ಭದ್ರಾವತಿ: ಧರ್ಮ ಪರಿಪಾಲನೆ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಇದನ್ನು ಅರಿತರೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಬಾಳೆಹೊನ್ನೂರು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ನಗರದ ಲೋಯರ್ ಹುತ್ತಾ, ಸಹ್ಯಾದ್ರಿ ಬಡಾವಣೆಯಲ್ಲಿ ಗುರುವಾರ ಆಯೋಜಿಸಿದ್ದ 4ನೇ ವರ್ಷದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅಶೀರ್ವಚನ ನೀಡಿದರು.
ಧರ್ಮ ಪರಿಪಾಲನೆಯಿಂದ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಲು ಸಾಧ್ಯ. ಲೋಕ ಕಲ್ಯಾಣಾರ್ಥ ನೆರವೇರಿಸುವ ಇಷ್ಟಲಿಂಗ ಮಹಾಪೂಜೆ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಮಾನವ ಜನ್ಮ ಶ್ರೇಷ್ಠವಾದುದು. ಇದನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಹಿರಿಯರನ್ನು ಕಡೆಗಣಿಸಬಾರದು. ಅವರನ್ನು ಕಡೆಯವರೆಗೂ ನೋಡಿಕೊಳ್ಳಬೇಕು. ಇದು ಮಕ್ಕಳ ಜವಾಬ್ದಾರಿ. ಕುಟುಂಬದಲ್ಲಿ ಮಕ್ಕಳು, ಹಿರಿಯರು ಎಲ್ಲರೂ ಒಂದಾಗಿ ಬದುಕಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ರತ್ನಮ್ಮ ಮಹಾದೇವಪ್ಪ, ಕೃಷ್ಣಮೂರ್ತಿ, ರಂಗಸ್ವಾಮಿ, ಮನು, ಸಿದ್ದಲಿಂಗಯ್ಯ, ಕೆ.ಎಸ್.ವಿಜಯ್‌ಕುಮಾರ್, ಹಾಲೇಶ್, ಯಶವಂತ ರಾವ್ ಘೋರ್ಪಡೆ, ಎಚ್.ವಿ.ಶಿವರುದ್ರಪ್ಪ ಇತರರಿದ್ದರು.
