ಮನೆ ಖಾತೆ ಮಾಡಿಕೊಡಲು ವಿಳಂಬ ಆರೋಪ

ಬೀರೂರು: ಮನೆ ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿ 6 ತಿಂಗಳು ಮುಗಿದರೂ ಇನ್ನೂ ಖಾತೆ ಮಾಡಿಕೊಡಲು ಪ್ರಭಾರ ಪಿಡಿಒ ವಿಳಂಬ ಮಾಡುತ್ತಿದ್ದಾರೆ ಎಂದು ಬಿ.ಕೆ.ಹೊಸೂರು ಗ್ರಾಮಸ್ಥರು ಆರೋಪಿಸಿದರು.

ಹುಲ್ಲೆಹಳ್ಳಿ ಗ್ರಾಪಂ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಪ್ರಭಾರ ಪಿಡಿಒ ಹಾಗೂ ಕಾರ್ಯದರ್ಶಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಚರಂಡಿಯನ್ನು ಇದುವರೆಗೂ ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರರು ಐದು ವರ್ಷದಿಂದ ಇಲ್ಲಿಯೇ ಬೇರು ಬಿಟ್ಟಿರುವ ಪ್ರಭಾರ ಪಿಡಿಒ ಹಾಗೂ ಕಾರ್ಯದರ್ಶಿ ದೋಗೆಹಳ್ಳಿಯಲ್ಲೂ ಇದೇ ರೀತಿ ಮಾಡಿದ್ದು ರಸ್ತೆಯ ಅಭಿವೃದ್ಧಿಯನ್ನೇ ಮಾಡಿಲ್ಲ. ಒಂದು ವರ್ಷ ಕಳೆಯುತ್ತ ಬಂದರೂ ಕೇವಲ ಆರು ಲಕ್ಷ ರೂ. ಕಾಮಗಾರಿ ಮಾಡಲಾಗಿದೆ ಎಂದು ಆರೋಪಿಸಿದರು.

ಕೃಷಿ ಇಲಾಖೆಯಿಂದ ಸೌಲಭ್ಯ: ಕೃಷಿ ಇಲಾಖೆ ಮಾಹಿತಿ ನೀಡಿದ ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮಣ್, 5 ಎಕರೆ ಒಳಗಿರುವ ರೈತರಿಗೆ ಕೇಂದ್ರ ಸರ್ಕಾರ 6 ಸಾವಿರ ರೂ. ಸಹಾಯಧನ ನೀಡುತ್ತಿದ್ದು, ಮೊದಲ ಕಂತು 2 ಸಾವಿರ ರೂ. ವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ. ರೈತರು ಅಗತ್ಯ ಮಾಹಿತಿಯನ್ನು ಬ್ಯಾಂಕ್​ಗೆ ನೀಡಬೇಕು. ಕೃಷಿ ಇಲಾಖೆಯಲ್ಲಿ ವಿವಿಧ ಸೌಲಭ್ಯಗಳಿದ್ದು ಅವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.