ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಸುಮಾರು 10 ವರ್ಷಗಳಿಂದ ದೊಡ್ಡಣಗುಡ್ಡೆ ಮೊಹಮ್ಮದ್ ಆರಿಫ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆರಿಫ್ ಅವರ ಅಣ್ಣನೂ ಕೆಲವರ್ಷ ಶ್ರೀಗಳಿಗೆ ಚಾಲಕರಾಗಿ ಕೆಲಸ ಮಾಡಿದ್ದರು. ಈಗ ಮುಂಬೈ ಮಳೆಯಲ್ಲೂ ಶ್ರೀಗಳಿಗೆ ಮುಸ್ಲಿಂ ಚಾಲಕರೊಬ್ಬರು ನೆರವಾಗಿರುವುದು ಗಮನ ಸೆಳೆದಿದೆ.
ಮುಂಬೈಯಲ್ಲೀಗ ಭಾರಿ ಮಳೆಯಾಗುತ್ತಿದ್ದು, ಬರೋಡಾದಿಂದ ಸೋಮವಾರ ರಾತ್ರಿ ಆಗಮಿಸಿದ ಶ್ರೀಗಳನ್ನು ಡೊಂಬಿವಿಲಿ ರಾಘವೇಂದ್ರ ಮಠಕ್ಕೆ ಕನ್ನಡಿಗ ಮುಸ್ಲಿಂ ಚಾಲಕ, ಕಲಬುರ್ಗಿಯ ಶರ್ಪುದ್ದೀನ್ ಮಲಿಕ್ ತಲುಪಿಸಿದ್ದಾರೆ.
ಶ್ರೀಗಳು ಬೊರಿವಿಲಿ ರೈಲು ನಿಲ್ದಾಣದಲ್ಲಿ ಇಳಿದು ಬಳಿಕ ಸಾಂತಾಕ್ರೂಸ್ನ ಶಾಖಾ ಮಠದ ಸ್ವಂತ ಕಾರಿನಲ್ಲಿ ಡೊಂಬಿವಿಲಿ ತಲುಪಲು ನಿರ್ಧರಿಸಲಾಗಿತ್ತು. ಆದರೆ ಭಾರಿ ಮಳೆಯ ಕಾರಣ ಮಹಾನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಶ್ರೀಗಳಿಗೆ ಬಾಡಿಗೆ ಕಾರು ವ್ಯವಸ್ಥೆ ಮಾಡಲಾಯಿತು. ಸೋಮವಾರ ರಾತ್ರಿ 8 ಗಂಟೆಗೆ ತಡವಾಗಿ ರೈಲು ನಿಲ್ದಾಣ ತಲುಪಿದ್ದು, ನಿಗದಿ ಮಾಡಿದ್ದ ಕಾರು ಚಾಲಕ ಕಾದು ಹೊರಟು ಹೋಗಿದ್ದ. ಬಳಿಕ ಇನ್ನೊಂದು ಕಾರು ಬುಕ್ ಮಾಡಲಾಯಿತು. ಆಗ ಬಂದವರೇ ಶರ್ಪುದ್ದೀನ್ ಮಲಿಕ್. ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಚಾಲನೆ ಸ್ವಲ್ಪ ಕಷ್ಟವೆನಿಸಿದರೂ ಸುಮಾರು 40 ಕಿ.ಮೀ. ಅಂತರವನ್ನು 3 ಗಂಟೆಯಲ್ಲಿ ಕ್ರಮಿಸಿ ಶ್ರೀಗಳನ್ನು ಸುರಕ್ಷಿತವಾಗಿ ಮಠಕ್ಕೆ ತಲುಪಿಸಿದ್ದರು.