ಮೆಸ್ಸಿ, ಅರ್ಜೆಂಟೀನಾ ವಿಶ್ವಕಪ್ ಕನಸು ಭಗ್ನ

ಕಜಾನ್: ಅದು ಯುವ ಆಟಗಾರರನ್ನೊಳಗೊಂಡ ಫ್ರಾನ್ಸ್ ಹಾಗೂ ಅನುಭವಿ ಪಡೆಗಳಿದ್ದ ಅರ್ಜೆಂಟೀನಾ ನಡುವಿನ ಆಕ್ರಮಣಕಾರಿ ನಾಕೌಟ್ ಸಮರ. ಪ್ರತಿ ಕ್ಷಣವೂ ಮೈ ನವಿರೇಳಿಸುವಂತೆ ಸಾಗಿದ ಹೋರಾಟದಲ್ಲಿ ಅಂತಿಮವಾಗಿ ಮಾಜಿ ಚಾಂಪಿಯನ್ ಯುರೋಪ್ ಟೀಮ್ ಫ್ರಾನ್ಸ್ ವಿಶ್ವಕಪ್ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿತು.

ಕಜಾನ್ ಅರೇನಾದಲ್ಲಿ ನಡೆದ ಹೈವೋಲ್ಟೇಜ್ ಸಮರದಲ್ಲಿ ಮೆಸ್ಸಿ ಫ್ರೆಂಚರ ಆರ್ಭಟದ ಮುಂದೆ ಮೆತ್ತಗಾದರೆ, ಲೈಟ್ನಿಂಗ್ ವೇಗದಂತೆ ಕಾಡಿದ ಕಿರಿಯ ಕೈಲಿಯನ್ ಬಾಪೆ ಸೆನ್ಸೇಶನಲ್ ಡಬಲ್ ಗೋಲು ಸಿಡಿಸಿ ಮೆಸ್ಸಿ ಹಾಗೂ ಅರ್ಜೆಂಟೀನಾದ ವಿಶ್ವಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿದರು. ಇದರಿಂದ ಹಾಲಿ ರನ್ನರ್ ಅಪ್ ಅರ್ಜೆಂಟೀನಾ 3-4 ಗೋಲುಗಳಿಂದ ಸೋಲು ಕಂಡಿತು. ಅಂಟೋಯಿನ್ ಗ್ರಿಜ್​ವುನ್(13) ಆರಂಭಿಕ ಗೋಲು ಸಿಡಿಸಿದರೆ, ಅರ್ಜೆಂಟೀನಾ ಅನುಭವಿ ಏಂಜಲ್ ಡಿ ಮಾರಿಯಾ(41) ನೀಡಿದ ತಿರುಗೇಟಿನಿಂದ ಉಭಯ ತಂಡಗಳ ನಡುವೆ ಮೊದಲಾರ್ಧ ಅವಧಿ 1-1ರ ಸಮಬಲ ಕಂಡಿತು. ದ್ವಿತೀಯಾರ್ಧ ಅವಧಿಯಲ್ಲಿ ಉಭಯ ಆಟಗಾರರ ನಡುವೆ ವೇಗ, ಉದ್ವೇಗ, ಘರ್ಷಣೆ ಮತ್ತಷ್ಟು ಹೆಚ್ಚಾಯಿತು. ಈ ಅವಧಿಯಲ್ಲೂ ಕೆಚ್ಚಿನ ಆಟವಾಡಿದ ಫ್ರಾನ್ಸ್​ನ ಬೆಂಜಮಿನ್ ಪಾವಾರ್ಡ್(57), ಕೈಲಿಯನ್ ಬಾಪೆ (64, 68) ಸ್ಯಾಂಪೊಲಿ ಪಡೆಯ ಲೆಕ್ಕಾಚಾರವನ್ನೆ ಬುಡಮೇಲು ಮಾಡಿದರು. ಈ ನಡುವೆ ಗ್ಯಾಬ್ರಿಯೆಲ್ ಮೆರ್ಸಾಡೋ (48) ಪ್ರತಿರೋಧ ನೀಡಿದರೆ, ಕೊನೇ ಹಂತದ ಇಂಜುರಿ ಅವಧಿಯಲ್ಲಿ ಸೆರ್ಗಿಯೋ ಅಗ್ಯುರೋ (90+3) ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು.

ಗ್ಯಾಬ್ರಿಯೆಲ್ ಗೋಲಿಗೆ ಪಾವಾರ್ಡ್ ತಿರುಗೇಟು: ದ್ವಿತೀಯಾರ್ಧ ಆರಂಭಗೊಂಡ 3 ನಿಮಿಷಗಳೊಳಗೆ ಅರ್ಜೆಂಟೀನಾದಿಂದ 2ನೇ ಮ್ಯಾಜಿಕ್ ಮೂಡಿಬಂತು. ಅರ್ಜೆಂಟೀನಾ ಫ್ರೀ ಕಿಕ್ ಅನ್ನು ಪೋಗ್ಬಾ ತಡೆಯಲು ವಿಫಲಗೊಂಡಾಗ ಚೆಂಡನ್ನು ಮೆಸ್ಸಿ ಇನ್​ಸೈಡ್ ಏರಿಯಾದಲ್ಲಿ ಗೋಲಿಗಾಗಿ ಶೂಟ್ ಮಾಡಿದರು. ಈ ವೇಳೆ ಸೆವಿಲ್ಲಾ ಕ್ಲಬ್ ಡಿಫೆಂಡರ್ ಗ್ಯಾಬ್ರಿಯೆಲ್ ಮೆರ್ಸಾಡೋ ಅದ್ಭುತವಾಗಿ ಎಡಗಾಲಿನಿಂದ ಟಚ್ ಮಾಡಿ ಅರ್ಜೆಂಟೀನಾಗೆ 2ನೇ ಗೋಲು ತಂದರು. ಅದಾದ 55ನೇ ನಿಮಿಷದಲ್ಲಿ ಗ್ರಿಜ್​ವುನ್​ಗೆ ಗೋಲು ಬಾರಿಸುವ ಸುಲಭ ಅವಕಾಶ ಕೈಚೆಲ್ಲಿದರೂ, ಡಿಫೆಂಡರ್ ಬೆಂಜಮಿನ್ ಪಾವಾರ್ಡ್ ಅರ್ಜೆಂಟೀನಾಗೆ 2-2ರ ತಿರುಗೇಟು ನೀಡಿದರು.

ಬಾಪೆ ಡಬಲ್ ಮ್ಯಾಜಿಕ್

ಅಂಗಣದಲ್ಲಿದ್ದ ಎಲ್ಲಾ ಆಟಗಾರರಿಗಿಂತ ಹೆಚ್ಚಿನ ವೇಗದಲ್ಲಿ ಓಡಿ ಮೊದಲಾರ್ಧ ಅವಧಿಯಲ್ಲೆ ಅರ್ಜೆಂಟೀನಾ ಡಿಫೆಂಡರ್​ಗಳಿಗೆ ದುಃಸ್ವಪ್ನರಾಗಿದ್ದ 19 ವರ್ಷದ ಕೈಲಿಯನ್ ಬಾಪೆ ದ್ವಿತೀಯಾರ್ಧ ಅವಧಿಯಲ್ಲಂತೂ ಕೇವಲ 4 ನಿಮಿಷಗಳ ಅಂತರದಲ್ಲಿ 2 ಅಪೂರ್ವ ಗೋಲು ಸಿಡಿಸಿ ಫ್ರಾನ್ಸ್​ಗೆ 4-2ರ ಮುನ್ನಡೆ ತಂದರು. ಇದರಿಂದ ಅರ್ಜೆಂಟೀನಾ ಹಾಗೂ ಮೆಸ್ಸಿಯ ವಿಶ್ವಕಪ್ ಗೆಲುವಿನ ಕನಸು ಮಂದವಾಗುತ್ತಾ ಸಾಗಿತು. ಹೆರ್ನಾಂಡೆಸ್ ಕಾರ್ನರ್​ನಿಂದ ಪಾಸ್ ಮಾಡಿಕೊಟ್ಟ ಚೆಂಡನ್ನು ಬಾಪೆ ಅರ್ಜೆಂಟೀನಾದ 4 ಡಿಫೆಂಡರ್​ಗಳ ಕಣ್ತಪ್ಪಿಸಿ 3ನೇ ಗೋಲು ತಂದರು. ಬಾಪೆಯ ನಂತರದ ಗೋಲು ಅದ್ಭುತವಾಗಿತ್ತು. ಫ್ರಾನ್ಸ್ ಗೋಲ್ ಕೀಪರ್ ಕಿಕ್ ಮಾಡಿದ ಚೆಂಡನ್ನು ಅರ್ಜೆಂಟೀನಾದ ಒಬ್ಬನೇ ಒಬ್ಬ ಆಟಗಾರರಿಗೆ ಸಿಗದಂತೆ ಪಾಸ್ ಮಾಡಿದ ಫ್ರಾನ್ಸ್ ಡಿಫೆಂಡರ್​ಗಳು ಬಾಪೆಗೆ ನೀಡಿದರೆ, ಬಾಪೆ ಗೋಲು ಬಾರಿಸಲೂ ಹೆಚ್ಚು ಅವಧಿ ಕಾಯಲಿಲ್ಲ.

ಪೀಲೆ ದಾಖಲೆ ಸರಿಗಟ್ಟಿದ ಬಾಪೆ

20 ವರ್ಷ ದಾಟುವ ಮುನ್ನವೇ ವಿಶ್ವಕಪ್ ಪಂದ್ಯವೊಂದರಲ್ಲಿ ಅವಳಿ ಗೋಲು ಬಾರಿಸಿದ್ದ ಬ್ರೆಜಿಲ್ ದಿಗ್ಗಜ ಪೀಲೆ ದಾಖಲೆಯನ್ನು ಕೈಲಿಯನ್ ಬಾಪೆ ಸರಿಗಟ್ಟಿದರು. 1958ರಲ್ಲಿ ಸ್ವೀಡನ್ ವಿರುದ್ಧ ವಿಶ್ವಕಪ್ ಫೈನಲ್​ನಲ್ಲಿ ಪೀಲೆ ಈ ದಾಖಲೆ ಮಾಡಿದ್ದರು.

ಜೇವಿಯರ್ ಮಶೆರಾನೋ ವಿದಾಯ

ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲಿಯೇ 34 ವರ್ಷದ ಅರ್ಜೆಂಟೀನಾದ ದಿಗ್ಗಜ ಆಟಗಾರ ಜೇವಿಯರ್ ಮಶೆರಾನೋ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಪ್ರಕಟಿಸಿದ್ದಾರೆ. ‘ಅರ್ಜೆಂಟೀನಾ ತಂಡದಲ್ಲಿ ನನ್ನ ಅಧ್ಯಾಯ ಮುಗಿದಿದೆ. ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಿಯೂ ಸೋಲು ಕಂಡೆವು. ಇನ್ನು ಮುಂದೆ ನಾನು ಅರ್ಜೆಂಟೀನಾ ತಂಡದ ಅಭಿಮಾನಿ ಮಾತ್ರ. ನಾವು ಮಾಡಲಾಗದ ಸಾಧನೆಯನ್ನು ಮುಂದಿನ ಪೀಳಿಗೆ ಮಾಡುವ ವಿಶ್ವಾಸವಿದೆ’ ಎಂದು ಮಶೆರಾನೋ ಹೇಳಿದ್ದಾರೆ.