14ರಂದು ಪೇಜಾವರ ಶ್ರೀಗಳಿಗೆ ಗುರುವಂದನೆ, ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜನೆ

ರಾಯಚೂರು: ನಗರದಲ್ಲಿ ಫೆ.13ರಂದು ಮಧ್ವ ನವಮಿ ನಿಮಿತ್ತ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆ ಹಾಗೂ ಫೆ.14ರಂದು ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫೆ.13 ರಂದು ಸಂಜೆ 4ಕ್ಕೆ ಜವಾಹರನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಮುಂಗ್ಲಿ ಪ್ರಾಣದೇವರ ದೇವಸ್ಥಾನದವರೆಗೆ ಮಧ್ವಾಚಾರ್ಯರ ಭಾವಚಿತ್ರ, ಸರ್ವಮೂಲ ಗ್ರಂಥಗಳ ಹಾಗೂ ವಿಶ್ವೇಶ ತೀರ್ಥರ ಶೋಭಾಯಾತ್ರೆ ಜರುಗಲಿದೆ. ಫೆ.14ರಂದು ಪಂಚಮ ಪರ್ಯಾಯ ಪೂರ್ಣಗೊಳಿಸಿದ ಹಾಗೂ 80ನೇ ಪೀಠಾರೋಹಣ ಆಚರಿಸುತ್ತಿರುವ ಪೇಜಾವರ ಶ್ರೀಗಳಿಗೆ ಕನಕಾಭಿಷೇಕ, ಮುತ್ತಿನಾಭಿಷೇಕ ಹಾಗೂ ತುಲಾಭಾರ ಜರುಗಲಿದೆ ಎಂದರು. ಈ ಸಂದರ್ಭ ಮುಖಂಡರಾದ ಪಂ.ಮುಕುಂದಾಚಾರ್ಯ ಜೋಷಿ, ನರಸಿಂಗರಾವ್, ಸುಧೀರ್, ಜಯಕುಮಾರ ದೇಸಾಯಿ, ಪ್ರಲ್ಹಾದ ಫಿರೋಜಾಬಾದ್ ಉಪಸ್ಥಿತರಿದ್ದರು.