ನೆಮ್ಮದಿಯ ಬದುಕು ಕಾರ್ಮಿಕರ ಹೋರಾಟದ ಗುರಿಯಾಗಲಿ

ದಾವಣಗೆರೆ: ಕಾರ್ಮಿಕರ ಹೋರಾಟಗಳು ಕೇವಲ ವೇತನ, ಬೋನಸ್, ರಜೆ, ಪಿಎಫ್, ಇಎಸ್‌ಐನಂಥ ಸೌಲಭ್ಯಗಳನ್ನು ಪಡೆಯುವುದಕ್ಕೆ ಸೀಮಿತವಾಗದೇ, ನೆಮ್ಮದಿಯ ಬದುಕು ನಮ್ಮ ಗುರಿಯಾಗಬೇಕು ಎಂದು  ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ (ಎಐಯುಟಿಯುಸಿ) ಅಖಿಲ ಭಾರತ ಸಮಿತಿಯ ಕಾರ್ಯಕಾರಿಣಿ ಸದಸ್ಯ ಟಿ.ಎಸ್. ಸುನೀತ್ ಕುಮಾರ್ ಹೇಳಿದರು.

ಎಐಯುಟಿಯುಸಿಯ ಜಿಲ್ಲಾ ಸಮಿತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚುನಾವಣೆಗಳು ಮತ್ತು ಕಾರ್ಮಿಕರ ಮುಂದಿರುವ ಸವಾಲುಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದುಬಾರಿ ಕಾಲದಲ್ಲಿ ಜೀವನ ನಿರ್ವಹಣೆಗೆ ಅಗತ್ಯವಾದ ಕನಿಷ್ಠ ವೇತನ ದುಡಿಯುವ ವರ್ಗದವರಿಗೆ ಸಿಗಬೇಕು. ಅದು ನಮ್ಮ ನ್ಯಾಯಬದ್ಧ ಬೇಡಿಕೆಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲವಾಗಿದೆ. ಈ ವಿಚಾರಗಳ ಬಗ್ಗೆ ಕಾಳಜಿ ಉಳ್ಳವರು ನಮ್ಮ ಜನಪ್ರತಿನಿಧಿಗಳಾಗಬೇಕಿದೆ. ಅಂಥವರಿಂದ ಕಾರ್ಮಿಕರ ಪರವಾದ ನೀತಿಗಳನ್ನು ರೂಪಿಸಬೇಕಿದೆ ಎಂದು ತಿಳಿಸಿದರು.
ರಾಜಕೀಯ ನಮ್ಮ ಬದುಕನ್ನು ತೀರ್ಮಾನಿಸುತ್ತದೆ. ಜನರ ಬದುಕು ನೆಮ್ಮದಿಯಿಂದ ಕೂಡಿರಬೇಕು. ಈ ಬಗ್ಗೆ ಕಾರ್ಮಿಕರು ತಿಳಿದುಕೊಂಡು ಜಾಗೃತರಾಗುವ ಅಗತ್ಯವಿದೆ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ ಮಾತನಾಡಿ, ಆಳುವ ವರ್ಗ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ದುಡಿಯುವ ವರ್ಗದವರಿಗೆ ಅಭದ್ರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಸಂಘಟಿತರಾಗಿರಬೇಕು ಎಂದು ತಿಳಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಜಿಲ್ಲಾ ಉಪಾಧ್ಯಕ್ಷ ಶಿವಾಜಿರಾವ್ ಢಾಗೆ ಇದ್ದರು.

Leave a Reply

Your email address will not be published. Required fields are marked *