ಪಿಸಿಒಡಿ ಹತೋಟಿ ಹೇಗೆ?

| ಡಾ. ವೆಂಕಟ್ರಮಣ ಹೆಗಡೆ

ಇತ್ತೀಚೆಗೆ ಶೇ. 5ರಷ್ಟು ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ ಪಿಸಿಒಡಿ. ಇದರ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಹೆಚ್ಚಾದ ತೂಕ ಮತ್ತು ಹೊಟ್ಟೆಯ ಭಾಗದ ಬೊಜ್ಜು ಪರೋಕ್ಷವಾಗಿ ಪಿಟ್ಯೂಟರಿ ಗ್ರಂಥಿ, ತನ್ಮೂಲಕ ಅಂಡಾಶಯದ ಮೇಲೆ ತೊಂದರೆ ಮಾಡುತ್ತದೆ. ಇದು ಇನ್ಸುಲಿನ್ ರೆಸಿಸ್ಟೆನ್ಸ್​ಗೆ ಕೂಡ ಕಾರಣವಾಗುತ್ತದೆ ಹಾಗೂ ಆಂಡ್ರೋಜನ್​ನ ಹೆಚ್ಚುವಿಕೆಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಮುಖದ ಮೇಲೆ ಕೂದಲು ಬರುವುದು, ಋತುಚಕ್ರದಲ್ಲಿ ಏರುಪೇರು, ಸಂತಾನಹೀನತೆ, ಮೊಡವೆ, ಮಾನಸಿಕ ಒತ್ತಡ, ಖಿನ್ನತೆ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳುಳ್ಳ ಸಮಸ್ಯೆಗೆ ಪಿಸಿಒಡಿ ಅಥವಾ ಪಿಸಿಒಎಸ್ ಎಂಬುದಾಗಿ ಕರೆಯಲಾಗುತ್ತದೆ.

ಸರಿಯಿಲ್ಲದ ಆಹಾರಪದ್ಧತಿ ಹಾಗೂ ಜೀವನಶೈಲಿಗಳು ಸಮಸ್ಯೆ ಇನ್ನಷ್ಟು ಸಂಕೀರ್ಣಗೊಳ್ಳಲು ಕಾರಣವಾಗುತ್ತವೆ. ಸರಿಯಾದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ 7ರಿಂದ 21 ದಿನಗಳ ಕಾಲ ವೈಜ್ಞಾನಿಕವಾಗಿ ಉಪವಾಸ ಮಾಡುವುದರಿಂದ ಪಿಸಿಒಎಸ್ ನಿಯಂತ್ರಣದಲ್ಲಿ ಉತ್ತಮ ಪರಿಣಾಮ ಕಂಡುಕೊಳ್ಳಬಹುದು ಎಂದು ಮೈಕಲ್ಸೆನ್ ಎಂಬ ವೈದ್ಯವಿಜ್ಞಾನಿ ಸೂಚಿಸಿದ್ದಾರೆ. ಪಿಸಿಒಡಿಯನ್ನು ಕಡಿಮೆ ಮಾಡುವಲ್ಲಿ ಉಪವಾಸ ಚಿಕಿತ್ಸೆಯು ಬಹಳ ಸಹಾಯಕಾರಿ. ಪ್ರಕೃತಿ ಚಿಕಿತ್ಸೆ, ಜಲಚಿಕಿತ್ಸೆಗಳು ಪರಿಣಾಮಕಾರಿ ಫಲಿತಾಂಶವನ್ನು ನೀಡಬಲ್ಲವು. ತಂಪುಕಟಿಸ್ನಾನ, ತಂಪುಪಟ್ಟಿ, ಇಮ್ಮರ್ಷನ್ ಬಾತ್, ಅಲ್ಟರ್​ನೇಟ್ ಪ್ಯಾಕ್ ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು. ಇದರೊಡನೆ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ಆಳ ವಿಶ್ರಾಂತಿಕ್ರಿಯೆಗಳನ್ನು ಮಾಡಿದಾಗ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯ. ಇದರಿಂದ ಮನಸ್ಸಿನ ಮೂಲಕ ದೇಹವನ್ನು ನಿಯಂತ್ರಿಸಲು ಅನುವು ಮಾಡಿಕೊಡಬಹುದು. ಏರೋಬಿಕ್ಸ್ ಸಹ ಒಳ್ಳೆಯ ಪರಿಣಾಮವನ್ನು ನೀಡುವುದು.

ಪ್ರತಿನಿತ್ಯ ಕಡಿಮೆ ಕ್ಯಾಲೋರಿ ಇರುವ, ಹೆಚ್ಚಿನ ಪ್ರೊಟೀನ್, ಉತ್ತಮ ಕೊಬ್ಬು ಹಾಗೂ ಕಡಿಮೆ ಕಾಬೋಹೈಡ್ರೇಟ್ ಹೊಂದಿರುವ ಆಹಾರಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಒಂದರಿಂದ ಎರಡು ತಾಸು ವ್ಯಾಯಾಮ ಅಗತ್ಯ. ಫಾಸ್ಟಫುಡ್​ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಈ ಎಲ್ಲವುಗಳ ಜತೆಗೆ ಮನೆಮದ್ದುಗಳು ಹೆಚ್ಚು ಸಹಾಯಕಾರಿ. ಮೆಂತ್ಯಪುಡಿ (ಮೆಂತ್ಯವನ್ನು ನೆನೆಸಿ, ಮೊಳಕೆ ಬರಿಸಿ, ನೆರಳಲ್ಲಿ ಒಣಗಿಸಿ ಪುಡಿ ಮಾಡಿದ್ದು), ದಾಲ್ಚಿನ್ನಿ, ಬಿಳಿ ಎಳ್ಳು, ಕಪ್ಪು ಎಳ್ಳು, ಹಾಗಲಕಾಯಿ, ತೊಂಡೆಕಾಯಿ, ನಾರಿನಂಶ ಉಳ್ಳ ಆಹಾರಗಳು, ಅಗಸೆಬೀಜ, ಅಣಬೆ ಇವುಗಳನ್ನು ಹೆಚ್ಚು ಸೇವಿಸಬೇಕು. ಎರಡು ತಾಜಾ ಅಕ್ರೂಟು ಕಾಯಿಗಳನ್ನು ತಿನ್ನಬೇಕು. ಪಿಸಿಒಡಿಯಿಂದ ಮಧುಮೇಹ, ಹೃದಯದ ಸಮಸ್ಯೆಗಳು, ಗರ್ಭಕೋಶದ ಕ್ಯಾನ್ಸರ್, ಬೊಜ್ಜು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅದಕ್ಕಾಗಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಕ್ರಮಬದ್ಧ ಆಹಾರ, ಉಪವಾಸದ ಆಯ್ಕೆ ನಮ್ಮದಾಗಲಿ.