ಮದ್ದೂರಿನಲ್ಲಿ ಶಾಂತಿಯುತ ಮತದಾನ

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಮತದಾನ ನಡೆಯಿತು.

ಬೆಳಗ್ಗೆ 7ಗಂಟೆಗೆ ಆರಂಭಗೊಂಡ ಮತದಾನ ಆರಂಭದಲ್ಲಿ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ನಂತರ ಬಿರುಸಿನ ಮತದಾನ ನಡೆಯಿತು. ಮತಗಟ್ಟೆಯ ಬಳಿ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಅಂತಿಮ ಕಸರತ್ತು ನಡೆಸುತ್ತಿದದ್ದು ಕಂಡು ಬಂತು.

ಕೈ ಕೊಟ್ಟ ಮತಯಂತ್ರ: ತಾಲೂಕಿನ ಹೆಮ್ಮನಹಳ್ಳಿಯ ಮತಗಟ್ಟೆ 57, ಕೊಪ್ಪ ಸಮೀಪದ ಅರಗಿನಮೇಳೆ ಗ್ರಾಮದಲ್ಲಿ ಮತಗಟ್ಟೆ ಸಂಖ್ಯೆ 202 ರಲ್ಲಿ ಮತಯಂತ್ರ ಕೆಟ್ಟು ಒಂದೂವರೆ ಗಂಟೆ ತಡವಾಗಿ ಮತದಾನ ಆರಂಭವಾಯಿತು. ರುದ್ರಾಕ್ಷಿಪುರ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಕೆಲಕಾಲ ಮತಯಂತ್ರ ಕೈ ಕೊಟ್ಟಿತು ನಂತರ ಅಧಿಕಾರಿಗಳು ಆಗಮಿಸಿ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ತಾಲೂಕಿನ ಸಾದೊಳಲು ಗ್ರಾಮದಲ್ಲಿ ಜಿಪಂ ಅಧ್ಯಕ್ಷ ನಾಗರತ್ನಸ್ವಾಮಿ ಹಾಗೂ ಪತಿ ಜೆಡಿಎಸ್ ಮೈಸೂರು ವಿಭಾಗದ ವೀಕ್ಷಕ ಎಸ್.ಪಿ.ಸ್ವಾಮಿ ಮತದಾನ ಮಾಡಿದರು. ಮಾಜಿ ಶಾಸಕಿ ಜಯವಾಣಿ ಮಂಜೇಗೌಡ ಪಟ್ಟಣದ ಮತಗಟ್ಟೆ 103 ರಲ್ಲಿ, ಮಾಜಿ ಶಾಸಕಿ ಕಲ್ಪನಾಸಿದ್ದರಾಜು ಮತಗಟ್ಟೆ 109 ರಲ್ಲಿ ಮತದಾನ ಮಾಡಿದರು. ಮಾಜಿ ಎಂಎಲ್ಸಿ ಬಿ.ರಾಮಕೃಷ್ಣ ಕೆ.ಹೊನ್ನಲಗೆರೆಯಲ್ಲಿ ಮತದಾನ ಮಾಡಿದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಇನ್ನಿತರರ ಮತಗಟ್ಟೆಗಳಿಗೆ ತೆರಳಿ ಮತದಾರನ್ನು ಮಾತನಾಡಿಸಿದರು.

Leave a Reply

Your email address will not be published. Required fields are marked *