ಪಿಡಿಒ ವರ್ಗ ರದ್ದು ಆದೇಶ ಲೆಕ್ಕಕ್ಕಿಲ್ಲ

«ಜಿಪಂ, ತಾಪಂಗಳಲ್ಲೇ ಠಿಕಾಣಿ * ಗ್ರಾಪಂಗಳಿಗೆ ಸಮಸ್ಯೆ»

ಅವಿನ್ ಶೆಟ್ಟಿ ಉಡುಪಿ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳ ನಿಯೋಜನೆ, ವರ್ಗಾವಣೆ ರದ್ದುಗೊಳಿಸಿ ಮೂಲಸ್ಥಾನಗಳಿಗೆ ಹಿಂತಿರುಗುವಂತೆ ಸರ್ಕಾರ ನೀಡಿದ್ದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.

ಗ್ರಾಮದ ಅಭಿವೃದ್ಧಿಗೆ ನೇಮಕಗೊಂಡ ಪಿಡಿಒಗಳು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ, ನಿಯೋಜನೆಗೊಂಡವರನ್ನು ತಕ್ಷಣ ಮೂಲಸ್ಥಾನಕ್ಕೆ ಕಳುಹಿಸಿ ನವೆಂಬರ್ ತಿಂಗಳ ಅಂತ್ಯಕ್ಕೆ ವರದಿ ನೀಡಲು ಸರ್ಕಾರ ಸೂಚನೆ ನೀಡಿತ್ತಾದರೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಂದಾಗಿ ಈ ಪಕ್ರಿಯೆ ವಿಳಂಬವಾಗಿದೆ.

ನಿಯೋಜನೆ, ವರ್ಗಾವಣೆ ಏಕೆ?: ಕಾರ್ಯನಿರ್ವಹಿಸಬೇಕಾದ ಪಂಚಾಯಿತಿಗಳಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳೊಂದಿಗೆ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸದೆ ಇರುವ ನೌಕರರನ್ನು ತಾಲೂಕು ಪಂಚಾಯಿತಿಗೆ ನಿಯೋಜನೆ ಮಾಡಲಾಗುತ್ತಿತ್ತು. ತಾಲೂಕು ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಯಾವುದೇ ಕೆಲಸಗಳು ಸರಾಗವಾಗಿ ನಡೆಯುತ್ತಿಲ್ಲ. ಹೀಗಾಗಿ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಲೆಕ್ಕ ಸಹಾಯಕರನ್ನು ತಾಪಂ, ಜಿಪಂ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಗ್ರಾಪಂನಲ್ಲಿ ಹೆಚ್ಚಿದ ಹೊರೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ವಸತಿ ಯೋಜನೆ, ಬಾಪೂಜಿ ಸೇವಾ ಕೇಂದ್ರ, ಬೆಳೆ ಸಮೀಕ್ಷೆ, ಆಧಾರ್ ತಿದ್ದುಪಡಿ, 9/11 ಕಂದಾಯ ಸೇವಾ ಮೊದಲಾದ ಕೆಲಸಗಳಲ್ಲಿ ಪಂಚಾಯಿತಿ ಪಿಡಿಒಗಳು, ಕಾರ್ಯದರ್ಶಿ, ಲೆಕ್ಕ ಸಹಾಯಕರು ಹೈರಾಣಾಗಿದ್ದಾರೆ. ಬಹುತೇಕ ಎರಡು ಪಂಚಾಯಿತಿಗಳನ್ನು ಒಬ್ಬ ಪಿಡಿಒ ನಿರ್ವಹಿಸಬೇಕಾಗಿದೆ. ಪಿಡಿಒ ಇಲ್ಲದ ಕಡೆ ಕಾರ್ಯದರ್ಶಿ ಪಿಡಿಒ ಕೆಲಸ ಮಾಡುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗುತ್ತಿದೆ.

 ಜಿಪಂ, ತಾಪಂ ವರ್ಗಾವಣೆಗೆ ಬ್ರೇಕ್: ತಾಪಂ, ಜಿಪಂನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಮಾನಂತರ ವೇತನ ಶ್ರೇಣಿ ನೌಕರರನ್ನು ನಿಯೋಜಿಸದೆ, ಪಿಡಿಒ, ಗ್ರಾಪಂ ಸೆಕ್ರೆಟರಿಗಳನ್ನು ನಿಯೋಜಿಸಲಾಗುತ್ತಿದೆ. ಖಾಲಿ ಇರುವ ಪಂಚಾಯಿತಿಗಳಿಗೆ ಅಕ್ಕಪಕ್ಕದ ಪಂಚಾಯಿತಿ ಪಿಡಿಒಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತಿದೆ. ಇನ್ನು ಮುಂದೆ ಸರ್ಕಾರದ ಪೂರ್ವಾನುಮೋದನೆ ಇಲ್ಲದೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮಟ್ಟದಲ್ಲಿ ಯಾವುದೇ ರೀತಿಯ ವರ್ಗಾವಣೆ, ನಿಯೋಜನೆ ಮಾಡದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಯಾವ ತಾಪಂನಲ್ಲಿ ಎಷ್ಟು?: ಮೂಲಗಳ ಪ್ರಕಾರ ಉಡುಪಿ ತಾಪಂನಲ್ಲಿ 4 ಪಿಡಿಒ, 4 ಗ್ರಾಪಂ ಕಾರ್ಯದರ್ಶಿ, ಒಬ್ಬರು ಸೆಕ್ರೆಟರಿ ವಾರದಲ್ಲಿ 3 ದಿನ ಪಂಚಾಯಿತಿ ಇನ್ನು ಮೂರು ದಿನ ಗ್ರಾಪಂನಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದಾರೆ. ಕಾರ್ಕಳ ತಾಪಂ ಕಚೇರಿಯಲ್ಲಿ 3 ಪಿಡಿಒ, 2 ಗ್ರಾಪಂ ಕಾರ್ಯದರ್ಶಿ, ಉಡುಪಿ ಜಿಲ್ಲಾ ಪಂಚಾಯಿತಿಯಲ್ಲಿ 1 ಪಿಡಿಒ ಕಾರ್ಯನಿರ್ವಹಿಸುತ್ತಿದ್ದಾರೆ. ನಿಯೋಜನೆಗೊಂಡವರನ್ನು ಮೂಲಸ್ಥಾನಕ್ಕೆ ಕಳುಹಿಸಲಾಗಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ. ಕುಂದಾಪುರ ತಾಪಂ ಕಚೇರಿಯಲ್ಲಿ ನಿಯೋಜನೆಗೊಂಡ ಪಿಡಿಒ, ಕಾರ್ಯದರ್ಶಿಗಳನ್ನು ಮೂಲಸ್ಥಾನಕ್ಕೆ ನಿಯೋಜನೆಗೊಳಿಸಲಾಗಿದೆ ಎಂದು ಇಒ ಮಾಹಿತಿ ನೀಡಿದ್ದಾರೆ.

ನಿಯೋಜನೆಗೊಂಡ ಪಿಡಿಒ, ಗ್ರಾಪಂ ಕಾರ್ಯದರ್ಶಿಗಳನ್ನು ಮೂಲಸ್ಥಾನಕ್ಕೆ ಕಳುಹಿಸುವ ಬಗ್ಗೆ ಸರ್ಕಾರ ನ.23ಕ್ಕೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.
– ನಾಗೇಶ್ ರಾಯ್ಕರ್, ಜಿಪಂ ಉಪ ಕಾರ್ಯದರ್ಶಿ, ಉಡುಪಿ

ಕುಂದಾಪುರ ತಾಪಂನಲ್ಲಿ 5 ಮಂದಿ ಪಿಡಿಒ, ಗ್ರೇಡ್-2ರ ಮಂದಿ ನಿಯೋಜನೆಗೊಂಡಿದ್ದರು. ಸರ್ಕಾರದ ಆದೇಶದಂತೆ ನಿಯೋಜನೆ ರದ್ದುಗೊಳಿಸಿ, ಮೂಲಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
– ಕಿರಣ್ ಆರ್. ಪಡ್ನೆಕರ್, ಕುಂದಾಪುರ ತಾಪಂ ಇಒ