ಉಡುಪಿ : ಮೈಸೂರಿನ ಬಿ.ಬಿ ಕೇರಿಯಲ್ಲಿ ಸೋಮವಾರ ಸಾಯಂಕಾಲ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಂಚಾರ ಕೈಗೊಂಡರು.
ಮೈಸೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮಜಾಗರಣ ವಿಭಾಗ ಮತ್ತು ಸಾಮರಸ್ಯ ವೇದಿಕೆಗಳ ಸಂಯೋಜನೆಯಲ್ಲಿ . ಸುಮಾರು ಇನ್ನೂರಕ್ಕೂ ಅಧಿಕ ಮನೆಗಳನ್ನು ಹೊಂದಿರುವ ಬಡಾವಣೆಗೆ ಶ್ರೀಗಳು ಭೇಟಿ ನೀಡಿದರು. ಪ್ರತೀ ಮನೆಗಳ ಮುಂಭಾಗ ಓಣಿ ರಸ್ತೆಗಳುದ್ದಕ್ಕೂ ಸಾಲು ಸಾಲು ರಂಗೋಲಿ , ಕೇಸರಿ ಪತಾಕೆ , ಭಗವಾಧ್ವಜ , ತಳಿರು ತೋರಣ ಹೂವಿನ ಮಾಲೆಗಳ ಮೂಲಕ ಅಲಂಕರಿಸಲಾಗಿತ್ತು .
ಬಾಲಕರಿಂದ ನಾಸಿಕ್ ಬ್ಯಾಂಡ್ ವಾದನ ಮಹಿಳೆಯರು ಯುವತಿಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಶ್ರೀಗಳನ್ನು ಸಂಭ್ರಮದಿಂದ ಸ್ವಾಗತಿಸಿದರು .
ಐದು ಮನೆಗಳಿಗೆ ತೆರಳಿ ಹಿತ್ತಾಳೆಯ ಶ್ರೀ ರಾಮ ದೀಪ ಗಳನ್ನು ಬೆಳಗಿ ಮನೆಯ ದೇವರ ಭಾವಚಿತ್ರಗಳಿಗೆ ಹೂವನ್ನು ಇರಿಸಿ ಮಂಗಳಾರತಿ ಬೆಳಗಿದರು. ಅರಶಿನ ಕುಂಕುಮ , ಓಕುಳಿಯ ಆರತಿಗಳನ್ನು ಬೆಳಗಿ ಭಕ್ತಿಯಿಂದ ಬರಮಾಡಿಕೊಂಡರು.
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ತನಕ ಪ್ರತೀ ದಿನ ಸಂಜೆ ರಾಮದೀಪ ಬೆಳಗಿ ರಾಮಮಂತ್ರ ಜಪ ಮಾಡಿ ಪ್ರಾರ್ಥಿಸುವಂತೆ ಶ್ರೀಗಳು ಸೂಚಿಸಿದರು .
ಮಕ್ಕಳಿಗೆ ಉತ್ತಮ ಶಿಕ್ಷಣ , ಸಂಸ್ಕಾರಗಳನ್ನು ನೀಡಬೇಕು .ಹಿಂದು ಸಮಾಜದ ಅವಿಭಾಜ್ಯ ಅಂಗವಾಗಿರುವ ನಾವೆಲ್ಲ ನಮ್ಮ ನಮ್ಮಕೇರಿ ಬಡಾವಣೆಗಳಲ್ಲೂ ಸಾಮರಸ್ಯ ಐಕಮತ್ಯ ಮತ್ತು ಧರ್ಮ ಪ್ರಜ್ಞೆಯನ್ನು ಉಳಿಸಿ ಒಗ್ಗಟ್ಟಿನಿಂದ ಶಾಂತಿ ನೆಮ್ಮದಿಯಿಂದ ಜೀವಿಸಬೇಕಾಗಿದೆ .ಇದೇ ಹಿಂದು ಸಮಾಜದ ಶಕ್ತಿಯಾಗಿದೆ . ಅದನ್ನುಳಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ಹೇಳಿದರು.
ಕೇರಿಯ ಪಟ್ಟಾಲದಮ್ಮ ದೇವಿ ಮಂದಿರಕ್ಕೆ ಭೇಟಿ ನೀಡಿ ಆರತಿ ಬೆಳಗಿದರು . ಎಲ್ಲ ಮನೆಗಳಿಗೂ ಶ್ರೀ ಕೃಷ್ಣನ ಸಿಹಿತಿಂಡಿ ಪ್ರಸಾದಗಳನ್ನು ವಿತರಿಸಿದರು . ಸಾಮಾಜಿಕ ನ್ಯಾಯ ವೇದಿಕೆಯ ಡಾ.ಆನಂದ್ ಕುಮಾರ್ , ಸ್ಥಳೀಯರಾದ ನಾಗೇಂದ್ರ , ಧರ್ಮ ಜಾಗರಣದ ವಾಮನ್ ರಾವ್ , ನಿತ್ಯಾನಂದ ಗಿರೀಶ , ಮೊದಲಾದವರು ಸಂಯೋಜಿಸಿದ್ದರು. ಪುತ್ತೂರಿನ ಹಿಂದು ನೇತಾರ ಅರುಣ ಕುಮಾರ ಪುತ್ತಿಲ , ಚಾತುರ್ಮಾಸ್ಯ ಸಮಿತಿಯ ಪ್ರಮುಖರಾದ ಎಂ. ಕೃಷ್ಣರಾಜ ಪುರಾಣಿಕ , ರವಿ ಶಾಸ್ತ್ರಿ , ಶ್ರೀಗಳ ಆಪ್ತರಾದ ವಿಷ್ಣು ಆಚಾರ್ಯ , ಕೃಷ್ಣ ಭಟ್ , ವಾಸುದೇವ ಭಟ್ , ಶ್ರೀನಿವಾಸ ಪ್ರಸಾದ್ ಮೊದಲಾದವರಿದ್ದರು .