ಆನೇಕಲ್: ತಾಲೂಕಿನ ಪ್ರವಾಸಿತಾಣ ಮುತ್ಯಾಲ ಮಡುವು ಹಾಗೂ ಪಟ್ನಗೆರೆ ಗೊಲ್ಲಹಳ್ಳಿಗೆ ಹೊಂದಿಕೊಂಡಂತಿರುವ ಅರಣ್ಯಪ್ರದೇಶದಿಂದ ಗ್ರಾಮಗಳತ್ತ ಬರುವ ನವಿಲು, ಮೊಲ ಸೇರಿ ಇನ್ನಿತರ ಪ್ರಾಣಿ ಪಕ್ಷಿ ಗಳನ್ನು ಅವ್ಯಾಹತವಾಗಿ ಬೇಟೆಯಾಡಲಾಗುತ್ತಿದೆ.
2 ವರ್ಷಗಳ ಹಿಂದೆ ನೂರಕ್ಕೂ ಹೆಚ್ಚು ನವಿಲುಗಳು ಈ ಪ್ರದೇಶಗಳಿಗೆ ಬರುತ್ತಿದ್ದವು, ಬೇಟೆಗಾರರು ಉರುಳು ಹಾಕಿ ಬೇಟೆಯಾಡುತ್ತಿದ್ದು, ಕುರುಹು ಸಿಗದಂತೆ ನವಿಲುಗರಿಗಳನ್ನು ಸ್ಥಳದಲ್ಲೇ ಸುಟ್ಟು ಹಾಕುತ್ತಾರೆ. ನವಿಲು ಸಂತತಿಯನ್ನೇ ನಾಶ ಮಾಡುತ್ತಿದ್ದಾರೆ. ಬೇಟೆಗಾರರ ತಂಡ ಕಾಡಿನಲ್ಲೇ ನವಿಲು ಮಾಂಸ ತುಂಬಿಕೊಂಡು ಕಾಲ್ಕಿಳುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗೆಜ್ಜೆ ತಂತ್ರ: ನವಿಲು ಹಿಡಿಯುವ ಉರುಳಿನ ತಂತಿಗೆ ಗೆಜ್ಜೆ ಕಟ್ಟಿ ತಂತಿ ಕೆಳಭಾಗದಲ್ಲಿ ಆಹಾರ ಹಾಕುತ್ತಾರೆ. ಆಹಾರ ತಿನ್ನಲು ಬಂದ ನವಿಲುಗಳು ಸಿಕ್ಕಿಬೀಳುತ್ತವೆ. ಬಿಡಿಸಿಕೊಳ್ಳಲು ಒದ್ದಾಡುವಾಗ ಗೆಜ್ಜೆ ಸದ್ದು ಕೇಳಿಸಿಕೊಂಡು ನವಿಲನ್ನು ಬೇಟೆಯಾಡಲಾಗುತ್ತದೆ.
ರಾಷ್ಟ್ರೀಯ ಪಕ್ಷಿ ನವಿಲು ಸಂತತಿ ಉಳಿಸಬೇಕಾದ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ನೂರಾರು ನವಿಲುಗಳ ಮಾರಣಹೋಮವಾದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕಾಲ್ಕಿತ್ತ ಬೇಟೆಗಾರರು
ಸ್ಥಳೀಯರ ಮಾಹಿತಿ ಮೇರೆಗೆ ವಿಜಯವಾಣಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ನವಿಲುಗಳ ಬೇಟೆಯಾಡುವ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯರ ನೆರವಿನೊಂದಿಗೆ ವಿಜಯವಾಣಿ ತಂಡ ಸ್ಥಳಕ್ಕೆ ತೆರಳಿದಾಗ ಮಾತಿನ ಚಕಮಕಿ ನಡೆಸಿದ ಬೇಟೆಗಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈಗಾಗಲೇ ಬೇಟೆಗಾರರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಾಣಿ ಪಕ್ಷಿಗಳ ಬೇಟೆಗೆ ಮುಂದಾದರೆ ಜೈಲು ಶಿಕ್ಷೆಯಾಗುತ್ತದೆ.
| ಕೃಷ್ಣ ವಲಯ ಅರಣ್ಯಾಧಿಕಾರಿ