ನರಗುಂದ: ಯೋಗ ಮನಸನ್ನು ಶಾಂತಗೊಳಿಸುತ್ತದೆ. ಯೋಗಾಸನ ಮಾಡುವುದರಿಂದ ಏಕಾಗ್ರತೆಯ ಜತೆಗೆ ಮನುಷ್ಯ ಕ್ರಿಯಾಶೀಲನಾಗಿರುತ್ತಾನೆ. ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಎಸ್‌ವೈಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಬಿಇಡಿ ಶಿಕ್ಷಣ ಮಹಾವಿದ್ಯಾಲಯ, ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಇಡಿ ಕಾಲೇಜ್ ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಯೋಗ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಪುರಾತನ ಕಾಲದಿಂದ ಬಂದಿದ್ದರೂ ಆಧುನಿಕ ಕಾಲದಲ್ಲಿಯೂ ತುಂಬಾ ಪ್ರಸಿದ್ಧಿ ಪಡೆದಿದೆ ಎಂದರು.
ಶಿಕ್ಷಣ ಸಂಸ್ಥೆ ನಿರ್ದೇಶಕ ಎನ್.ಎಂ. ವಾಘಮೋಡೆ ಮಾತನಾಡಿದರು. ವೀಣಾ, ಶಮೀಮ, ಅಕ್ಕಮ್ಮ ವಗ್ಗರ, ವಿನೋದ ಚಲವಾದಿ, ಸೀಮಾ ಭೋವಿ ಇತರರಿದ್ದರು.