ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆಧ್ಯಾತ್ಮ, ವ್ಯಾಪಾರ-ಉದ್ಯಮ, ಸಮಾಜ ಸೇವೆ, ಕ್ರೀಡೆ, ವೈದ್ಯಕೀಯ ಹಾಗೂ ಸಾಹಿತ್ಯ- ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಸಾಧನೆಗೈದ 8 ಕನ್ನಡಿಗರು ಪದ್ಮವಿಭೂಷಣ ಹಾಗೂ ಪದ್ಮಶ್ರೀ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರ ಕುರಿತ ಕಿರುಪರಿಚಯ ಇಲ್ಲಿದೆ.
ನವದೆಹಲಿ: ಗಣರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇತ್ತೀಚೆಗೆ ಕೃಷ್ಣೈಕ್ಯರಾದ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗೆ ಪದ್ಮವಿಭೂಷಣ ಗೌರವ ಸಂದಿದೆ. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಉದ್ಯಮಿ ಡಾ.ವಿಜಯ ಸಂಕೇಶ್ವರ, ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ, ಹರೇಕಳ ಹಾಜಬ್ಬ ಸೇರಿ 8 ಕನ್ನಡಿಗರಿಗೆ ಏಳು ಪದ್ಮಶ್ರೀ ಪುರಸ್ಕಾರ ಸಂದಿದೆ. ಒಟ್ಟಾರೆಯಾಗಿ 141 ಮಂದಿ ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮುಂದಿನ 3-4 ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿಯಲ್ಲಿ ಏನಿರಲಿದೆ?: ಪದ್ಮ ಪ್ರಶಸ್ತಿ ಭಾರತದ ನಾಗರಿಕ ಗೌರವ ಪುರಸ್ಕಾರವಾಗಿದ್ದು, ಇದಕ್ಕೆ ನಗದು ಬಹುಮಾನ ನೀಡಲಾಗುವುದಿಲ್ಲ. ಸರ್ಕಾರದಿಂದ ಯಾವುದೇ ಸೌಲಭ್ಯ, ಅನುಕೂಲಗಳನ್ನೂ ನೀಡಲಾಗುವುದಿಲ್ಲ. ಪದ್ಮವಿಭೂಷಣ ಪುರಸ್ಕೃತರಿಗೆ ಚಿನ್ನದ, ಪದ್ಮಭೂಷಣ ಪುರಸ್ಕೃತರಿಗೆ ಬೆಳ್ಳಿ ಹಾಗೂ ಪ್ರದ್ಮಶ್ರೀ ಪುರಸ್ಕೃತರಿಗೆ ಕಂಚಿನ ಪದಕ ನೀಡಲಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಇದನ್ನು ಧರಿಸಬಹುದು. ಇದರ ಜತೆಗೆ ಪ್ರಶಂಸಾಪತ್ರ ನೀಡಲಾಗುತ್ತದೆ.
ಸಾರಿಗೆ, ಮಾಧ್ಯಮ ದಿಗ್ಗಜಗೆ ಪದ್ಮಶ್ರೀ ಗರಿ
ರಾಜ್ಯದ ಮುದ್ರಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗದಗದಲ್ಲಿ ಪ್ರಿಂಟಿಂಗ್ ಪ್ರೆಸ್ ಕಾರ್ಯ ನಿರ್ವಹಿಸುವ ಮೂಲಕ ಪರಿಶ್ರಮದ ಬದುಕಿಗೆ ಚಿಕ್ಕ ವಯಸ್ಸಿನಲ್ಲೇ ಪದಾರ್ಪಣೆ ಮಾಡಿದ ಡಾ. ವಿಜಯ ಸಂಕೇಶ್ವರ ಅವರು ಒಂದು ಲಾರಿಯಿಂದ ಸಾರಿಗೆ ಉದ್ಯಮ ಆರಂಭಿಸಿ, ಈಗ ದೇಶದ ಖಾಸಗಿ ವಲಯದಲ್ಲಿ ಅತಿಹೆಚ್ಚು ವಾಹನಗಳನ್ನು ಹೊಂದಿದ ಸಾರಿಗೆ ಸಾಮ್ರಾಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1976ರಲ್ಲಿ ಸಾರಿಗೆ ಉದ್ಯಮಕ್ಕೆ ಕಾಲಿಟ್ಟ ವಿಜಯ ಸಂಕೇಶ್ವರ, ದೃಢ ಹಾಗೂ ಅವಿರತ ಪರಿಶ್ರಮದಿಂದಾಗಿ ಪ್ರತಿ ವರ್ಷವೂ ಶೇ.30 ಪ್ರಗತಿ ಸಾಧಿಸುತ್ತ ದೇಶದಲ್ಲಿಯೇ ಅತಿಹೆಚ್ಚು ವಾಹನಗಳನ್ನು ಹೊಂದುವ ಮೂಲಕ, ದೇಶಾದ್ಯಂತ ಸರಿಸಾಟಿಯಿಲ್ಲದ 1,200 ಶಾಖೆಗಳ ವಿಸ್ತರಣಾ ಜಾಲದೊಂದಿಗೆ ಸರಕು ಸಾಗಣೆ ಸೇವೆ ನೀಡುತ್ತಿದ್ದಾರೆ. ಸುವಿಹಾರಿ ಬಸ್ ಸೇವೆ ಆರಂಭಿಸಿ ರಾಜ್ಯ, ಹೊರ ರಾಜ್ಯಗಳಲ್ಲಿ ವಿಆರ್ಎಲ್ ಬಸ್ ಸೇವೆಯನ್ನು ತೃಪ್ತಿಕರವಾಗಿ ನೀಡುತ್ತಿರುವ ಶ್ರೇಯಸ್ಸು ಅವರದ್ದು.
ವಿಆರ್ಎಲ್ ಲಾಜಿಸ್ಟಿಕ್ಸ್ ಲಿ. ಈಗ ದೇಶಾದ್ಯಂತ ಶಾಖೆಗಳನ್ನು, 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು, 2 ಪ್ರೀಮಿಯರ್ ಜೆಟ್ ವಿಮಾನಗಳನ್ನು, 20 ಸಾವಿರಕ್ಕೂ ಅಧಿಕ ನೌಕರರನ್ನು ಹೊಂದಿದ್ದು, ಸಾರಿಗೆ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಹೆಸರು ಗಳಿಸಿದೆ. ಇದರೊಟ್ಟಿಗೆ ಕೊರಿಯರ್, ನವೀಕರಿಸಬಹುದಾದ ಇಂಧನ, ವೈಮಾನಿಕ ಸೇವಾ ವಲಯಕ್ಕೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ ವಿಜಯ ಸಂಕೇಶ್ವರ, 1999ರಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಅಲ್ಲಿಯೂ ದಾಖಲೆಯ ಸಾಧನೆಗೈದರು. ವಿಜಯಾನಂದ ಪ್ರಿಂಟರ್ಸ್ ಲಿ. ಆರಂಭಿಸಿ ಕನ್ನಡ ಪತ್ರಿಕಾ ಲೋಕಕ್ಕೆ ಹೊಸತನ ಕೊಟ್ಟವರು. 3 ದೈನಿಕ ಹಾಗೂ 2 ನಿಯತ ಕಾಲಿಕಗಳನ್ನು ಏಕಕಾಲಕ್ಕೆ ನಿರ್ವಹಿಸಿ, ರಾಜ್ಯದ ಮೂಲೆ ಮೂಲೆಗಳ ಜನರಲ್ಲೂ ಓದುವ ರುಚಿ ಹೆಚ್ಚಿಸಿದವರು.
2012ರಲ್ಲಿ ‘ವಿಜಯವಾಣಿ’ ಆರಂಭಿಸಿ ಅತ್ಯಂತ ಕಡಿಮೆ ಅವಧಿಯಲ್ಲೇ ಅತಿಹೆಚ್ಚು ಪ್ರಸಾರವುಳ್ಳ ವಿಶ್ವಾಸಾರ್ಹ ದೈನಿಕವನ್ನಾಗಿಸಿ ಕನ್ನಡ ಪತ್ರಿಕೋದ್ಯಮದಲ್ಲಿ ದಾಖಲೆ ಸ್ಥಾಪಿಸಿದರು. ಹೊಸ ಓದುಗರ ಸೃಷ್ಟಿ ಹಾಗೂ ಎಲ್ಲ ಪುಟಗಳೂ ವರ್ಣಮಯ ಮತ್ತು ದಿನವೂ ಪುರವಣಿ ನೀಡುವ ಮೂಲಕ ಕನ್ನಡ ಪತ್ರಿಕೋದ್ಯಮದ ಸಾಧ್ಯತೆಯನ್ನು ವಿಸ್ತರಿಸಿದರು. 2017ರಲ್ಲಿ ‘ದಿಗ್ವಿಜಯ ನ್ಯೂಸ್’ ಚಾನಲ್ ಆರಂಭಿಸುವ ಮೂಲಕ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಕ್ಕೂ ಧುಮುಕಿ, ಹೊಸ ಪ್ರಯೋಗಗಳಿಂದ ಹೆಚ್ಚು ಜನ ವೀಕ್ಷಕರನ್ನು ತಲುಪುವಂತೆ ಮಾಡಿದ್ದಾರೆ. 1996ರಿಂದ 2004ರವರೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರದ ಮೂಲಕ ಶೈಕ್ಷಣಿಕ, ಔದ್ಯಮಿಕ ಮತ್ತು ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಪರಿಶ್ರಮಿಸಿ, ರಾಜಕೀಯದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದರು. ಸಂಸತ್ನ ವಿವಿಧ ಸಲಹಾ ಸಮಿತಿಗಳ ಸದಸ್ಯರಾಗಿದ್ದರು. ಒಂದು ಅವಧಿಗೆ ಎಂಎಲ್ಸಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಗೆ ನೈಋತ್ಯ ರೈಲ್ವೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಹಾಗೂ ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಹೋರಾಟಕ್ಕೂ ಧುಮುಕಿದ ಸಂಕೇಶ್ವರ, ನಾಗರಿಕ ಸೌಲಭ್ಯಗಳ ಸುಧಾರಣೆಗೆ ವಿಶೇಷ ಒತ್ತು ನೀಡಿದವರು. ವಿಜಯ ಸಂಕೇಶ್ವರ ಅವರನ್ನು ಜನ ಮೆಚ್ಚಿರುವುದೇ ಅವರ ಕಠಿಣ ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತೆ ಹಾಗೂ ಪರಿಶ್ರಮಕ್ಕಾಗಿ. ಜೀವನದಲ್ಲಿ ಯಶಸ್ಸು ಗಳಿಸಲು ನಿಷ್ಠೆ ಹಾಗೂ ಪರಿಶ್ರಮದೊಂದಿಗೆ ಕಟ್ಟುನಿಟ್ಟಿನ ಶಿಸ್ತು ಮತ್ತು ದೂರದರ್ಶಿತ್ವ, ಸಾಮಾಜಿಕ ಕಾಳಜಿ ಅಗತ್ಯ ಎಂದು ಪ್ರತಿಪಾದಿಸುತ್ತ, ಅದರಂತೆಯೇ ನಡೆಯುತ್ತಿರುವವರು.
ಸಂದಿರುವ ಪ್ರಶಸ್ತಿಗಳು
1994ರಲ್ಲಿಯೇ ವ್ಯಾಪಾರ ಶ್ರೇಷ್ಠತೆಗಾಗಿ ನವದೆಹಲಿಯ ಆರ್ಥಿಕ ಅಧ್ಯಯನ ಸಂಸ್ಥೆ ಉದ್ಯೋಗ ರತ್ನ, 1998ರಲ್ಲಿ ಸಾರಿಗೆ ರತ್ನ, 2003ರಲ್ಲಿ ವಿಶ್ವೇಶ್ವರಯ್ಯ ನವರತ್ನ, 2008ರಲ್ಲಿ ಸಾರಿಗೆ ಸಾಮ್ರಾಟ (ಆಲ್ ಇಂಡಿಯಾ ಟ್ರಾನ್ಸ್ಪೋರ್ಟ್ ಕಾಂಗ್ರೆಸ್), 2010ರಲ್ಲಿ ಅಪೋಲೊ ಇಂಡಿಯಾ ಲಿ., ಸಿಯಟ್ ಇಂಡಿಯಾ, ಬೆಸ್ಟ್ ಎಲ್ಎಸ್ಪಿ-ಡೊಮೆಸ್ಟಿಕ್ ಎಕ್ಸ್ಪ್ರೆಸ್ ಸರ್ವೀಸಸ್ ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿವೆ. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ 2014ರಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. 2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ದೇಶದ ಹಲವು ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಡಾ. ವಿಜಯ ಸಂಕೇಶ್ವರ ಅವರ ಅಪಾರ ಕೊಡುಗೆಯನ್ನು ಗೌರವಿಸಿ, ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿವೆ. ಚಿಕ್ಕೋಡಿ ತಾಲೂಕು ಯಡೂರಿನ ಶ್ರೀ ವೀರಭದ್ರ ಕ್ಷೇತ್ರದ ವತಿಯಿಂದ ನೀಡಲಾಗುವ ‘ವಿಶ್ವ ಚೇತನ’ ಪ್ರಶಸ್ತಿಯನ್ನು ಶನಿವಾರ ಶ್ರೀಶೈಲ ಜಗದ್ಗುರುಗಳಿಂದ ಡಾ. ಸಂಕೇಶ್ವರರರು ಪಡೆದ ದಿನವೇ ಪದ್ಮಶ್ರೀ ಪ್ರಶಸ್ತಿ ಘೊಷಣೆಯಾಗಿದೆ.
ತಂದೆ-ಬಸವಣ್ಣೆಪ್ಪ, ತಾಯಿ -ಚಂದ್ರಮ್ಮ. ಜನ್ಮಸ್ಥಳ- ಗದಗ ಜನ್ಮದಿನ: 02.08.1950 ಪತ್ನಿ- ಲಲಿತಾ ಸಂಕೇಶ್ವರ ಮೂವರು ಪುತ್ರಿಯರು, ಓರ್ವ ಪುತ್ರ (ಆನಂದ ಸಂಕೇಶ್ವರ, ವಿಆರ್ಎಲ್ ಎಂ.ಡಿ.).
ಪ್ರಶಸ್ತಿ ನಿರೀಕ್ಷಿಸಿರಲಿಲ್ಲ…
ಹುಬ್ಬಳ್ಳಿ: ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಕನಸು, ಮನಸ್ಸಿನಲ್ಲಿಯೂ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಈ ಪ್ರಶಸ್ತಿ ಇಡೀ ನಮ್ಮ ಸಿಬ್ಬಂದಿಗೆ ಸಲ್ಲಬೇಕು ಎಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ರಾತ್ರಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತದ ಟಾಪ್ 10 ಕಂಪನಿಗಳಲ್ಲಿ ನಮ್ಮ ಒಂದು ಕಂಪನಿ ಗುರುತಿಸಿರುವುದು ಸಂತಸ ತಂದಿದೆ. ಆದರೆ, ಇತರ ಕಂಪನಿಗಳೊಂದಿಗೆ ನಮ್ಮ ಸಂಸ್ಥೆಯನ್ನು ತುಲನಾತ್ಮಕವಾಗಿ ನೋಡಿದಾಗ ವಿಆರ್ಎಲ್ ಸಂಸ್ಥೆ ಮುಂಚೂಣಿಯಲ್ಲಿ ಇದೆ ಎಂದರು. ಕೇಂದ್ರ ಸರ್ಕಾರ ಕೊಡಮಾಡುವ ಉಚ್ಚಮಟ್ಟದ ಪ್ರಶಸ್ತಿಗಳಲ್ಲಿ ಪದ್ಮಶ್ರೀ ಕೂಡ ಒಂದು. ಇಷ್ಟು ದೊಡ್ಡ ಪ್ರಶಸ್ತಿ ನನಗೆ ಲಭಿಸುತ್ತದೆ ಎನ್ನುವುದನ್ನು ಕನಸಿನಲ್ಲೂ ಯೋಚಿಸಿರಲಿಲ್ಲ. ಭಾರತದ ಲಾರಿ ಉದ್ಯಮದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ವಾಹನ ಉಳ್ಳವರು ಯಾರೂ ಇಲ್ಲ.
ಆದರೆ, ನಮ್ಮಲ್ಲಿ 5000 ವಾಹನ ಹಾಗೂ 1200 ಶಾಖೆಗಳಿವೆ. ಇದೊಂದು ದೊಡ್ಡ ತಪಸ್ಸು. ಈ ತಪಸ್ಸಿನಲ್ಲಿ ನಮ್ಮ 20 ಸಾವಿರ ಸಿಬ್ಬಂದಿಯ ಶ್ರಮವಿದೆ ಎಂದರು. ಅನೇಕ ಅಳತೆಗೋಲಿನಲ್ಲಿ ನಮ್ಮ ಕಂಪನಿ ಮುಂಚೂಣಿಯಲ್ಲಿದೆ. ಇದನ್ನೆಲ್ಲ ಸರ್ಕಾರ ಗಮನಿಸಿದೆ. ಈ ರೀತಿ ಸಾಧನೆ ಮಾಡಿರುವವರಲ್ಲಿ ಲಕ್ಷಾಂತರ ಜನ ಇದ್ದಾರೆ. ಅದರಲ್ಲಿ ನಾವೂ ಒಬ್ಬರು ಎನ್ನುವ ಹೆಮ್ಮೆ ಇದೆ. ಸಾಧನೆ ಮಾಡುವವರಿಗೆ ಕಿವಿಮಾತು ಉಪಯೋಗಕ್ಕೆ ಬರುವುದಿಲ್ಲ. ನಮ್ಮ ಶ್ರಮ, ಶ್ರದ್ಧೆಯೇ ಉಪಯೋಗಕ್ಕೆ ಬರುತ್ತದೆ ಎಂದರು. ಇಂದಿನ ಯಾವುದೇ ಉದ್ಯಮ ಇರಲಿ ಶೇ. 40ರಷ್ಟು ವಿಫಲರಾಗು ತ್ತಾರೆ. ಶೇ. 50 ಜನ ಬದುಕುತ್ತಾರೆ. ಶೇ. 1- 2ರಷ್ಟು ಜನ ಮಾತ್ರ ಸಾಧನೆ ಮಾಡುತ್ತಾರೆ. ವಿಶೇಷವಾಗಿ ಲಾರಿ ಮತ್ತು ಪತ್ರಿಕೆ ನಡೆಸುವುದು ಅತ್ಯಂತ ಕಠಿಣ ವೃತ್ತಿ ಎಂದು ಹೇಳಿದರು.
ಯತಿ ಶ್ರೇಷ್ಠ ಪೇಜಾವರ ಶ್ರೀಗಳು
ಕೃಷ್ಣೈಕ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಅಧ್ಯಾತ್ಮದ ಜತೆ ಸಮಾಜವನ್ನೂ ಬೆಸೆದ ಸಂತ ಪರಂಪರೆಯ ಮೇರು ಕೊಂಡಿಯಾಗಿದ್ದವರು. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ರಾಮಕುಂಜ ಎಂಬ ಪುಟ್ಟ ಹಳ್ಳಿಯಲ್ಲಿ 1931ರ ಏ.27ರಂದು ನಾರಾಯಣಾಚಾರ್ಯ-ಕಮಲಮ್ಮ ದಂಪತಿ ಪುತ್ರನಾಗಿ ಜನನ. 8ರ ಹರೆಯದಲ್ಲೇ (1938) ಪೇಜಾವರ ಮಠ ಪರಂಪರೆಯ 32ನೇ ಯತಿಯಾಗಿ ದೀಕ್ಷೆ ಸ್ವೀಕರಿಸಿ, ಒಟ್ಟು ಐದು ಬಾರಿ ಕೃಷ್ಣಮಠದ ಪರ್ಯಾಯ ನೆರವೇರಿಸಿ ದಾಖಲೆ ನಿರ್ವಿುಸಿದವರು. ಅಸಮಾನತೆ, ಅಸ್ಪ್ಪೃಶ್ಯತೆ ವಿರುದ್ಧ ಸರಿಸುಮಾರು ಎಂಟು ದಶಕಗಳ ಕಾಲ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸುತ್ತಾ ಬಂದವರು. ದಲಿತರ ಕೇರಿಗೆ ಭೇಟಿ, ಗ್ರಾಮಗಳ ದತ್ತು ಸ್ವೀಕಾರ, ಹಳ್ಳಿಗಳಿಗೆ ಸೋಲಾರ್ ಮೂಲಕ ಬೆಳಕು ಕಲ್ಪಿಸುವ ಯೋಜನೆ, ಬಡಮಕ್ಕಳ ವಿದ್ಯಾರ್ಜನೆಗೆ ನೆರವು, ಪ್ರಾಕೃತಿಕ ವಿಕೋಪ ನಿರಾಶ್ರಿತರಿಗೆ ಸಹಾಯಹಸ್ತ, ಪರಿಸರ ಹೋರಾಟ ನಿರಂತರವಾಗಿತ್ತು. ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಯೋಚಿಸದೆ ರಾಜಕೀಯ ಸಹಿತ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದುದು ಅವರ ವಿಶೇಷತೆ. ವ್ಯಾಪಕ ಜನಪ್ರಿಯತೆ ಹೊಂದಿದ್ದ ಶ್ರೀಗಳಿಗೆ ವೈಭವದ ಬದುಕು ಸಾಗಿಸುವ ಅವಕಾಶವಿದ್ದರೂ ಕೊನೆಯ ಉಸಿರಿನವರೆಗೂ ಸರಳತೆಯ ಪ್ರತೀಕವಾಗಿದ್ದರು. 2019ರ ಡಿ.29ರಂದು ಉಡುಪಿಯ ರಥಬೀದಿ ಪೇಜಾವರ ಮಠದಲ್ಲಿ ಕೃಷ್ಣೈಕ್ಯರಾದ ಅವರ ವೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠದಲ್ಲಿ ನಿರ್ವಿುಸಲಾಗಿದೆ.
ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುಗಳಿಗೆ ಸಮರ್ಪಿ ಸಿದೆ. ಅವರ ಜೀವಿತಾವಧಿಯಲ್ಲಿ ಈ ಪ್ರಶಸ್ತಿ ಬಂದಿದ್ದರೆ ನಮಗೆ ಹೆಚ್ಚು ಸಂತಸ ವಾಗುತ್ತಿತ್ತು. ಆದರೂ ಈಗ ನೀಡಿರುವ ಪ್ರಶಸ್ತಿಯನ್ನು ಸಂತಸದಿಂದ ಸ್ವೀಕರಿಸುತ್ತೇವೆ.
| ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ