ಗೋವಿನ ಕೆಚ್ಚಲು ಸೀಳಿದ ಘಟನೆಗೆ ತೀವ್ರ ಖಂಡನೆ
ಅಯೋಧ್ಯೆಯಲ್ಲಿರುವ ವಿಶ್ವಪ್ರಸನ್ನ ತೀರ್ಥ ದಿಗ್ಭ್ರಮೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಹ್ಞಾಂ… ಅಯ್ಯೋ ರಾಮಾ..! ಗೋವಿನ ಮೇಲಿನ ಕ್ರೌರ್ಯಕ್ಕೆ ಅಂತ್ಯವೂ, ಪಾಪಿಗಳಿಗೆ ಶಿಕ್ಷೆಯೂ ಈ ನೆಲದಲ್ಲಿ ಇಲ್ಲದಾಯಿತೇ…?
ಚಾಮರಾಜನಗರದಲ್ಲಿ ನಡೆದಿರುವ ಗೋವಿನ ಕೆಚ್ಚಲು ಸೀಳಿದ ಬೀಭತ್ಸ ಕೃತ್ಯದ ಸುದ್ದಿ ಕೇಳಿ ಅಯೋಧ್ಯಾ ಶ್ರೀರಾಮ ಮಂದಿರದಲ್ಲಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಘಾತ, ದಿಗ್ಭ್ರಮೆ ವ್ಯಕ್ತಪಡಿಸಿದ ರೀತಿ ಇದು.
ಇನ್ನೆಷ್ಟು ಸಹಿಸಿಕೊಳ್ಳಬೇಕು?
ಬಹುಸಂಖ್ಯಾತರಾಗಿದ್ದೂ ಜಾತ್ಯತೀತಿತ ನ್ಯಾಯದ ನೆಪದಲ್ಲಿ ನಮ್ಮ ಭಾವನೆ, ಶ್ರದ್ಧೆಗಳಿಗೆ ಕೊಡಲಿ ಏಟು ಕೊಡುವ ದುಷ್ಟ ಪ್ರವೃತ್ತಿಗಳನ್ನು ಇನ್ನೂ ಎಷ್ಟು ಸಹಿಸಿಕೊಳ್ಳಬೇಕು ಎಂದು ಸರ್ಕಾರಗಳನ್ನು ಕಟುವಾಗಿ ಪ್ರಶ್ನಿಸಿದ ಶ್ರೀಗಳು, ಘಟನೆ ಕೇಳಿ ಅತ್ಯಂತ ದು:ಖವಾಗಿದೆ. ಅದೊಂದು ಅತ್ಯಂತ ಪೈಶಾಚಿಕ ಕೃತ್ಯ. ಕೋಟ್ಯಂತರ ಹಿಂದುಗಳಿಗೆ ಇದು ಅತ್ಯಂತ ಕೆಟ್ಟ ದಿನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಠಿಣ ನಿಲುವು ತಾಳಬೇಕಾದೀತು
ಅತ್ಯಂತ ಸಾಧು ಪ್ರಾಣಿಯೆಂದರೆ ಗೋವು. ಎಲ್ಲರ ಜೀವನಕ್ಕೆ ಆಸರೆಯಾಗಿರುವ ಸೌಮ್ಯ ಪ್ರಾಣಿಯದು. ದಿನ ಬೆಳಗಾದರೆ ಕಾಫಿ-ಟೀ ಕುಡಿಯಲು ಗೋವಿನ ಹಾಲನ್ನೇ ಬಳಸುತ್ತೇವೆ. ಅಂತಹ ಗೋವಿನ ಕೆಚ್ಚಲನ್ನೇ ಸೀಳಿದ ಕ್ರೌರ್ಯವನ್ನು ನಾವು ಕಠಿಣ ಪದಗಳಿಂದ ಖಂಡಿಸುತ್ತೇವೆ. ಅಂತಹ ಘನಘೋರ ಅಪರಾಧ ಮಾಡಿದಂತಹ ವ್ಯಕ್ತಿಗೆ ನ್ಯಾಯಾಲಯದ ಮೂಲಕ ಶಿಕ್ಷೆ ವಿಧಿಸಬೇಕು. ಮತ್ತೆಲ್ಲೂ ಗೋವಿನ ಮೇಲೆ ಇಂತಹ ಕ್ರೌರ್ಯ ನಡೆಯಕೂಡದು. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಗೋವಿನ ರಕ್ಷಣೆಗಾಗಿ ನಾವು ಕಠಿಣ ನಿಲುವು ತಾಳಿ, ಆಮರಣಾಂತ ಉಪವಾಸದ ಹೋರಾಟವನ್ನೂ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮನೆಗಳಲ್ಲಿ ದೇವರ ಮುಂದೆ ದೀಪ ಹಚ್ಚಿ
ಇತಿಹಾಸ ಪ್ರಸಿದ್ಧ ಮಹಾಕುಂಭಮೇಳ ಪ್ರಯಾಗರಾಜ್ನಲ್ಲಿ ಈ ವರ್ಷ ನಡೆಯುತ್ತಿದ್ದು, 144 ವರ್ಷಕ್ಕೊಮ್ಮೆ ಅದು ಘಟಿಸುತ್ತದೆ. ನಮ್ಮ ಕಾಲದಲ್ಲಿ ಕುಂಭಮೇಳ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಸನಾತನ ಸಂಸ್ಕೃತಿ ಅದೆಷ್ಟು ಪ್ರಾಚಿನವಾವಾದೆ, ನಮ್ಮಲ್ಲಿ ಅದೆಷ್ಟು ಹಾಸುಹೊಕ್ಕಿದೆ, ಅದನ್ನು ನಾವು ತಪ್ಪದೇ ಆಚರಿಸಿಕೊಂಡು ಬರುತ್ತಿದ್ದೇವೆ ಎನ್ನುವುದಕ್ಕೆ ಈ ಮೇಳ ಸಾಕ್ಷ್ಯವಾವಾದೆ. ಸಮುದ್ರ ಮಥನದ ವೇಳೆ ಅಮೃತದ ಬಿಂದುವೊಂದು ಪ್ರಯಾಗ್ ಕ್ಷೇತ್ರದಲ್ಲಿ ಬಿದ್ದ ದಿನ, ಗುರು ವೃಷಭ ಸ್ಥಾನದಲ್ಲಿ ಇದ್ದ ಸಮಯ. ಆ ಸಂದರ್ಭ ಮತ್ತೆ ಘಟಿಸುತ್ತಿದೆ. ಅಂತಹ ಪುಣ್ಯತಮವಾದ ಕ್ಷೇತ್ರವನ್ನು ನಾವು ಒಮ್ಮೆಯಾದರೂ ಸಂದರ್ಶಿಸಿ, ಅಲ್ಲಿನ ಪವಿತ್ರ ತೀರ್ಥಪ್ರಭೆಯಲ್ಲಿ ಮಿಂದು ಬರೋಣ. ನಾವೆಲ್ಲರೂ ಆ ಸಂದರ್ಭದಲ್ಲಿ ನೈತಿಕವಾಗಿ, ಮಾನಸಿಕವಾಗಿ, ಹಾರ್ದಿಕವಾಗಿ ಜೋಡಿಸಿಕೊಳ್ಳೋಣ. ಪ್ರಪಂಚದ ನಾನಾ ಭಾಗಗಳಿಂದ ಕೋಟ್ಯಂತರ ಶ್ರದ್ಧಾಳುಗಳು ಬಂದು ಸೇರುವ ಆ ಕ್ಷೇತ್ರದಲ್ಲಿ ಯಾವುದೇ ದುರ್ಘಟನೆ ಆಗದಂತೆ, ಎಲ್ಲ ಉತ್ಸವವೂ ಸಾಂಗವಾಗಿ ನಡೆಯುವಂತೆ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಮನೆಗಳಲ್ಲಿ ದೇವರ ಮುಂದೆ ಒಂದು ದೀಪ ಹಚ್ಚಿ ಕುಂಭಮೇಳದ ಯಶಸ್ಸಿಗೆ ಪ್ರಾರ್ಥಿಸೋಣ ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.