ನರೇಗಾ ಕಾಮಗಾರಿ ವಿಳಂಬಕ್ಕೆ ದಂಡ ಕಾರಣ

ಚಿಕ್ಕಮಗಳೂರು: ನರೇಗಾ ಯೋಜನೆಗೆ ಸಂಬಂಧಿಸಿ ನಡೆಯುವ ಸಾಮಾಜಿಕ ಲೆಕ್ಕಪರಿಶೋಧನೆ ಸಂದರ್ಭ ಸಣ್ಣ ಲೋಪ ಕಂಡುಬಂದರೂ ಪಿಡಿಒ ಹಾಗೂ ಕೆಲವೊಮ್ಮೆ ಗ್ರಾಪಂ ಅಧ್ಯಕ್ಷರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಶುಕ್ರವಾರ ನಡೆದ ದಿಶಾ (ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆಯಲ್ಲಿ ಆರೋಪ ಕೇಳಿಬಂತು.

ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸಿ.ಟಿ.ರವಿ, ಎನ್​ಎಂಆರ್ (ನಾಮಿನಲ್ ಮಸ್ಟರ್ ರೋಲ್) ಆಗಿಲ್ಲ ಎಂದು ಫಲಾನುಭವಿಗಳಿಗೆ ಹಣ ನೀಡದಿರುವುದು ಎಷ್ಟು ಸರಿ? ಗ್ರಾಪಂ ಪಿಡಿಒ ಮಾಡುವ ಕೆಲಸ ನೆಪವಾಗಿಸಿಕೊಂಡು ಫಲಾನುಭವಿಗಳಿಗೆ ಹಣ ನೀಡಲು ವಿಳಂಬ ಮಾಡಲಾಗುತ್ತಿದೆ. ಫಲಾನುಭವಿಗಳಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದಾಗ ಹಲವರು ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಸಿ.ಸತ್ಯಭಾಮಾ, ಎನ್​ಎಂಆರ್ ಆಗದಿದ್ದಾಗ ಒಂಬುಡ್ಸ್​ಮನ್ ಹಣ ನೀಡುವುದನ್ನು ತಡೆಹಿಡಿಯಲು ಸೂಚಿಸುತ್ತಾರೆ. ಒಂಬುಡ್ಸ್​ಮನ್ ಜಿಪಂ ನಿಯಂತ್ರಣದಲ್ಲಿಲ್ಲ ಎಂದರು.

ಈ ಕಾರಣಕ್ಕಾಗಿಯೇ ನರೇಗಾ ಕಾಮಗಾರಿ ವಿಳಂಬವಾಗುತ್ತಿದೆ. ಒಂಬುಡ್ಸ್​ಮನ್ ಮತ್ತು ಸಾಮಾಜಿಕ ಲೆಕ್ಕಪರಿಶೋಧಕರಿಗೆ ಅಂಜಿ ಪಿಡಿಒಗಳು ಮತ್ತು ಅಧ್ಯಕ್ಷರು ಸಹಿ ಮಾಡಲು ಮುಂದಾಗುತ್ತಿಲ್ಲ. ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗದವರು ಸಣ್ಣ ಲೋಪಗಳನ್ನೂ ಎತ್ತಿಹಿಡಿಯುತ್ತಾರೆ. ಅವರನ್ನು ಜಿಪಂ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್, ತರೀಕೆರೆ ತಾಪಂ ಅಧ್ಯಕ್ಷೆ ಪದ್ಮಾವತಿ ಸೇರಿ ಹಲವರು ಆಗ್ರಹಿಸಿದಾಗ ಇದನ್ನು ಸರ್ಕಾರದ ಗಮನಕ್ಕೆ ತರಲು ತೀರ್ವನಿಸಲಾಯಿತು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಇದೇ ಪರಿಸ್ಥಿತಿ ಮುಂದುವರಿದರೆ ನರೇಗಾ ಕಾಮಗಾರಿ ಕೈಗೊಳ್ಳಲು ಗ್ರಾಪಂಗಳು ಮುಂದೆ ಬರುವುದಿಲ್ಲ. ಇದನ್ನು ಸರಿಪಡಿಸಬೇಕು. ನರೇಗಾದಲ್ಲಿ ಗೊಬ್ಬರದ ಕಾಂಪೋಸ್ಟ್ ಗುಂಡಿ ತೆಗೆಯಲು ವೈಯಕ್ತಿಕ ಫಲಾನುಭವಿಗಳಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಮಲೆನಾಡಲ್ಲಿ ಮಳೆಯಿಂದಾಗಿ ಅನೇಕ ಬಿಪಿಎಲ್ ಕುಟುಂಬಗಳು ಮನೆ ಕಳೆದುಕೊಂಡಿವೆ. ಹಾಗೆಯೇ ಮನೆಗಳಿಗೆ ತಡೆಗೋಡೆ ನಿರ್ವಿುಸಲು ಈ ಯೋಜನೆಯಡಿ ಅವಕಾಶವಿಲ್ಲ. ಇವುಗಳನ್ನು ಮಲೆನಾಡು ಭಾಗದಲ್ಲಿ ಸೇರಿಸಲು ಕೇಂದ್ರಕ್ಕೆ ಸಂಸದರು ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಮೂಡಿಗೆರೆ ತಾಲೂಕಿನಲ್ಲಿ ಶೇ.40ರಷ್ಟು ನರೇಗಾ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದರು.

ಸರಿಯಾದ ಮಾಹಿತಿ ತನ್ನಿ: ಜಿಲ್ಲೆಯಲ್ಲಿ 56 ಸಾವಿರ ಕುಟುಂಬಗಳಿಗೆ ಅಡುಗೆ ಅನಿಲ ನೀಡಬೇಕಾಗಿದ್ದು, 21 ಸಾವಿರ ಕುಟುಂಬಕ್ಕೆ ಅಡುಗೆ ಅನಿಲ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದನ್ನು ನಿರಾಕರಿಸಿದ ಸಂಸದೆ ಶೋಭಾ ಕರಂದ್ಲಾಜೆ, ನನಗೆ ತೈಲ ಕಂಪನಿಗಳು ನೀಡಿರುವ ವರದಿಯಂತೆ ಇನ್ನೂ ಹೆಚ್ಚಿನ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡಲಾಗಿದೆ. ಸಭೆಗೆ ಬರುವಾಗ ಸರಿಯಾದ ಮಾಹಿತಿ ತನ್ನಿ ಎಂದರು.

ಗದ್ದೆಗಳನ್ನು ನರೇಗಾಕ್ಕೆ ಒಳಪಡಿಸಿ: ಜಿಲ್ಲೆಯಲ್ಲಿ ಭತ್ತ ಬೆಳೆಯುವ ಗದ್ದೆಗಳಿಗೆ ಪುನಶ್ಚೇತನ ನೀಡುವ ಸಲುವಾಗಿ ನರೇಗಾ ಕಾಮಗಾರಿಗೆ ಸೇರಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದರು. ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆನಾಡು ಭಾಗದ ಭತ್ತದ ಗದ್ದೆಗಳು ಮಣ್ಣಿನಿಂದ ಆವೃತವಾಗಿವೆ. ಇದನ್ನು ಸರಿಪಡಿಸಲು ಪ್ರಯಾಸಪಡಬೇಕಾದ ಅಗತ್ಯವಿದೆ. ಗದ್ದೆಗಳನ್ನು ಮತ್ತೆ ಸುಸ್ಥಿತಿಗೆ ತರಲು ನರೇಗಾ ಯೋಜನೆಯಡಿ ಸೇರಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಬಿಪಿ, ಶುಗರ್​ಗೆ ಮಾತ್ರೆ ಇಲ್ಲ: ಜನೌಷಧ ಕೇಂದ್ರಗಳಲ್ಲಿ ಅಗತ್ಯವಾದ ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಔಷಧಗಳು ಲಭ್ಯವಿಲ್ಲ. ಕೇಳಿದಾಗಲೆಲ್ಲ ಇಂಡೆಂಟ್ ಹಾಕಿದ್ದೇವೆ ಎನ್ನುತ್ತಿದ್ದಾರೆ. ತೀರಾ ಅಗತ್ಯವಿರುವ ಔಷಧಗಳು ಕೇಂದ್ರದಲ್ಲಿ ದೊರಕುವಂತೆ ಮಾಡಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಕೆ.ಶ್ರೀರಂಗಯ್ಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನೌಷಧ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಸಿಬ್ಬಂದಿ ನೇಮಕವಾಗಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂದಾಗ ಈ ಬಗ್ಗೆ ಜಿಲ್ಲಾಧಿಕಾರಿಗಳೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಸಭೆ ಸೂಚಿಸಿತು.

ಪೊಟ್ಯಾಷ್ ಕೊರತೆ: ಜಿಲ್ಲೆಗೆ 300 ಟನ್ ಪೊಟ್ಯಾಷ್ ಬಿಡುಗಡೆಯಾಗಿದ್ದು, ಇನ್ನೆರಡು ದಿನದಲ್ಲಿ ತಲುಪಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಶೇಖರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್, ಪೊಟ್ಯಾಷ್ ಬೆಲೆಯನ್ನು 700 ರೂ.ನಿಂದ 900ಕ್ಕೆ ಏರಿಸಲಾಗಿದೆ. ಹೀಗಾಗಿ ದಾಸ್ತಾನಿದ್ದ ಪೊಟ್ಯಾಷ್ ಅನ್ನು ವಿತರಿಸುತ್ತಿಲ್ಲ ಎಂದರು. ಜಿಲ್ಲಾಧಿಕಾರಿ ಮಾತನಾಡಿ, ಈಗಿರುವ ದಾಸ್ತಾನನ್ನು ಹಳೆಯ ಬೆಲೆಗೆ ವಿತರಿಸುವಂತೆ ನೋಡಿಕೊಳ್ಳಲು ಜಂಟಿ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಕೇಂದ್ರಕ್ಕೆ ಎಚ್​ಡಿಡಿ ಪತ್ರ: ರಾಜ್ಯದ ಮಲೆನಾಡು ಭಾಗದ ರಸ್ತೆಗಳ ನಿರ್ಮಾಣ ಹಾಗೂ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಾಜಿ ಪ್ರಧಾನಿ, ಸಂಸದ ಎಚ್.ಡಿ.ದೇವೇಗೌಡ ತಿಳಿಸಿದರು.

ಅತಿವೃಷ್ಟಿಯಿಂದಾಗಿ ರಾಜ್ಯದ ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ರಸ್ತೆ ನಿರ್ವಣ, ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಇದಕ್ಕೆ ವಿಶೇಷ ಪ್ಯಾಕೇಜ್ ಅಗತ್ಯ. ಈ ಸಂಬಂಧ ಆದ್ಯತೆ ನೀಡುವಂತೆ ಕೇಂದ್ರವನ್ನು ಕೋರುವುದಾಗಿ ತಿಳಿಸಿದರು. ಹಿಂದೆ ಇದ್ದ ಮಲೆನಾಡು ಅಭಿವೃದ್ಧಿ ಮಂಡಳಿ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಿ ಆ ಮೂಲಕ ಹಣ ಬಿಡುಗಡೆ ಮಾಡಬೇಕಿದೆ ಎಂದು ತಿಳಿಸಿದರು.