ಮಂದಿರಕ್ಕಾಗಿ ಮೋದಿ ದಿಟ್ಟಕ್ರಮ ಕೈಗೊಳ್ಳುವ ವಿಶ್ವಾಸವಿದೆ: ಪೇಜಾವರ ಶ್ರೀ

ಉಡುಪಿ: ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಆದರೆ ಈಗ ಪೂರಕ ವಾತಾವರಣವಿದೆ. ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬಹುದು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ಸಿಗುವ ಭರವಸೆ ಇದ್ದು, ಪ್ರಧಾನಿ ದಿಟ್ಟಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಉಡುಪಿಯಲ್ಲಿ ಡಿ.2ರಂದು ನಡೆಯುವ ಜನಾಗ್ರಹ ಸಭೆ ಪೂರ್ವಭಾವಿಯಾಗಿ ಕರಸೇವೆಯಲ್ಲಿ ಭಾಗವಹಿಸಿದ ಹಿರಿಯರಿಗೆ ಶುಕ್ರವಾರ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ವಿವಾದಿತ ಕಟ್ಟಡ ಭಗ್ನಗೊಳಿಸಲು ನನ್ನ ಒಪ್ಪಿಗೆ ಇರಲಿಲ್ಲ. ಸಾಂಕೇತಿಕ ಕರಸೇವೆ ನಡೆಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಕರಸೇವಕರ ಅತ್ಯುತ್ಸಾಹದಿಂದ ನನ್ನ ಪ್ರಯತ್ನ ವಿಫಲವಾಯಿತು. ನೆಲಸಮಗೊಂಡ ಕಟ್ಟಡದ ಅವಶೇಷದಲ್ಲಿ ಹಿಂದು ದೇವಾಲಯದ ಕುರುಹುಗಳು, ಸ್ಪಷ್ಟ ದಾಖಲೆಗಳು ಪತ್ತೆಯಾದ ಬಳಿಕ ನನ್ನ ನಿಲುವು ಬದಲಾಯಿತು. ಈ ಘಟನೆಯಿಂದ ನನ್ನ ಬಂಧನಕ್ಕೆ ಅನೇಕ ಪ್ರಯತ್ನ ನಡೆದಿದ್ದವು ಎಂದು ಪೇಜಾವರ ಶ್ರೀ 1992ರ ಆ ದಿನಗಳನ್ನು ನೆನಪಿಸಿಕೊಂಡರು.

ಸಭೆಯಲ್ಲಿ ಹಿರಿಯ ಮುಖಂಡ ಸೋಮಶೇಖರ ಭಟ್, ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಹಿಂಪ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ನಗರಾಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.