ಪೀಣ್ಯ ಪ್ರದೇಶದಲ್ಲಿ ವಿಷವಾಯ್ತು ನೀರು: ಎಚ್ಚರವಿರಲಿ, ಇದು ಜೀವದ ವಿಷಯ

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವವರು ಓದಲೇಬೇಕಾದ ಸುದ್ದಿಯಿದು. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವೆಂದು ಹೆಸರಾದ ಪೀಣ್ಯಾ ಪ್ರದೇಶದಲ್ಲಿ ಕುಡಿಯುವ ನೀರು ಅಕ್ಷರಶಃ ವಿಷವಾಗಿದೆ ! ಅದನ್ನು ಕುಡಿದರೆ ಜೀವಕ್ಕೆ ಹಾನಿ ಎಂಬುದು ಸಂಶೋಧನೆಯಿಂದಲೇ ತಿಳಿದುಬಂದಿದೆ.

ಇಲ್ಲಿನ ಕೈಗಾರಿಕೆಗಳಿಂದಾಗಿ ಸೀಸ, ಮರ್ಕ್ಯೂರಿಯಂತಹ ವಿಷಕಾರಿ ಅಂಶಗಳು ಅಂತರ್ಜಲ ಸೇರಿವೆ. ಸಪ್ತಗಿರಿ ಇಂಜಿನಿಯರಿಂಗ್​ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಬ್ಲೆಸ್ಸಿ ವಿನಯ್​ ಪೀಣ್ಯಾ ಕೈಗಾರಿಕಾ ಪ್ರದೇಶದ 28 ಕಡೆಗಳ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಆ ನೀರಿನಲ್ಲಿ 0.02 ರಿಂದ 0.5ಎಂಜಿ ಪ್ರಮಾಣದ ಸೀಸ ಪತ್ತೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕುಡಿಯುವ ನೀರಿನಲ್ಲಿ ಸೀಸ ಇರಲೇಬಾರದು. ಸೀಸದ ಅಂಶ ಹೊಟ್ಟೆಗೆ ಹೋದರೆ ಪಾರ್ಕಿನ್​ಸನ್​, ಮಾನಸಿಕ ಕಾಯಿಲೆಗಳೂ ಬರುತ್ತವೆ. ನಿರಂತರವಾಗಿ ಇದೇ ನೀರನ್ನು ಕುಡಿದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರಾಧ್ಯಾಪಕಿ ಬ್ಲೆಸ್ಸಿ ವಿನಯ್​ ತಿಳಿಸಿದ್ದಾರೆ.

ಕುದಿಸಿದರೆ ಇನ್ನೂ ಡೇಂಜರ್​
ನೀರು ಕಲುಷಿತಗೊಂಡಿದೆ ಎಂದು ಕುದಿಸಿ ಕುಡಿಯುವಂತೆಯೂ ಇಲ್ಲ. ಕುದಿಸಿದರೆ ಸೀಸದ ಅಂಶ ಇನ್ನೂ ಹೆಚ್ಚಾಗುತ್ತದೆ. (ದಿಗ್ವಿಜಯ ನ್ಯೂಸ್​)