More

    ಪೆಂಚಾರು ಶಾಲೆಯಲ್ಲಿ ಪರಿಸರ ಜಾಗೃತಿ ಕಾನನ ದರ್ಶನ

    ಯಶೋಧರ ವಿ.ಬಂಗೇರ ಮೂಡುಬಿದಿರೆ
    ಸರ್ಕಾರಿ ಶಾಲೆ ಉಳಿವಿಗಾಗಿ ವಿವಿಧ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು ಪೆಂಚಾರು ಸರ್ಕಾರಿ ಶಾಲೆಯ ಶಿಕ್ಷಕಿಯರು ಮಕ್ಕಳನ್ನು ಆಕರ್ಷಿಸುವುದರ ಜೊತೆಗೆ ಕಾಡು, ಪ್ರಕೃತಿಯ ವೈವಿಧ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
    ಮಾಂಟ್ರಾಡಿ ಗ್ರಾಮದ ಪೆಂಚಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರ ಪರಿಕಲ್ಪನೆಯಲ್ಲಿ ಗೋಡೆಯಲ್ಲಿ ಕಾಡು, ಅಲ್ಲಿನ ವೈವಿಧ್ಯ, ಶಾಲಾ ಮಕ್ಕಳಿಂದ ಕಾನನ ಪ್ರವಾಸದ ಸನ್ನಿವೇಶಗಳು ಚಿತ್ರದ ರೂಪದಲ್ಲಿ ಮೂಡಿದ್ದು ಮಕ್ಕಳನ್ನು ಆಕರ್ಷಿಸುತ್ತಿವೆ.
    ಶಾಲಾ ಮುಖ್ಯಶಿಕ್ಷಕಿ ಅರ್ಚನಾ ಜೈನ್, ಸಹ ಶಿಕ್ಷಕಿ, ಗೌರವ ಶಿಕ್ಷಕಿ ಪರಿಕಲ್ಪನೆಗೆ ಮೂಡುಬಿದಿರೆ ಕೊಡಂಗಲ್ಲಿನ ಚಿತ್ರ ಕಲಾವಿದ ಸುಧಾಕರ ಶಾಲೆಯ ಕೊಠಡಿಗಳ ಮುಂಭಾಗ ಆಕರ್ಷಕ ಚಿತ್ರ ರಚಿಸಿದ್ದಾರೆ. ಶಾಲೆಯ ಐದು ತರಗತಿ ಕೊಠಡಿ, ಶಿಕ್ಷಕರ ಕೊಠಡಿ ಸೇರಿದಂತೆ ಮುಂಭಾಗದ ಗೋಡೆ ಸಂಪೂರ್ಣ ಆವರಿಸುವಂತೆ ಚಿತ್ರ ಬಿಡಿಸಲಾಗಿದೆ. ಮರ, ಪೊದೆ, ಹುಲಿ, ಆನೆ, ನವಿಲು, ಜಿಂಕೆ ಸಹಿತ ಪ್ರಾಣಿ ಪಕ್ಷಿಗಳನ್ನು ಚಿತ್ರಿಸಲಾಗಿದೆ. ಇದರ ಮಧ್ಯೆ ‘ಅಕ್ಷರ ಎಕ್ಸಪ್ರೆಸ್’ ನಾಮಫಲಕ ಇರುವ ಬಸ್ ಕೂಡ ಚಿತ್ರಿಸಲಾಗಿದೆ. ಈ ಬಸ್ ಅನ್ನು ಹಳೇ ಕೆಎಸ್‌ಆರ್‌ಟಿಸಿ ಬಸ್ ಮಾದರಿಯಲ್ಲಿ ಚಿತ್ರಿಸಿರುವುದು ವಿಶೇಷ.

    ಗೋಡೆ ಮುಂಭಾಗದ ಕಂಬಗಳಲ್ಲಿ ಹೂವಿನ ಗಿಡಗಳನ್ನು ಚಿತ್ರಿಸಲಾಗಿದ್ದು, ಇವುಗಳ ಮೇಲೆ ಮಕರಂಧ ಹೀರುವ ಬಣ್ಣದ ಚಿಟ್ಟೆಗಳು, ಹೂವುಗಳ ಸಮೀಪ ಹಾರಾಡುವ ಬಣ್ಣದ ಪಕ್ಷಿಗಳನ್ನು ಚಿತ್ರಿಸಲಾಗಿದೆ. ಸುಮಾರು 30 ಸಾವಿರ ರೂ. ವೆಚ್ಚದಲ್ಲಿ ಚಿತ್ರ ಬಿಡಿಸಲಾಗಿದೆ. ಮಾಂಟ್ರಾಡಿ ಕೈಕಂಬದ ಉದ್ಯಮಿ ರವೀಂದ್ರ ಶೆಟ್ಟಿ, ಶಾಲೆಯ ನಿವೃತ್ತ ಶಿಕ್ಷಕ ಕೆ.ವಿ ಕೃಷ್ಣರಾವ್ ಅವರ ಮಕ್ಕಳಾದ ವಿಜಯಲಕ್ಷ್ಮೀ, ಸತೀಶ್ ಬ್ರಹ್ಮಾವರ ಶಿಕ್ಷಕಿಯರು ರೂಪಿಸಿದ ಈ ಯೋಜನೆಗೆ ಸಾಥ್ ನೀಡಿದ್ದಾರೆ.

    ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
    ಶಾಲೆಯು ದಾನಿಗಳ, ಪಂಚಾಯಿತಿಯವರ ಸಹಕಾರದಿಂದ ಅಭಿವೃದ್ಧಿ ಕಾಣುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಶಾಲೆಯಲ್ಲಿ ಆಕರ್ಷಕ ಕೈತೋಟ, 20 ತೆಂಗಿನ ಗಿಡಗಳನ್ನು ನೆಡಲಾಗಿದೆ. ಹೂತೋಟ ಕೂಡ ಆಕರ್ಷಕವಾಗಿಸಲಾಗುತ್ತಿದೆ.

     

    ಶಾಲೆಯ ಗೋಡೆಗೆ ಸಾಮಾನ್ಯ ಬಣ್ಣ ಹಚ್ಚುವುದಕ್ಕಿಂತ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಬಗ್ಗೆ ಪ್ರೀತಿ, ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಚಿಂತನೆ ನಡೆಸಿದ್ದೆವು. ದಾನಿಗಳ ಸಹಾಯದಿಂದ ಅದು ಕಾರ್ಯರೂಪಕ್ಕೆ ಬಂದಿದೆ. ಮಕ್ಕಳಿಗೆ ಕಲೆಯ ಮೂಲಕ ಹಿತಾನುಭವ, ಜಾಗೃತಿ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಗೋಡೆ ಚಿತ್ರವನ್ನು ರಚಿಸಿದ್ದೇವೆ.
    ಅರ್ಚನಾ ಜೈನ್
    ಮುಖ್ಯ ಶಿಕ್ಷಕಿ, ಪೆಂಚಾರು ಕಿರಿಯ ಪ್ರಾಥಮಿಕ ಶಾಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts