ಬೇಯಿಸಿದ ಶೇಂಗಾದಲ್ಲಿ ಹೇರಳವಾಗಿದೆ ವಿಟಮಿನ್​ ಇ

ಬೇಯಿಸಿದ ಶೇಂಗಾವು ವಿಟಮಿನ್ ಇ ಯನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದೆ. ಅರ್ಧ ಕಪ್ ಶೇಂಗಾ ವಿಟಮಿನ್ ಇ ಅಗತ್ಯವನ್ನು ಪೂರೈಸಬಲ್ಲುದು. ಅಂತೆಯೇ ವಿಟಮಿನ್ ಬಿ-ಕಾಂಪ್ಲೆಕ್ಸ್​ಗಳನ್ನೂ ಹೊಂದಿದ್ದು, ಆರೋಗ್ಯಕ್ಕೆ ಇದು ಹೆಚ್ಚು ಸಹಕಾರಿ.

ಅರ್ಧ ಕಪ್ ಬೇಯಿಸಿದ ಶೇಂಗಾವು ದಿನದ 1/5 ಭಾಗ ಥಿಯಾಮಿನ್ ಅಗತ್ಯವನ್ನು, 1/6 ಭಾಗದಷ್ಟು ಫೋಲೇಟ್ ಅಗತ್ಯವನ್ನು ಪೂರೈಸುತ್ತದೆ. ಅರ್ಧ ಕಪ್ ಬೇಯಿಸಿದ ಶೇಂಗಾವು 30 ಪ್ರತಿಶತ ದಿನದ ಅಗತ್ಯದ ಮೆಗ್ನೇಶಿಯಂನ್ನು, 25 ಪ್ರತಿಶತ ಪಾಸ್ಪರಸ್​ನ್ನು ಒದಗಿಸುತ್ತದೆ. ಅಂತೆಯೇ ಇದರಲ್ಲಿನ ಝಿಂಕ್ ಅಂಶ ಹಾಗೂ ಇನ್ನಿತರ ಗುಣಗಳು ಗಾಯಗಳು ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ. ಹಲ್ಲು, ನರಗಳ ಆರೋಗ್ಯಕ್ಕೆ ಬೇಯಿಸಿದ ಶೇಂಗಾ ಉತ್ತಮ.

ಇನ್​ಸ್ಟಿಟ್ಯೂಟ್ ಆಫ್ ಮೆಡಿಸಿನ್ ಹಾಗೂ ಪ್ರಪಂಚದ ಹಲವಾರು ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರಗಳು ಮನುಷ್ಯನಿಗೆ ಉತ್ತಮ ಕೊಬ್ಬಿನ ಆವಶ್ಯಕತೆಯಿದೆ ಎಂಬುದಾಗಿ ಸಾಬೀತುಪಡಿಸಿವೆ. ಪ್ರತಿನಿತ್ಯ 40ರಿಂದ 50 ಗ್ರಾಂನಷ್ಟು ಬೇಯಿಸಿದ ಶೇಂಗಾ ಸೇವನೆ ನಮಗೆ ಸಾಕಷ್ಟು ಉತ್ತಮ ಕೊಬ್ಬಿನಂಶವನ್ನು ನೀಡುತ್ತದೆ. ಇದಕ್ಕೆ ಬೇಯಿಸಿದ ಶೇಂಗಾವನ್ನು ಉಸಲಿಯ ರೂಪದಲ್ಲಿ ತೆಂಗಿನ ತುರಿ, ಒಗ್ಗರಣೆ ಹಾಕಿ ಸೇವಿಸಬಹುದು.

ಎಲ್ಲ ವಯೋಮಾನದವರೂ ಶೇಂಗಾವನ್ನು ಸೇವಿಸಬಹುದು. ಕೆಲವರಿಗೆ ಒಮ್ಮೆಲೇ ರೂಢಿಸಿಕೊಳ್ಳುವುದು ಕಷ್ಟವಾಗಬಹುದು. ನಿಧಾನವಾಗಿ ಅಳವಡಿಸಿಕೊಳ್ಳುತ್ತ ಸಾಗಿ. ಇನ್ನು ಕೆಲವರಿಗೆ ಶೇಂಗಾ ಸೇವನೆಯಿಂದ ಬಾಯಿ ಒಡೆಯುವುದು, ಭೇದಿಯಾಗುವುದು ಅಥವಾ ಇನ್ನಿತರ ಅಲರ್ಜಿಗಳು ಆಗಬಹುದು. ಅರಿತು ಮಿತವಾಗಿ ಬಳಸಿ.