ಬೆಳಗಾವಿ: ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ಬಾಕಿ ಉಳಿದಿರುವ 14 ಕೋಟಿ ರೂ. ಕೃಷಿ ಹೊಂಡದ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಿಸಲಾಗುವುದು ಎಂದು ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ ಮಾಡಲಗಿ ತಿಳಿಸಿದ್ದಾರೆ.
ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2018-19ನೇ ಸಾಲಿನ ಅವಧಿಯಲ್ಲಿ 300ಕ್ಕೂ ಅಧಿಕ ಕೃಷಿ ಹೊಂಡಗಳನ್ನು ತೆಗೆಯಲಾಗಿದೆ. ಆದರೆ, ಚುನಾವಣೆ ನೀತಿ ಸಂಹಿತೆ ಮತ್ತಿತರ ಕಾರಣದಿಂದಾಗಿ ಬಾಕಿ ಉಳಿದ ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು ಎಂದರು. ಜತೆಗೆ ನೀತಿ ಸಂಹಿತೆ ಕಾರಣದಿಂದಾಗಿ ತಡೆಹಿಡಿದ ಕಾಮಗಾರಿಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ತೀವ್ರ ಬರ ಉದ್ಬವಿಸಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ಪೂರ್ವ ಮಳೆಗಳು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ತಕ್ಷಣ ಒದಗಿಸಲು ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವತ್ತರಾಗ. ನಿರ್ಲಕ್ಷೃ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಸದಸ್ಯರು ಮಾತನಾಡುತ್ತಾ, ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣು ಸೇರಿ ಎಲ್ಲ ತರಹದ ಹಣ್ಣುಗಳಿಗೆ ರಾಸಾಯನಿಕ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಉಂಟಾಗುತ್ತಿದೆ. ಕೃಷಿ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ರಾಸಾಯನಿಕ ಮಿಶ್ರಿತ ಹಣ್ಣುಗಳ ಮಾರಾಟವನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಸೂಚಿಸಿದರು.
ಸಮಿತಿ ಸದಸ್ಯರಾದ ಶಾಂತಾ ಜೈನೋಜ, ಸುಮಿತ್ರಾ ಉಗಳೆ, ಸಿದ್ದಗೌಡಾ ಸುಣಗಾರ, ನಿಂಗಪ್ಪ ಅರಕೇರಿ, ಸುಜಾತಾ ಚೌಗುಲೆ, ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ರವೀಂದ್ರ ಹಕಾಟಿ, ಕೃಷಿ, ರೇಷ್ಮೆ, ಕೈಗಾರಿಕೆ ಇಲಾಖೆ, ಜಿಪಂ ಅಧಿಕಾರಿಗಳ ಇದ್ದರು.
ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಬೇಕು. ಜಾನುವಾರುಗಳಿಗೆ ಅಗತ್ಯ ಔಷಧಿ ಖರೀದಿಸಿ ವಿತರಿಸಬೇಕು. ಅನುದಾನ ಇದ್ದರೂ ಸದುಪಯೋಗ ಪಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.
ಶಂಕರ ಮಾಡಲಗಿ, ಅಧ್ಯಕ್ಷ, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ
ರೈತರಿಗೆ ಬೇಡಿಕೆಗೆ ಅನುಗುಣವಾಗಿ ಹನಿ ನೀರಾವರಿಗೆ ಸಂಬಂಧಿಸಿದ ಸಾಮಗ್ರಿ ವಿತರಣೆ ಮಾಡಿ. ಕೃಷಿ ಉಪಕರಣಗಳ ಮಾರಾಟಗಾರರ ಬೇಡಿಕೆಯಂತೆ ವಿತರಣೆ ಮಾಡಬೇಡಿ. ಸರ್ಕಾರಿ ಯೋಜನೆಗಳು ರೈತರಿಗೆ ಅನುಕೂಲವಾಗಬೇಕು.
ಗೋವಿಂದ ಕೊಪ್ಪದ, ಸದಸ್ಯರು, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ