ಹನಗೋಡು: ಹುಣಸೂರು ತಾಲೂಕಿನ ಹನಗೋಡು ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರ ನಡುವೆ ಅಭಿವೃದ್ಧಿ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪಿಡಿಒ ಡಾ.ಅನಿತಾ ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡಿರುವ ಪ್ರಕರಣ ನಾಲ್ಕು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ನ.14ರಂದು ಗ್ರಾಪಂನಲ್ಲಿ ಸರ್ಕಾರಕ್ಕೆ ಜಮಾ ಮಾಡಬೇಕಾದ 50 ಸಾವಿರ ರೂ. ವ್ಯತ್ಯಾಸವಾಗಿದ್ದು, ಈ ಬಗ್ಗೆ ಕಚೇರಿ ಸಿಬ್ಬಂದಿ ಹಾಗೂ ಪಿಡಿಒ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ, ಅನಿತಾ ಹಾಗೂ ಕಚೇರಿ ಸಿಬ್ಬಂದಿಯೊಂದಿಗೆ ಅಧ್ಯಕ್ಷ ಚನ್ನಯ್ಯ ಮಾತುಕತೆ ನಡೆಸಿ ಇಬ್ಬರೂ ಸೇರಿ ಇಂತಿಷ್ಟು ಹಣವನ್ನು ಬ್ಯಾಂಕಿಗೆ ಕಟ್ಟಲು ತಾಕೀತು ಮಾಡಿದ್ದರು. ಈ ನಡುವೆ ಚನ್ನಯ್ಯ, ಪಿಡಿಒ ಅನಿತಾ ನಡುವೆ ಅಭಿವೃದ್ಧಿ ವಿಚಾರದಲ್ಲಿಯೂ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಪಿಡಿಒ ತಮ್ಮ ಪಾಲಿನ ಹಣ ಕಟ್ಟಿದ್ದರು.
ಆದರೆ ಸಿಬ್ಬಂದಿ ಕಟ್ಟಿರಲಿಲ್ಲ. ನನ್ನ ಕೈಲಿ ಕಟ್ಟಿಸಿದ್ದೀರಿ, ಸಿಬ್ಬಂದಿ ಹಣ ಕಟ್ಟದೆ ತಡ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರ ಬಳಿ ಅನಿತಾ ಹೇಳಿದ್ದಾರೆ. ಆಗ ಅಧ್ಯಕ್ಷ ಚನ್ನಯ್ಯ, ‘ಸಿಬ್ಬಂದಿಗೆ ಸಂಬಳ ಆಗಿಲ್ಲ. ಅವರು ತೊಂದರೆಯಲ್ಲಿದ್ದಾರೆ. ಸ್ವಲ್ಪ ದಿನ ನೀವೇ ಅನುಸರಿಸಿಕೊಂಡು ಹೋಗಿ’ ಎಂದು ಸಮಾಧಾನ ಹೇಳುತ್ತಿದ್ದಂತೆ ಚೀರಾಡಿದ ಪಿಡಿಒ ‘ನಿಮ್ಮ ಮಾತು ಕೇಳಿ ನಾನು ಹಾಳಾದೆ’ ಎಂದು ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡಿದ್ದಾರೆ. ಈ ಘಟನಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.