಾಯಕ್ಕೆ ಬೇಕಾಗಿರುವ ಹಣ ಎಷ್ಟು ಗೊತ್ತೇ? ಕೃಷಿ ಸಾಲದಲ್ಲಿ ಶೇ. 40 ಹಣ ಮಾತ್ರ. ಉಳಿದ ಹಣ ಪರರ ಪಾಲಾಗುತ್ತದೆ! ಅದರಲ್ಲೂ ಕೃಷಿ ವಲಯದ ಉತ್ಪತ್ತಿಯಲ್ಲಿ ಶೇ. 60 ಮಾತ್ರ ಪೈರಿನ ಪಾಲು. ಕೃಷಿ ವಲಯದಲ್ಲಿ ಪಶುಪಾಲನೆಯ ಪಾಲು ಶೇ. 40ಕ್ಕೂ ಮೀರಿದೆ. ಆದರೂ ಕೃಷಿ ವಲಯದ ಸಾಲದಲ್ಲಿ ಪಶುಪಾಲನೆಯ ಪಾಲು ಶೇ. 9 ಮಾತ್ರ! ಏಕೆಂದರೆ ಪಶುಪಾಲನೆಯ ಬಡಜನರು ಅನಾಮಿಕರು. ಅವರಲ್ಲಿ ದಾಖಲೆ ಪತ್ರಗಳು ಇರುವುದಿಲ್ಲ. ಇವರಿಗೆ ಸರ್ಕಾರಿ ಹಾಗೂ ಬ್ಯಾಂಕ್ ಸಾಲ ದುರ್ಲಭ. ಆದರೂ ನೋಡಿ, ಇವರೇ ನಮ್ಮ ದೇಶದ ಯಶಸ್ವಿ ಉತ್ಪತ್ತಿದಾರರು; ಗ್ರಾಮೀಣ ಭಾರತವನ್ನು ಸಾಕಿಸಲಹುತ್ತಿರುವವರು ಇವರೇ! ಸಲಾಂ ಪಶುಪತಿಗಳೇ!

  ಅದಿರಲಿ, ಪುನಃ ನಾವು ಕೌಟಿಲ್ಯನ ಮಾತಿಗೆ ಬರೋಣ. ಕೌಟಿಲ್ಯನ ಮಾತು ಬಂದಿರುವುದು ಈ ಬಾರಿಯ ಕೇಂದ್ರ ಬಜೆಟ್ ಮಂಡನೆಯ ಪೂರ್ವದಲ್ಲಿ ಪ್ರಕಟವಾದ ಆರ್ಥಿಕ ಸಮೀಕ್ಷೆಯಲ್ಲಿ. ಇಲ್ಲಿ ಒಂದು ಅಧ್ಯಾಯವನ್ನು ಸಂಪತ್ತಿನ ಸೃಷ್ಟಿಗೇ ಮೀಸಲಿಡಲಾಗಿದೆ! ಸಂಪತ್ತಿನ ಸೃಷ್ಟಿ ಈಗ ಕೇಂದ್ರ ಸರ್ಕಾರದ ಉಸಿರು; ಅದೇ ದೀಕ್ಷೆ; ಅದೇ ಹೆಬ್ಬಯಕೆ ;ಅದೇ ಕನಸು! ಏಕೆಂದರೆ ಇನ್ನು 5 ವರ್ಷಗಳಲ್ಲಿ ದೇಶವನ್ನು 5 ಟ್ರಿಲಿಯನ್ (ಲಕ್ಷ ಕೋಟಿ ) ಡಾಲರ್ ಜೆಡಿಪಿ ಗಾತ್ರಕ್ಕೆ ಏರಿಸಬೇಕು ಎಂಬುದೇ ಈ ಹಂಬಲ. 5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯನ್ನು ಮಾಡಲು ಈಗ ಸರ್ಕಾರ ಹೊರಟಿದೆ. ಅದಕ್ಕೆ ಹಿಡಿದಿರುವ ದಾರಿಯಾದರೂ ಏನು? ಹೇಗೆ ಈ ಸಂಪತ್ತಿನ ಸೃಷ್ಟಿ? ಏಕೆ ಈ ಗುರಿ?

  ಅಮೆರಿಕದ ಜೆಡಿಪಿ ಗಾತ್ರ 21.4 ಟ್ರಿಲಿಯನ್ ಡಾಲರ್. ಚೀನಾದ ಗಾತ್ರ 14.1 ಟ್ರಿಲಿಯನ್ ಡಾಲರ್. ಜಪಾನ್ 5.2 ಲಕ್ಷ ಕೋಟಿ ಡಾಲರ್ ಗಾತ್ರದಲ್ಲಿದೆ. ಜರ್ಮನಿಯದು 3.9 ಟ್ರಿಲಿಯನ್ ಡಾಲರ್. ನಮ್ಮದು 2. 9 ಲಕ್ಷ ಕೋಟಿ ಡಾಲರ್ ಗಾತ್ರ. ಶೀಘ್ರದಲ್ಲೇ ನಾವು ಜರ್ಮನಿಯನ್ನು ಹಿಂದೆ ಹಾಕುತ್ತೇವೆ ಎಂಬ ಲೆಕ್ಕಾಚಾರ ಈಗ ಇದೆ. ಇನ್ನು ಐದು ಟ್ರಿಲಿಯನ್ ಡಾಲರ್ ಮಾತ್ರ ತಲುಪಿದರೆ ಜಪಾನಿಗೆ ಸೆಡ್ಡು ಹೊಡೆಯಬಹುದು. ಕಂಚಿನ ಪದಕ ಗಿಟ್ಟಿಸಬಹುದು. ಬಹಳ ಸಂತೋಷ. ಇದಾಗಬೇಕು. ಖಂಡಿತ ಆಗಲಿ. ಆದರೆ ಇದನ್ನು ಸಾಧಿಸುವುದಕ್ಕೆ ನಾವು ಹಿಡಿದಿರುವ ದಾರಿಯಾದರೂ ಯಾವುದು ? ಉದಾರೀಕರಣ ಯುಗದ ಮೂವತ್ತು ವರ್ಷಗಳಲ್ಲಿ ದಾರಿ ತಪ್ಪಿದೆ ನಮ್ಮ ಅರ್ಥವ್ಯವಸ್ಥೆ !!! ಸಂಪತ್ತಿನ ಸೃಷ್ಟಿ ಉದ್ದಕ್ಕೂ ಆಗಿದೆ. ಅದು ನಿಜ. ಆದರೆ ಈ ಸಂಪತ್ತಿಗೂ ಜನಸಾಮಾನ್ಯರಿಗೂ ಸಂಬಂಧವೇ ಇಲ್ಲ! ಬೆಂಗಳೂರಿನಲ್ಲಿ 1991 ರಲ್ಲಿ ಪ್ರತಿಷ್ಠಿತ ಶಾಲೆಯೊಂದರ ಮಕ್ಕಳ ವಾರ್ಷಿಕ ಫೀಸ್ 2000 ರೂಪಾಯಿ ಇತ್ತು. ಅದು ಈಗ ಎರಡು ಲಕ್ಷ ರೂಪಾಯಿಗೆ ಏರಿದೆ! ಹಾಗೇ ಎರಡು ರೂಪಾಯಿಗೆ ಎರಡು ಇಡ್ಲಿ ಬರುತ್ತಿತ್ತು ; ಈಗ ಒಂದು ಪ್ಲೇಟ್ ಇಡ್ಲಿಗೆ 20 ರೂಪಾಯಿ ಕನಿಷ್ಠ ಕೊಡಬೇಕು.

  ದೇಶದಲ್ಲಿ ಶೇ. 1 ಜನರು ಇಟ್ಟುಕೊಂಡಿರುವ ಶೇ. 42.5 ಸಂಪತ್ತಿನ ಒಡೆಯರಿಗೆ ಇದು ಕಷ್ಟಕರವಲ್ಲ. ಆದರೆ ಆಟೋ ಚಾಲಕರು, ಗಾಡಿಯಲ್ಲಿ ತರಕಾರಿ ಮಾರುವವರು ಇವರ ಜೊತೆ ಪೈಪೋಟಿ ನಡೆಸಬೇಕು! ಶಾಲೆಗೆ, ಇಡ್ಲಿಗೆ ದುಡ್ಡು ಕೊಡಬೇಕು. ಇದು ದೊಡ್ಡ ಸವಾಲು. ಆಟೋ ಚಾಲಕನ ಕಿಸೆಯಲ್ಲಿ ಹಣ ಜಾಸ್ತಿ ಆಗಿದೆ; ಆದರೆ ಈ ಹಣದ ಕೊಳ್ಳುವ ಶಕ್ತಿ 30 ವರ್ಷಗಳ ಹಿಂದಿಗೆ ಹೋಲಿಸಿದರೆ ತುಂಬಾ ತುಂಬಾ ಕಡಿಮೆ! ಹೀಗೇಕೆ ?

  ಇದು ಕೌಟಿಲ್ಯನ ಮಾತು ಕೇಳಲಿಲ್ಲ ಎಂಬುದರ ಫಲ. ಅವನ ವಾಕ್ಯದಲ್ಲಿ ಮೊದಲಲ್ಲಿ- ಸಂಪತ್ತು ಸೃಷ್ಟಿಗೆ ಆರ್ಥಿಕ ಚಟುವಟಿಕೆ ಬೇಕು ಎಂದಿದೆ. ಆದರೆ ಅದು ಹೇಗಿರಬೇಕು ಎಂಬುದು ಕೌಟಿಲ್ಯನ ಈ ವಾಕ್ಯದ ಉತ್ತರಾರ್ಧದಲ್ಲಿ ಇದೆ. ಆರ್ಥಿಕ ಚಟುವಟಿಕೆಗಳು ಫಲದಾಯಕ ಆಗಿರಬೇಕು; ಉತ್ಪಾದಕ ಆಗಿರಬೇಕು; ಸತ್ಪ್ರಯೋಜಕ ಆಗಿರಬೇಕು- ಇದು ಕೌಟಿಲ್ಯನ ನುಡಿ. ಇದನ್ನೇ ಉದಾರೀಕರಣ ಯುಗವು ಕಡೆಗಣಿಸಿದ್ದು. ಇದು ಕಾಣಬೇಕಾದರೆ ಬೆಂಗಳೂರಿಗೆ ಬನ್ನಿ. ಕಳೆದ 25 ವರ್ಷಗಳಿಂದ ಇಲ್ಲಿ ನಡೆದಿರುವುದು ಏನು ಗೊತ್ತೇ? ಗುಂಡಿ ತೆಗಿ; ಗುಂಡಿ ಮುಚ್ಚು – ಇದೇ ಅಭಿವೃದ್ಧಿಮಂತ್ರ! ಇದರ ಫಲ ಏನು ? ಕಂಟ್ರಾಕ್ಟರುಗಳು ಕುಬೇರರಾಗಿದ್ದಾರೆ! ಕೋಟಿ, 10 ಕೋಟಿ, 100ಕೋಟಿ ಈ ಬೆಂಗಳೂರಿನ ಕಂಟ್ರಾಕ್ಟರ್ ಕುಬೇರನಿಗೆ ಸಲೀಸು ! ಈ ಸಂಪತ್ತಿನ ಸೃಷ್ಟಿಯು ಉತ್ಪತ್ತಿ- ಉತ್ಪಾದನೆ ಹೆಚ್ಚಳದಿಂದ ಆಗಿಲ್ಲ. ಇದು ಆರ್ಥಿಕ ಚಟುವಟಿಕೆ. ಆದರೂ ಅದು ಅನುತ್ಪಾದಕ ಅಪ್ರಯೋಜಕ ಚಟುವಟಿಕೆ. ಇದನ್ನು ಆಗಲೇ ಕೌಟಿಲ್ಯನು ಅದ್ಭುತವಾಗಿ ಹೇಳಿಬಿಟ್ಟಿದ್ದಾನೆ. ’ನಿಮ್ಮ ಆರ್ಥಿಕ ಚಟುವಟಿಕೆಗಳು ಪ್ರಯೋಜನಕಾರಿಯಾಗಿರಬೇಕು ; ಉತ್ಪಾದಕತೆಯ ಗುರಿ ಹೊಂದಿರಬೇಕು ; ಹಾಗಿಲ್ಲದಿದ್ದರೆ ಅನಾಹುತ ಗ್ಯಾರೆಂಟಿ- ಎಂತಹ ಅದ್ಭುತ ಮಾತು ಕೌಟಿಲ್ಯನ ದು!

  ನಮ್ಮ ದೇಶದಲ್ಲೇ ಈ ಅನಾಹುತ ಉದಾರೀಕರಣ ಯುಗದ ಉದ್ದಕ್ಕೂ ನಡೆದುಹೋಗಿದೆ! ಕೇವಲ ಏಜೆಂಟರಿಂದ ಏಜೆಂಟರಿಗೆ ಹಣ ದಾಟಿದರೆ ಅದು ಕೇವಲ ಹಣದ ಚಟುವಟಿಕೆ ಮಾತ್ರ. ಉತ್ಪಾದಕತೆ ಅಲ್ಲಿಲ್ಲ. ಅದು ಪ್ರಯೋಜನಕಾರಿ ಅಲ್ಲವೇ ಅಲ್ಲ. ಹೀಗಾಗಿ ಈ ರೀತಿ ಸಂಪತ್ತಿನ ಸೃಷ್ಟಿಯಾದರೂ ಅದು ಪದೇ-ಪದೇ ಸರ್ವನಾಶ ಕಂಡಿದೆ. ನಮ್ಮಲ್ಲಿ 1992 ರಲ್ಲಿ ಹರ್ಷದ್ ಮೆಹ್ತಾ ಕರ್ಮಕಾಂಡದಲ್ಲಿ ಸೃಷ್ಟಿಯಾಗಿದ್ದ ಹಣದ ಸರ್ವನಾಶವಾಯಿತು; 1994 ರಲ್ಲಿ ಹೊಸ ಶೇರುಪೇಟೆ ಕರ್ಮಕಾಂಡದಲ್ಲಿ ಸಂಪತ್ತಿನ ಸರ್ವನಾಶ ಆಯಿತು; 2000 ಇಸವಿಯು ಚೇತನ್ ಪಾರೀಖ್ ಕರ್ಮಕಾಂಡದಲ್ಲಿ ಹೀಗೇ ಸಂಪತ್ತಿನ ಸರ್ವನಾಶ ಆಯಿತು;

  ಈ ಮೂರು ಕರ್ಮಕಾಂಡಗಳ ಪೂರ್ವದಲ್ಲಿ ಸಂಪತ್ತಿನ ಸೃಷ್ಟಿಯಾದರೂ ಅದು ಉತ್ಪತ್ತಿಯಿಂದ ಉತ್ಪಾದಕತೆ ಯಿಂದ ಪ್ರಚೋದಕವಾದ ರೀತಿಯಲ್ಲಿ ಸಂಪತ್ತು ಸೃಷ್ಟಿ ಆಗಿರಲಿಲ್ಲ. ಅದು ಏಜೆಂಟರುಗಳು ಮಾಡಿದ ಶೇರುಪೇಟೆ ಸಂಪತ್ತು ಆಯಿತು. ಅದಕ್ಕಾಗಿಯೇ ಅನಾಹುತ ಆಯಿತು. ಇದೇ ಕೌಟಿಲ್ಯನ ಕ್ರಿಸ್ತಪೂರ್ವದಲ್ಲೇ ಹೇಳಿದ ಸತ್ಯ. ಅಪ್ರಯೋಜಕ ಆರ್ಥಿಕ ಚಟುವಟಿಕೆಗಳು ತತ್ಕಾಲದ ಸಂಪತ್ತಿನ ಸಮೃದ್ಧಿಯನ್ನೇ ಸರ್ವನಾಶ ಮಾಡುತ್ತದೆ ಎಂದು ಅವನು ಎಚ್ಚರಿಸಿದ್ದ. ಅಷ್ಟೇ ಅಲ್ಲ , ಆ ಅನಾಹುತವು ಭವಿಷ್ಯದ ಬೆಳವಣಿಗೆಯನ್ನು ಮೊಟಕುಗೊಳಿಸುತ್ತದೆ ಎಂದೂ ಅವನು ಎಚ್ಚರಿಸಿದ್ದ. ’ ರಾಜನು ಉತ್ಪಾದಕ ಚಟುವಟಿಕೆಗಳನ್ನು ನಡೆಸಿ ಅವುಗಳನ್ನು ಜಾರಿಗೆ ತಂದರೆ ಅದ್ಭುತವಾದ ಸಂಪತ್ತು ಅಭಿವೃದ್ಧಿ ಕಂಡು ಬರುತ್ತದೆ; ಅದಿಲ್ಲದೆ ಉಂಟಾದ ಸಂಪತ್ ಸೃಷ್ಟಿ ಉಳಿಯುವುದಿಲ್ಲ- ಎಂದು ಅವನು ಆಗಲೇ ಹೇಳಿದ್ದ. ಅದು 2008ರ ವಿಶ್ವ ಆರ್ಥಿಕ ಮುಗ್ಗಟ್ಟಿನಲ್ಲಿ ಅದು ಮತ ಸಾಬೀತು ಆಯಿತು. ಅಮೆರಿಕದಲ್ಲಿ ಒಂದು ಮನೆಯನ್ನು ಮತ್ತೆ-ಮತ್ತೆ ಮಾರಿ ಏಜೆಂಟರುಗಳು ಸಂಪತ್ತಿನ್ನು ಸೃಷ್ಟಿಮಾಡಿದ್ದರು. ಕೊನೆಗೆ ಸಾಲದ ಶೂಲಕ್ಕೆ ಈ ಸಂಪತ್ತು ಸಿಲುಕಿ ಸರ್ವನಾಶ ಆಯಿತು!. 2008ರಲ್ಲಿ ಭಾರತವೂ ಈ ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿತ್ತು; ಅದು ಇಂದಿಗೂ ಅದರಿಂದ ಚೇತರಿಸಿಕೊಂಡಿಲ್ಲ! ಇದನ್ನೇ ಕೌಟಿಲ್ಯನು ಭವಿಷ್ಯದ ಬೆಳವಣಿಗೆಯ ಸರ್ವನಾಶ ಆದೀತು ಎಂದು ಎಚ್ಚರಿಸಿದ್ದು. ಹೀಗೆ 1992 ರಿಂದ 2008ರ ವರೆಗೆ ಸಂಸತ್ತಿನ ಸೃಷ್ಟಿ ಮತ್ತು ಅದರ ಸರ್ವನಾಶ ಆಗಿರುವುದನ್ನು ನಾವು ಕಂಡಿದ್ದೇವೆ. ಅಪ್ರಯೋಜಕ ದಾರಿಯಲ್ಲಿ ಸೃಷ್ಟಿಯಾದ ಸಂಪತ್ತು ಹೇಗೆ ಹಾಳಾಗುತ್ತದೆ ಎಂಬುದನ್ನು ಮತ್ತೆ ಮತ್ತೆ ಕಂಡಿದ್ದೇವೆ.

  ಆದರೂ ಒಂದು ದುರಂತ ನಮ್ಮ ದೇಶದ್ದು. ಅದೇ ಉದಾರೀಕರಣದ ದಾರಿಯೇ ಈಗಲೂ ಮುಂದುವರೆದಿದೆ. ಇದು ಆತಂಕದ ಸಂಗತಿ. ಅನುತ್ಪಾದಕ ಆರ್ಥಿಕ ಚಟುವಟಿಕೆಗಳು ನಮ್ಮ ಮುಂದೆ ಪೆಡಂಭೂತವಾಗಿ ನಿಂತಿದೆ. 103 ಲಕ್ಷ ಕೋಟಿ ರೂಪಾಯಿಗಳನ್ನು ಅಪಾರ ಹಣವು ಹೆದ್ದಾರಿ ಬಂದರೂ ವಿಮಾನನಿಲ್ದಾಣ ಇತ್ಯಾದಿ ಮೂಲ ಸೌಕರ್ಯಗಳಿಗೆ ಖರ್ಚು ಮಾಡುವ ಇರಾದೆ ಈಗ ಇದೆ. ಇಲ್ಲಿ ಉತ್ಪಾದಕತೆಯು ಕಾಣೆಯಾಗಿದೆ. ’ಊಟ ಇಲ್ಲ; ಉಪ್ಪಿನಕಾಯಿಗೆ ಎಲ್ಲಾ’ ಎಂಬಂತೆ ಇದು. 2014 -19 ರ ಅವಧಿಯಲ್ಲಿ 54 ಲಕ್ಷ ಕೋಟಿ ರೂಪಾಯಿಯು ಮೂಲಸೌಕರ್ಯಕ್ಕೆ ಖರ್ಚಾಯಿತು. ಆದರೂ ಕೊನೆಗೆ ಆರ್ಥಿಕ ಹಿನ್ನಡೆ ಬಂತು! 2009 -14ರ ಅವಧಿಯಲ್ಲಿ 58 ಲಕ್ಷ ಕೋಟಿ ರೂಪಾಯಿಯು ಉತ್ಪಾದಕತೆ ಇಲ್ಲದ ಉದ್ದೇಶಕ್ಕೆ ಖರ್ಚಾಯಿತು. ಆಗಲೂ ಘೊರ ಆರ್ಥಿಕ ಮುಗ್ಗಟ್ಟು ಬಂತು! ವಾಜಪೇಯಿ ಸರಕಾರದ ಕಾಲದಲ್ಲಿ ಮೂಲಸೌಕರ್ಯ ನಿರ್ವಣವಾದಾಗ ಉದ್ಯೋಗ ಸೃಷ್ಟಿಯಾಯಿತು. ಈಗ ಹಾಗಲ್ಲ. ಯಂತ್ರದ್ದೇ ಕಾರುಬಾರು. ಇಲ್ಲಿದೆ ಶೂನ್ಯ ಉದ್ಯೋಗ!

  ಮೂಲಸೌಕರ್ಯ ಮುಂಚೂಣಿಗೆ ಬಂದು ಉತ್ಪಾದಕತೆ ಚಟುವಟಿಕೆಗಳು ಮೂಲೆಗುಂಪಾಗಿದೆ. ಇದು ಅನ್ಯಾಯ. ಉದಾರೀಕರಣದ ಉದ್ದಕ್ಕೂ ಬಂದಿರುವ ಈ ತಪ್ಪು ದಾರಿಯನ್ನು ಈಗ ಬಿಡಬೇಕು. ಬದಲಾಗಿ ಜಿಡಿಪಿಯಲ್ಲಿ ಶೇ. 10ರಷ್ಟು ಇರುವ ಬೇಸಾಯಕ್ಕೆ, ಶೇ.4. 92 ಇರುವ ಪಶುಪಾಲನೆಗೆ ಹಾಗೂ ಸಣ್ಣ ಘಟಕಗಳಿಗೆ ಹಣ ಸುರಿದರೆ ಜನಸಾಮಾನ್ಯರ ನಡುವೆ ಸಂಪತ್ತಿನ ಸೃಷ್ಟಿ ಆಗುತ್ತದೆ. ಇದೇ ಕೌಟಿಲ್ಯನ ಮಾತಿನ ತಿರುಳು. ಸಂಪತ್ತಿನ ಸೃಷ್ಟಿಯು ಜನಸಮುದಾಯದಲ್ಲಿ ಉತ್ಪಾದಕತೆ ಮೂಲಕ ಆಗಬೇಕು. ಈಗಿನ ದಾರಿ ಹೀಗಿಲ್ಲ. ಸರ್ಕಾರವು ಈಗಲೂ ಈ ತಪ್ಪು ದಾರಿಯಿಂದ ದೂರ ಸರಿದರೆ ನಿಜವಾದ ಸಂಪತ್ತಿನ ಸೃಷ್ಟಿ ಆಗುತ್ತದೆ. ಆಗ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ನಮ್ಮದಾಗುತ್ತದೆ. ಅದು ನಿಜಕ್ಕೂ ಸಾರ್ಥಕವಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts